ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗ್ತಿದ್ದು, ಆಕ್ಸಿಜನ್ ಕೊರತೆ ಉಂಟಾಗಿದೆ. ಈ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಪಿಎ ರಮೇಶ್ ಅವರು ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.
ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಮೇಶ್ ಮೃತರಾಗಿದ್ದು, ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಗದಿರುವುದೇ ಅವ್ರ ಸಾವಿಗೆ ಕಾರಣ ಎನ್ನಲಾಗ್ತಿದೆ. ಅಂದ್ಹಾಗೆ, ರಮೇಶ್ ಅವರಿಗೆ ಏ. 13ರಂದು ಕೋವಿಡ್ ದೃಢಪಟ್ಟಿತ್ತು. ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಕಾರಣ, ಸೋಮವಾರ ಬೆಳಿಗ್ಗೆ 9.30ಕ್ಕೆ ಸಾವು ಸಂಭವಿಸಿದೆ.
ಇನ್ನು ಅವರ ಸಾವಿನ ಬಗ್ಗೆ ಪ್ರತಿಕ್ರಿಸಿದ ಸ್ನೇಹಿತರೊಬ್ಬರು, ‘ರಮೇಶ್ ಅವರಿಗೆ ಉಸಿರಾಟ ಸಮಸ್ಯೆ ಎದುರಾದಾಗ, ತಕ್ಷಣ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಸಿಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದೆ. ಸಚಿವರ ಆಪ್ತ ಸಹಾಯಕರಿಗೇ ಆಕ್ಸಿಜನ್ ಸಿಗಲಿಲ್ಲ ಎಂದ ಮೇಲೆ ಜನಸಾಮಾನ್ಯರ ಸ್ಥಿತಿ ಏನು’ ಎಂದು ಪ್ರಶ್ನಿಸಿದ್ದಾರೆ.
ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ ಎಚ್. ಜೆ ರಮೇಶ್ ಇನ್ನಿಲ್ಲ. ರಮೇಶ್ ಸುಮಾರು ೮ ವರ್ಷ ನನ್ನೊಡನೆ ನಗು ನಗುತ್ತಾ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆ ನನಗೆ ಅಪಾರ ನೋವು ತಂದಿದೆ ಎಂದು ಸಚಿವ ಎಸ್. ಸರೇಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.