ಅನ್ಯಾಯದ ಬ್ರಹ್ಮಾಸ್ತ್ರ ಬೇಡ – ಕೋಡಿಹಳ್ಳಿ, ನೋಟಿಸ್ ಗೆ ಮನನೊಂದ ಸಾರಿಗೆ ನೌಕರ ಆತ್ಮಹತ್ಯೆ
ಬೆಂಗಳೂರು: ಸಾರಿಗೆ ನೌಕರರ ಮಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೆಜೆಸ್ಟಿಕ್, ಯಶವಂತಪುರ, ಸ್ಯಾಟಲೈಟ್, ಶಾಂತಿನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ತಬ್ದವಾಗಿದೆ.
ಇನ್ನು ಬಿಎಂಟಿಸಿ ಬಸ್ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮೆಟ್ರೋದತ್ತ ಮುಖ ಮಾಡಿದ್ದಾರೆ. ಹೀಗಾಗಿ ಮೆಟ್ರೋ ಸ್ಟೇಷನ್ಗಳೆಲ್ಲಾ ತುಂಬಿ ತುಳುಕುತ್ತಿವೆ. ಅದರಲ್ಲೂ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದ ಮುಂದೆ ಪ್ರಯಾಣಿಕರು ಕ್ಯೂ ಹಚ್ಚಿ ನಿಂತಿದ್ದಾರೆ. 7 ಗಂಟೆಗೆ ಆರಂಭವಾಗಲಿರುವ ಮೆಟ್ರೋ ರೈಲು ಸಂಚಾರಕ್ಕಾಗಿ ಸುಮಾರು 6 ಗಂಟೆಯಿಂದಲೇ ಪ್ರಯಾಣಿಕರು ಕ್ಯೂನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ಅನ್ಯಾಯದ ಬ್ರಹ್ಮಾಸ್ತ್ರ ಬೇಡ: ಸಾರಿಗೆ ನೌಕರರ ಮುಷ್ಕರವನ್ನು ಹತ್ತಿಕ್ಕಲು ಅನ್ಯಾಯದ ಬ್ರಹ್ಮಾಸ್ತ್ರದ ಮಾರ್ಗಗಳನ್ನು ಸರ್ಕಾರ ಅನುಸರಿಸುತ್ತಿದೆ. ಅದನ್ನು ಬಿಟ್ಟು ಮಾತುಕತೆಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಸಾರಿಗೆ ಸಿಬ್ಬಂದಿಗೆ ನೋಟಿಸ್ ನೀಡಲಾಗುತ್ತಿದೆ. ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿರುವ ಸಿಬ್ಬಂದಿಯನ್ನು ವಜಾಗೊಳಿಸಲಾಗುತ್ತಿದೆ. ನಿಗಮ ನೀಡಿರುವ ಮನೆಗಳನ್ನು ಖಾಲಿ ಮಾಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ನೌಕರರನ್ನು ಮನೆಗಳಿಂದ ದಬ್ಬುವ ಪ್ರಯತ್ನ ಸರಿಯಲ್ಲ. ಇವೆಲ್ಲವೂ ಪ್ರಜಾಪ್ರಭುತ್ವ ವಿರೋಧಿ ನಡೆಗಳು’ ಎಂದು ಹೇಳಿದರು.
‘ಆರೋಗ್ಯದ ಕಾರಣಗಳನ್ನು ನೀಡಿ ಸೇವೆಯಲ್ಲಿರುವ ಹಿರಿಯ ನೌಕರರನ್ನು ಮನೆಗೆ ಕಳುಹಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದೆ. ಇನ್ನೊಂದೆಡೆ ನಿವೃತ್ತ ನೌಕರರನ್ನು ವಾಪಸ್ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ತರಬೇತಿ ಅವಧಿಯ ಸಿಬ್ಬಂದಿಗಳ ಕೈಗೆ ಪ್ರಯಾಣಿಕರು ಇರುವ ಬಸ್‌ಗಳನ್ನು ಕೊಡುವುದು ಸರಿಯಲ್ಲ. ಈ ಎಲ್ಲಾ ಪ್ರಯತ್ನದ ಮೂಲಕ ಸರ್ಕಾರ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ’ ಎಂದರು
‘ಮಾರ್ಚ್ ತಿಂಗಳ ವೇತನ ತಡೆ ಹಿಡಿಯುವ ಮೂಲಕ ಸಾರಿಗೆ ನೌಕರರು ಯುಗಾದಿ ಹಬ್ಬ ಆಚರಣೆ ಮಾಡದಂತೆ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಅವರು ಮಾತ್ರ ಹೋಳಿಗೆ–ತುಪ್ಪದ ಊಟ ಮಾಡಿದರೆ ಸಾಕೆ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿರುವ 76 ನಿಗಮಗಳಲ್ಲಿ 4 ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಏಕೆ ತಾರತಮ್ಯ. ಬೇರೆ ನಿಗಮಗಳ ನೌಕರರಿಗೆ ಯುಗಾದಿ ಬೋನಸ್ ದೊರೆಯುತ್ತಿದೆ. ಅದಕ್ಕೆ ವಿರೋಧ ಇಲ್ಲ. ಅವರಿಗೆ ಸರಿಸಮನಾದ ವೇತನ ಸೌಲಭ್ಯಗಳನ್ನು ನೀಡಿ ಎಂಬುದಷ್ಟೇ ನಮ್ಮ ಒತ್ತಾಯ’ ಎಂದರು.
‘ಶಾಂತಿ, ಅಹಿಂಸೆ, ಶಿಸ್ತುಬದ್ಧವಾಗಿ ಚಳವಳಿ ನಡೆಯುತ್ತಿದೆ. ಬಸ್ ನಿಲ್ದಾಣಗಳಿಗೆ ಖಾಸಗಿ ಬಸ್‌ಗಳನ್ನು ತಂದು ಕಾರ್ಯಾಚರಣೆ ಮಾಡುತ್ತಿದ್ದರೂ ಅಡ್ಡಿಪಡಿಸಲು ಬಂದಿಲ್ಲ. ಶಾಂತಿಯುತವಾಗಿ ಮುಷ್ಕರ ನಡೆಸುತ್ತಿರುವ ನೌಕರರ ವಿರುದ್ಧ ಕಠಿಣ ಕ್ರಮಗಳನ್ನು ಹೇರಬಾರದು. ಎಸ್ಮಾ, ಐಪಿಸಿ, ಸಿಆರ್‌ಪಿಸಿ ಸೆಕ್ಷನ್‌ಗಳನ್ನು ನಿಮ್ಮದೇ ನಾಗರಿಕರ ಮೇಲೆ ಹೇರುವ ಬೆದರಿಕೆ ಬೇಡ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ’ ಎಂದು ಕೋಡಿಹಳ್ಳಿ ಆಗ್ರಹಿಸಿದ್ದಾರೆ.
ಮನೆ ಖಾಲಿ ಮಾಡಿಸುತ್ತಿಲ್ಲ: ‘ಕರ್ತವ್ಯಕ್ಕೆ ಗೈರಾಗಿರುವ ಸಿಬ್ಬಂದಿಗೆ ನೋಟಿಸ್ ನೋಡಿ ಕೆಲಸಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ವಸತಿ ಗೃಹಗಳಲ್ಲಿ ಇರುವ ಸಿಬ್ಬಂದಿಯನ್ನು ಖಾಲಿ ಮಾಡಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಸ್ಪಷ್ಟಪಡಿಸಿದರು.
‘ಮುಷ್ಕರದ ಮೊರೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಸುತ್ತಿದ್ದೇವೆ. ಮನೆ ಖಾಲಿ ಮಾಡಿಸುವ ರೀತಿಯ ಪ್ರಯತ್ನ ಆಗಿದ್ದರೆ, ಹಾಗೆ ಮಾಡದಂತೆ ಸೂಚನೆ ನೀಡಲಾಗುವುದು’ ಎಂದು ಹೇಳಿದರು.
ಸಾರಿಗೆ ನೌಕರ ಆತ್ಮಹತ್ಯೆ : ಸಾರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಗದಗದಲ್ಲಿ ವಸಂತ್ (48) ಎಂಬ ಕಂಡಕ್ಟರ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥರಾದ ಅವರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆ ಬಳಿ ಜಮಾಯಿಸಿದ ಸಾರಿಗೆ ಇಲಾಖೆ ನೌಕರರು ಸರ್ಕಾರ, ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧೆಡೆ ನಿಗಮದ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಸಿಬ್ಬಂದಿಗೆ ನೊಟೀಸ್ ಜಾರಿ ಮಾಡಿದ್ದ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು.ಇದರಿಂದ ಮನನೊಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬದ ಮೂಲಗಳು ತಿಳಿಸಿವೆ.