ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ – ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ – ಸೋಂಕಿತರ ಸಮಸ್ಯೆ ಕೇಳೋರು ಯಾರು?

ಈ ವಾರದಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಿರುವ ತಜ್ಞರು, ರಿಸ್ಕ್‌ ತೆಗೆದುಕೊಳ್ಳದ ಸರಕಾರ, ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಸಚಿವರುಗಳು. 

ಬೆಂಗಳೂರು : ಕೊರೋನಾ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು,  ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ 7584 ಪ್ರಕರಣಗಳು ಪತ್ತೆಯಾಗಿದೆ. ಇದು ಕೊರೋನಾ ಸೋಂಕು ಆರಂಭವಾದ ನಂತರ ಪತ್ತೆಯಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ 5800ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು ಈವರೆಗಿನ ದಾಖಲೆಯಾಗಿತ್ತು.

ಶನಿವಾರ 4384 ಪ್ರಕರಣಗಳು ದೃಢಪಟ್ಟಿದ್ದರೆ, ಭಾನುವಾರ 7584 ದಾಖಲಾಗುವ ಮೂಲಕ ಒಂದೇ ದಿನ 3200ಕ್ಕೂ ಹೆಚ್ಚಿನ ಪ್ರಕರಣಗಳು ಹೆಚ್ಚಳವಾಗಿವೆ. ಇದೇ ದಿನ 27 ಜನರು ಮೃತ ಪಟ್ಟಿದ್ದಾರೆ. ಭಾನುವಾರದ ಪ್ರಕರಣಗಳು ಸೇರಿ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 4,81,982 ತಲುಪಿದೆ. 27 ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 4,815ಕ್ಕೇರಿದೆ. 177 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ 1184 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 4,25,930 ಮಂದಿ ಗುಣಮುಖರಾಗಿದ್ದಾರೆ. ಶನಿವಾರ 44,863 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 51,236ಕ್ಕೆ ಹೆಚ್ಚಳವಾಗಿದೆ. ಇದು ಯುಗಾದಿ ಹಬ್ಬದ ವಿಶೇಷವಾಗಿ ಶಾಪಿಂಗ್‌ ಮಾಡುವವರು, ಬಟ್ಟೆ ಬರೆ ಕೊಳ್ಳುವವರು, ಸೊಪ್ಪು, ತರಕಾರಿ, ದಿನಸಿ ಪದಾರ್ಥಗಳ ಖರೀದಿಗಾಗಿ ಮಾರುಕಟ್ಟೆಗೆ ತೆರಳುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ.

ಹಾಸಿಗೆ ಕೊರತೆ :ಬಿಬಿಎಂಪಿ ಕೊರೋನಾ ಹಾಸಿಗೆ ನಿರ್ವಹಣಾ ವ್ಯವಸ್ಥೆಯ ಪ್ರಕಾರ ಬೆಂಗಳೂರಿನಲ್ಲಿ 197 ಐಸಿಯು ಬೆಡ್‌ಗಳಿದ್ದು, 169 ಐಸಿಯು ಬೆಡ್‌ ಭರ್ತಿಯಾಗಿದೆ. ಉಳಿದಂತೆ ಕೇವಲ 28 ಬೆಡ್‌ಗಳು ಮಾತ್ರ ಲಭ್ಯವಿವೆ. ಸೋಂಕು ಏರುಗತಿಯ ಆರಂಭಿಕ ಹಂತದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ, ಮುಂದಿನ ವಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಈ ವೇಳೆ ಸೋಂಕಿತರ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ. ಮತ್ತೊಂದೆಡೆ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಶೇ.50 ರಷ್ಟುಬೆಡ್‌ಗಳನ್ನು ಕೊರೋನಾಗೆ ಮೀಸಲಿಡುವಂತೆ ಸರ್ಕಾರ ಸೂಚಿಸಿದ್ದರೂ, ಏಕಾಏಕಿ ಕೊರೋನೇತರ ರೋಗಿಗಳನ್ನು ಖಾಲಿ ಮಾಡಿಸಲು ಸಾಧ್ಯವಿಲ್ಲ. ಕನಿಷ್ಠ 2-3 ವಾರಗಳ ಕಾಲಾವಕಾಶ ಬೇಕು ಎಂದು ಖಾಸಗಿ ಆಸ್ಪತ್ರೆಗಳು ಅಸಹಾಯಕತೆ ವ್ಯಕ್ತಪಡಿಸಿವೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸದೇ ಮಾರ್ಕೆಟ್‌ ಮುಂತಾದ ಕಡೆ ಎಗ್ಗಿಲ್ಲದೇ ಸಂಚರಿಸುತ್ತಿರುವುದು, ಹೆಚ್ಚಿನ ಓಡಾಟದ ಜೊತೆಗೆ ಪರೀಕ್ಷೆ ಪ್ರಮಾಣ ಜಾಸ್ತಿ ಮಾಡುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಆರೋಗ್ಯ ಇಲಾಖೆ ಹೇಳುತ್ತಿದೆ.

ನಗರದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 2,119 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಈ ಪೈಕಿ ಈಗಾಗಲೇ 1,635 ಭರ್ತಿಯಾಗಿದ್ದು, 484 ಮಾತ್ರ ಖಾಲಿ ಇವೆ. ಇವುಗಳಲ್ಲಿ ಬಹುತೇಕ ಸಾಮಾನ್ಯ ಬೆಡ್‌ಗಳು ಮಾತ್ರ ಖಾಲಿ ಇವೆ. ಐಸಿಯು ಹಾಗೂ ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳು ಲಭ್ಯತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 3,584 ಖಾಸಗಿ ಬೆಡ್‌ ವ್ಯವಸ್ಥೆ ಮಾಡಿರುವುದಾಗಿ ಹೇಳುತ್ತಿದ್ದರೂ ಕೇವಲ ಕಾಗದಕ್ಕೆ ಸೀಮಿತವಾಗಿದೆ.

ವಿಕ್ಟೋರಿಯಾ, ಬೌರಿಂಗ್‌ನಲ್ಲಿ ಐಸಿಯು ಲಭ್ಯವಿಲ್ಲ! : ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ವಿಕ್ಟೋರಿಯಾ) ಹಾಗೂ ಬೌರಿಂಗ್‌ ಆಸ್ಪತ್ರೆಯಲ್ಲಿ ಒಟ್ಟು 350 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 70 ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್‌ ಸಹಿತ ಐಸಿಯು 45 ವ್ಯವಸ್ಥೆ ಮಾಡಿದ್ದು, ಸಂಪೂರ್ಣ ಭರ್ತಿಯಾಗಿವೆ. 350 ಹಾಸಿಗೆಗಳ ಪೈಕಿ 349 ಹಾಸಿಗೆ ಭರ್ತಿಯಾಗಿದ್ದು ಸಾಮಾನ್ಯ ಬೆಡ್‌ ಸಹ ಮರೀಚಿಕೆಯಾಗಿದೆ.

 

ಆಸ್ಪತ್ರೆ ಹೆಸರು ಒಟ್ಟು ಹಾಸಿಗೆಗಳು  ಭರ್ತಿಯಾದ ಹಾಸಿಗೆಗಳು ಖಾಲಿ
ಸರ್ಕಾರಿ ಆಸ್ಪತ್ರೆ 57 52 05
ಸರ್ಕಾರಿ ವೈದ್ಯ ಕಾಲೇಜು    70 70 00
ಖಾಸಗಿ ಆಸ್ಪತ್ರೆಗಳು    18  08 10
ಖಾಸಗಿ ವೈದ್ಯ ಕಾಲೇಜು    52 39 13
ಒಟ್ಟು 197   169 28

 

ವೆಂಟಿಲೇಟರ್‌ & ಐಸಿಯು ಬೆಡ್‌ಗಳ ಲಭ್ಯತೆ : ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿನ 65 ರಲ್ಲಿ 55 ಭರ್ತಿಯಾಗಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 45 ಬೆಡ್‌ಗಳ ಪೈಕಿ ಸಂಪೂರ್ಣ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿನ 22 ಬೆಡ್‌ಗಳ ಪೈಕಿ 12 ಭರ್ತಿಯಾಗಿದ್ದು, ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 55 ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳಲ್ಲಿ 28 ಭರ್ತಿಯಾಗಿವೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿರುವ ಐಸಿಯು ಬೆಡ್ಡಗಳ ಮಾಹಿತಿ ಈ ರೀತಿ ಇದೆ

ಆಸ್ಪತ್ರೆ ಹೆಸರು ಒಟ್ಟು ಹಾಸಿಗೆಗಳು  ಭರ್ತಿಯಾದ ಹಾಸಿಗೆಗಳು ಖಾಲಿ
ಸರ್ಕಾರಿ ಆಸ್ಪತ್ರೆ 57 52 5
ಖಾಸಗಿ ಆಸ್ಪತ್ರೆಗಳು    18 08 10
ಖಾಸಗಿ ವೈದ್ಯ ಕಾಲೇಜು    52 39 13
ಒಟ್ಟು 127  99 28

 

ಇದೇ ರೀತಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಬೆಂಗಳೂರು ಮುಂಬೈ ಆಗಲು ತುಂಬಾ ಸಮಯ ಬೇಕಾಗಿಲ್ಲ. ಪ್ರಕರಣಗಳ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಬೆಡ್‌ಗಳ ತೀವ್ರ ಕೊರತೆಯಾಗಿ ಸಾವಿನ ಪ್ರಮಾಣವೂ ಹೆಚ್ಚಾಗಬಹುದು. ಹೀಗಾಗಿ ಸಾರ್ವಜನಿಕರು ಕೊರೋನಾ ನಿಯಮ ಪಾಲಿಸಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

ವಿವಿಧ ಆಸ್ಪತ್ರೆಗಳಲ್ಲಿ ಕೊರೋನಾ ಬೆಡ್‌ ಲಭ್ಯತೆ ವಿವರ:

ಆಸ್ಪತ್ರೆ ಹೆಸರು ಒಟ್ಟು ಹಾಸಿಗೆಗಳು  ಭರ್ತಿಯಾದ ಹಾಸಿಗೆಗಳು ಖಾಲಿ
ಸರ್ಕಾರಿ ಆಸ್ಪತ್ರೆ 872  763  109
ಸರ್ಕಾರಿ ವೈದ್ಯ ಕಾಲೇಜು    350 349 001
ಖಾಸಗಿ ಆಸ್ಪತ್ರೆಗಳು    316  117  199
ಖಾಸಗಿ ವೈದ್ಯ ಕಾಲೇಜು    750 492  258
ಒಟ್ಟು 2,119  1,635  484

 

ಪ್ರತಾಪ್‌ ಗೌಡ ಪಾಟೀಲ್‌ ಗೆ ಕೋವಿಡ್‌ : ಮಸ್ಕಿ ವಿಧಾನಸಭಾ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟಾನುಘಟಿ ನಾಯಕರುಗಳು ತಮ್ಮ ಅಭ್ಯರ್ಥಿಗಳ ಪರ ಮತಬೇಟೆ ನಡೆಸುತ್ತಿದ್ದಾರೆ. ಆದ್ರೆ, ಇನ್ನೇನು ಮತದಾನಕ್ಕೆ 6 ದಿನ ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‌ ಅವರಿಗೆ ಇಂದು (ಭಾನುವಾರ) ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರತಾಪ್ ಗೌಡ ಅವರಿಗೆ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಆರ್‌.ಟಿ.ಪಿ.ಸಿ ಆರ್ ಟೆಸ್ಟ್ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಗೆ ಸೋಂಕು ಧೃಡವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರಿಂದ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಬಿಜೆಪಿಯ ನಾಯಕರಿಗೆ ಕೊರೋನಾ ಭೀತಿ ಶುರುವಾಗಿದೆ. ಆದ್ರೆ, ಅದ್ಯಾವುದನ್ನು ಲೆಕ್ಕಿಸದೇ ಸಿಎಂ ಯಡಿಯೂರಪ್ಪ ಮತ್ತು ಇತರ ಹಲವು ಸಚಿವರ ಜೊತೆ ಪ್ರತಾಪ್ ಗೌಡ ಪಾಟೀಲ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಇನ್ನು ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಅವರಿಗೂ ಕೊರೋನಾ ಸೋಂಕು ತಗುಲಿದೆ.

Donate Janashakthi Media

Leave a Reply

Your email address will not be published. Required fields are marked *