ಚಾರ್‌ಧಾಮ್ ಯಾತ್ರೆ: 13 ದಿನದಲ್ಲಿ 39 ಮಂದಿ ನಿಧನ

  • ಎರಡು ವರ್ಷಗಳ ನಿರ್ಬಂಧಕ್ಕೆ ತೆರೆ
  • ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಯಾತ್ರಾರ್ಥಿಗಳು ಭೇಟಿ
  • ಅಕ್ಸಿಜನ್ ಪ್ರಮಾಣ ಕಡಿಮೆಯಿದ್ದು, ಹೃದಯಘಾತದಿಂದ ಸಾವು
  • ಸರ್ಕಾರದಿಂದ ಅಲ್ಲಲ್ಲಿ ವೈದ್ಯಕೀಯ ಸೌಲಭ್ಯ ಸ್ಥಾಪನೆ

ಉತ್ತರಾಖಂಡ: ಎರಡು ವರ್ಷಗಳ ನಂತರ ಪ್ರಾರಂಭವಾಗಿರುವ ಚಾರ್ ಧಾಮ್ ಯಾತ್ರೆಗೆ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಇಲ್ಲಿಯವರೆಗೆ ಒಟ್ಟು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್‌ ಕಾರಣದಿಂದಾಗಿ ಚಾರ್‌ ಧಾಮ್‌ ಯಾತ್ರೆಯನ್ನು ಉತ್ತರಖಂಡ ಸರ್ಕಾರ ನಿರ್ಬಂಧ ವಿಧಿಸಿತ್ತು. 2022ರ ಮೇ 03 ರಿಂದ ಚಾರ್‌ ಧಾಮ್‌ ಯಾತ್ರೆಗೆ ಹಸಿರು ನಿಶಾನೆ ಸಿಕ್ಕಿದ ಹಿನ್ನೆಲೆಯಲ್ಲಿ, ಅನೇಕರು ಯಾತ್ರೆಯನ್ನು ಕೈಗೊಂಡಿದ್ದರು. ಅಲ್ಲಿನ ಕೇದಾರನಾಥ ಮತ್ತು ಬದರಿನಾಥ ದೇವರ ದರ್ಶನ ಮಾಡಬೇಕೆಂದು ಅನೇಕರ ಆಸೆಯಾಗಿದೆ.

ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವರ ದರ್ಶನಕ್ಕೆ ಉತ್ತರಾಖಂಡ ಸರ್ಕಾರ ವ್ಯವಸ್ಥೆ ಮಾಡಿದೆ. ಇಲ್ಲಿಗೆ ದಿನಕ್ಕೆ ಇಂತಿಷ್ಟೇ ಯಾತ್ರಾರ್ಥಿಗಳ ಪ್ರವಾಸ ನಡೆಸಬೇಕೆಂದು ನಿರ್ದಿಷ್ಟಪಡಿಸಲಾಗಿದೆ. ಕೋವಿಡ್ ಹಿನ್ನಲೆ ಈ ಮಿತಿ ಪಾಲನೆ ಕಡ್ಡಾಯವಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದರು.

ರಾಜ್ಯದ ಗಡಿಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಗಾಗುವುದು ಮತ್ತು ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದು ಈವರೆಗೆ ಕಡ್ಡಾಯ ಎಂದು ಅಧಿಕಾರಿ ತಿಳಿಸಿದ್ದಾರೆ. ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಗಾಗಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿನ ಜಾಲತಾಣದಲ್ಲಿ ಪ್ರಯಾಣಿಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.

ಇದುವರೆಗೆ ಬದರಿನಾಥಕ್ಕೆ 15,000, ಕೇದಾರನಾಥಕ್ಕೆ 12,000, ಗಂಗೋತ್ರಿಗೆ 7,000 ಮತ್ತು ಯಮುನೋತ್ರಿಗೆ 4,000 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಈ ವರ್ಷ ಕೋವಿಡ್‌ ನಿಯಮಾವಳಿಗಳು ಮತ್ತಷ್ಟು ಸಡಿಲಿಕೆಯಾಗುತ್ತಿರುವುದರಿಂದ ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ಬರುವ ಸಾಧ್ಯತೆಯಿದೆ ಎಂದು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಆದರೆ, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಆರೋಗ್ಯದಲ್ಲಿ ಸದೃಡತೆ ಹೊಂದದ ವ್ಕಕ್ತಿಗಳಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇರುವುದರಿಂದ ಹೃದಯಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಉತ್ತರಖಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಈ ಯಾತ್ರೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು, ಐಟಿಬಿಪಿ ಪ್ರದೇಶದಲ್ಲಿರುವ ತನ್ನ ವಿಪತ್ತು ನಿರ್ವಹಣಾ ತಂಡಗಳಿಗೂ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಸ್ಥಳಗಳಲ್ಲಿ ಆಮ್ಲಜನಕ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ವೈದ್ಯಕೀಯ ತಂಡಗಳನ್ನು ಅಲ್ಲಲ್ಲಿ ನಿಯೋಜಿಸಲಾಗಿದೆ ಮತ್ತು ರಾಜ್ಯ ಆಡಳಿತದ ಸಹಾಯದಿಂದ, ವೈದ್ಯಕೀಯ ತುರ್ತು ಸೇವೆಗಳನ್ನು ಅಳವಡಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *