ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರದ ಭಾರೀ ಭ್ರಷ್ಟಾಚಾರದ ವಿರುದ್ಧ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದರೆ ಅರ್ಧದಷ್ಟು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಉದ್ದೇಶ ಕೇವಲ ಕೆ.ಎಸ್ ಈಶ್ವರಪ್ಪ ರಾಜೀನಾಮೆ ಪಡೆಯುವುದು ಮಾತ್ರ ಇಲ್ಲ. 40% ಕಮಿಷನ್ ವ್ಯವಹಾರ ಎಲ್ಲಾ ಇಲಾಖೆಗಳಲ್ಲೂ ಇದೆ. ಅದರ ಬಗ್ಗೆ ಸರಿಯಾದ ಮಟ್ಟದಲ್ಲಿ ತನಿಖೆಯಾಗಬೇಕು, ಇದು ಮೊದಲು ತೊಲಗಬೇಕು ಎಂದರು.
ಇದನ್ನು ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ
ಪಿಎಸ್ಐ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ.545 ಪಿಎಸ್ಐ ಹುದ್ದೆಗೆ 70 ಸಾವಿರ ಜನ ಪರೀಕ್ಷೆ ಬರ್ದಿದಾರೆ. ಆದರೆ ಅವ್ಯವಹಾರ ಆಗಿರುವ ಬಗ್ಗೆ ಸಾಕಷ್ಟು ಜನ ಅಭ್ಯರ್ಥಿಗಳು ಗೃಹ ಸಚಿವರಿಗೆ ದೂರು ಕೊಟ್ಟಿದಾರೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಉಡಾಫೆಯ ಉತ್ತರ ನೀಡುತ್ತಾರೆ. ಆರಂಭದಲ್ಲಿ ಏನೂ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಿದ್ದರು. ಹಾಗಿದ್ದರೆ ಮತ್ತೆ ಮೊನ್ನೆ ಯಾಕೆ ಸಿಐಡಿ ತನಿಖೆಗೆ ಕೊಡಲಾಗಿದೆ. ಪಿಎಸ್ಐ ಪರೀಕ್ಷೆಯ ಪೇಪರ್ ಬಿಜೆಪಿಯ ಕಾರ್ಯದರ್ಶಿ ಶಾಲೆಯಲ್ಲಿ ಲೀಕ್ ಆಗಿದೆ. ಆ ವ್ಯಕ್ತಿಯ ಮನೆಗೆ ಗೃಹ ಸಚಿವರು ಹೋಗಿಲ್ವಾ? ಎಂದು ಆರೋಪ ಮಾಡಿದರು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 2019- 20 ಹಾಗೂ 20-21 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೋರ್ ವೆಲ್ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರ ವಿಚಾರವಾಗಿಯೂ ಗಂಭೀರ ಆರೋಪವನ್ನು ಮಾಡಿದ ಪ್ರಿಯಾಂಕ್ ಖರ್ಗೆ, ಎಸ್ಸಿ-ಎಸ್ಟಿ ಗಂಗಾ ಕಲ್ಯಾಣ ಯೋಜನೆಯಲ್ಲಿ 14,537 ಬೋರ್ ವೆಲ್ ಮಂಜೂರಾಗಿದ್ದು, ಇದರಲ್ಲಿ ಅವ್ಯವಹಾರ ಆಗಿದೆ. ಐಟಿ ರಿಟರ್ನ್ ಫೇಕ್ ಮಾಡಲಾಗಿದೆ ಎಂಬ ಆರೋಪ ಮಾಡಿದ್ದೆವು. ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆವು. ಆರ್ಡಿಪಿಆರ್ ಇಲಾಖೆಯ ಇಂಜಿನಿಯರ್ ಗೆ ತನಿಖೆಗೆ ಕೊಡಲಾಗಿದೆ, ಆ ವರದಿ ಇಂದು ಬರಬೇಕಿತ್ತು.
ಇದನ್ನು ಓದಿ: ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ; ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಪೊಲೀಸರು
ದೇವರಾಜ ಅರಸು ಹಿಂದುಳಿದ ವರ್ಗದ ಯೋಜನೆಯಲ್ಲಿ ಬೋರ್ ವೆಲ್ ಕೊರೆಯಲು 93 ಸಾವಿರ ನಿಗದಿ ಮಾಡ್ತಾರೆ, ಆದರೆ ಎಸ್ಸಿ-ಎಸ್ಟಿ ಯಲ್ಲಿ 1ಲಕ್ಷ 18 ಸಾವಿರ ನಿಗದಿ ಮಾಡ್ತಾರೆ. ನಾನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣಿಕರು ಎಂದು ತಿಳಿದಿದ್ದೆ, ಆದರೆ ಅವರ ಆದೇಶ ನೋಡಿದ್ರೆ ನನಗೆ ಅನುಮಾನ ಬರ್ತಿದೆ. ಯಾವುದೇ ತನಿಖೆ ಆಗಬೇಕಾದರೆ ಮೊದಲು ಕೆಲಸ ನಿಲ್ಲಿಸಬೇಕು. ಲೋಪ ಆಗಿಲ್ಲ ಅಂದ ನಂತರ ಕೆಲಸ ಆರಂಭಿಸಬೇಕು. ಆದರೆ ಕೆಲಸ ಏಕೆ ನಿಲ್ಲಿಸಿಲ್ಲ? ಎಂದು ಪ್ರಶ್ನೆ ಮಾಡಿದರು.
ನಮ್ಮ ಹೋರಾಟ ಕೇವಲ ಈಶ್ವರಪ್ಪ ರಾಜೀನಾಮೆ ಮಾತ್ರ ಅಲ್ಲ. 40% ಸರ್ಕಾರ, ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿ ಇದೆ. ಬೇರು ಮಟ್ಟದಲ್ಲಿ ಇದನ್ನು ಕಿತ್ತು ಬಿಸಾಡಲು ಸರ್ಕಾರ ಕಿತ್ತೊಗೆಯಬೇಕಿದೆ ಪ್ರಿಯಾಂಕ್ ಖರ್ಗೆ ಎಂದು ಆರೋಪಿಸಿದರು.