ಕೋವಿಡ್-19ರ ಮಹಾಸೋಂಕಿನ ಸಮಯದಲ್ಲಿ ಚುನಾವಣಾ ರ‍್ಯಾಲಿಗಳನ್ನು ಮಾಡಲು ಅನುಮತಿ ನೀಡಿದ ಭಾರತ ಚುನಾವಣಾ ಆಯೋಗದ ವಿರುದ್ಧ ಮದರಾಸು ಉಚ್ಛ ನ್ಯಾಯಾಲಯ ತೀವ್ರವಾಗಿ ಛಾಟಿ ಬೀಸಿದೆ.
ಚುನಾವಣಾ ಆಯೋಗದ ನ್ಯಾಯವಾದಿಯ ವಿರುದ್ಧ ಕೋಪದಿಂದ “ನಿಮ್ಮ ಸಂಸ್ಥೆಯೇ ಕೋವಿಡ್-19ರ ಎರಡನೇ ಅಲೆಗೆ ಪ್ರಮುಖ ಹೊಣೆ” ಎಂದು ಮುಖ್ಯ ನ್ಯಾಯಾಧೀಶರಾದ ಸಂಜೀಬ್ ಬ್ಯಾನರ್ಜಿ ಗುಡುಗಿದರು.
“ನಿಮ್ಮ ಅಧಿಕಾರಿಗಳ ಮೇಲೆ ಬಹುಶಃ ಕೊಲೆ ಆಪಾದನೆ ಹೊರಿಸಿ ಪ್ರಕರಣ ದಾಖಲಿಸಬೇಕಾಗಬಹುದು” ಎಂದು ಹೇಳಿದರು. ಕೋರ್ಟಿನ ಆದೇಶವಿದ್ದಾಗಲೂ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈರ್ಸ್ ಬಳಸುವುದು ಮುಂತಾದ ಕೋವಿಡ್ ನಿಯಮಗಳನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜಾರಿ ಮಾಡುವಲ್ಲಿ ವಿಫಲರಾಗಿದ್ದೀರಿ. “ಚುನಾವಣಾ ಬಹಿರಂಗ ಸಭೆಗಳು ನಡೆಯುತ್ತಿರುವಾಗ ನೀವು ಬೇರೆ ಗ್ರಹದಲ್ಲಿದ್ದಿರೋ” ಎಂದು ಚುನಾವಣಾ ಆಯೋಗದ ನ್ಯಾಯವಾದಿಯನ್ನು ಕೇಳಿದರು.
ಮತ ಎಣಿಕೆಯ ದಿನ ಈ ಕೆಳಗಿನ ನಿಯಮಗಳನ್ನು ಪಾಲಿಸದಿದ್ದರೆ ಮೇ 2, 2021ರ ಮತ ಎಣಿಕೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗರಿಕರು ಬದುಕಿದ್ದರೆ ತಾನೇ ಮತದಾನ ಮಾಡಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅನುಭವಿಸಲು ಸಾಧ್ಯ ಎಂದು ಕೂಡ ಹೇಳಿದರು.
ಇವತ್ತಿನ ಸನ್ನಿವೇಶದಲ್ಲಿ ಜನರು ಬದುಕುಳಿಯುವುದು ಮತ್ತು ಅವರನ್ನು ರಕ್ಷಿಸುವುದು ಬಹಳ ಮುಖ್ಯ, ಉಳಿದೆಲ್ಲವೂ ಆಮೇಲೆ ಎಂದರು. ಏಪ್ರಿಲ್ 30ರ ಒಳಗೆ ಎಣಿಕೆಯ ದಿನ ನಿಯಮಗಳ ಪಾಲನೆಯ ಬಗೆಗಿನ ನಿಮ್ಮ ನೀಲಿನಕ್ಷೆಯನ್ನು ಸಲ್ಲಿಸಿ ಎಂದು ಭಾರತ ಚುನಾವಣಾ ಆಯೋಗ ಹಾಗೂ ತಮಿಳುನಾಡು ಚುನಾವಣಾಧಿಕಾರಿಯವರಿಗೆ ಆದೇಶ ನೀಡಿತು ಮದರಾಸು ಹೈಕೋರ್ಟ್.
ಮುಂದಿನ ವಿಚಾರಣೆ ಎಪ್ರಿಲ್ 30ರಂದು ನಡೆಯಲಿದೆ.
ಇದಕ್ಕೆ ಮೊದಲು ಕಲ್ಕತ್ತಾ ಹೈಕೋರ್ಟ್ ರಾಜಕೀಯ ರ‍್ಯಾಲಿಗಳಲ್ಲಿ ಕೊವಿಡ್-19ಕ್ಕೆ ಅನುಗುಣವಾದ ವರ್ತನೆಯನ್ನು ಚುನಾವಣಾ ಆಯೋಗ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತು, ಕೇವಲ ಸುತ್ತೋಲೆಗಳನ್ನು ಹೊರಡಿಸುವುದು ಮತ್ತು ಸಭೆಗಳನ್ನು ನಡೆಸಿದರಷ್ಟೆ ಅದು ತನ್ನ ಗುರುತರ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುವುದಿಲ್ಲ. ಈ ಸುತ್ತೋಲೆಗಳನ್ನು ಜಾರಿಗೆ ತರಲು ಅದು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲು ಅಸಮರ್ಥವಾಗಿದೆ ಎಂದು ನ್ಯಾಯಾಲಯ ಟೀಕಿಸಿತ್ತು.
ಸುದ್ದಿ ಮೂಲ: ಲೈವ್ ಲಾ ಮತ್ತು ದಿ ಲೀಫ್‌ಲೆಟ್ ಸುದ್ದಿ ಜಾಲ