ಹಸುಗೂಸಿನ ಶವ ಹೊರತೆಗಿಸಿದ ಅಮಾನವೀಯ ಘಟನೆಗೆ ವ್ಯಾಪಕ ಖಂಡನೆ

ಕೊರಟಗೆರೆ: ಎತ್ತಿನಹೊಳೆ ಕಾಮಗಾರಿಯ ಬ್ಲಾಸ್ಟಿಂಗ್‌ ಶಬ್ದದಿಂದ 3 ತಿಂಗಳ ಹಸುಗೂಸು ಗುಡಿಸಲಿನಲ್ಲಿಯೇ ಮೃತಪಟ್ಟಿರುವ ಆತಂಕಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಸಮೀಪದ ಜಂಪೇನಹಳ್ಳಿ ಸಮೀಪ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಸಮೀಪದ ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆಯ ಬ್ರಿಡ್ಜ್‌ನ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್‌ಲೈನ್‌ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನೆಲೆ ಶನಿವಾರ ರಾತ್ರಿ ಸ್ಥಳೀಯರಿಗೆ ಮಾಹಿತಿಯೇ ನೀಡದೇ ಬ್ಲಾಸ್ಟಿಂಗ್‌ನ ಕೆಲಸ ನಡೆದಿದೆ. ಬ್ಲಾಸ್ಟಿಂಗ್‌ ಕರ್ಕಶ ಶಬ್ದದಿಂದ ಬೆಚ್ಚಿಬಿದ್ದ 3 ತಿಂಗಳ ಹಸುಗೂಸು ಹೆಣ್ಣು ಮಗು ಮನೆಯಲ್ಲಿಯೇ ಮೃತಪಟ್ಟಿದೆ. ಬ್ಲಾಸ್ಟಿಂಗ್‌ ಸ್ಥಳದಿಂದ ಕೇವಲ 50 ಮೀಟರ್‌ ದೂರದಲ್ಲಿಯೇ ಕುಟುಂಬ ವಾಸವಿತ್ತು.

ಘಟನೆಯ ಬಗ್ಗೆ ಅರಿವೇ ಇಲ್ಲದ ಅಮಾಯಕ ದಲಿತ ಕುಟುಂಬ ತನ್ನ ಪುಟ್ಟ ಮಗುವನ್ನು ಸುವರ್ಣಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮೃತ ಮಗುವಿನ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ ವೇಳೆ ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಅಮಾನವೀಯ ಘಟನೆಯೂ ನಡೆದಿದೆ. ಆ ಜಾಗದ ಸೆಕ್ಯುರಿಟಿಯೊಬ್ಬ ಎತ್ತಿನಹೊಳೆ ಕಾಮಗಾರಿ ಶಬ್ದದ ತೀವ್ರತೆಗೆ ಮೃತಪಟ್ಟ 3 ತಿಂಗಳ ಹಸುಗೂಸಿನ ಮೃತ ಮಗುವಿನ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿ ತಾನೊಬ್ಬ ಮನುಷ್ಯನೇ ಅಲ್ಲದಂತೆ ವರ್ತಿಸಿದ್ದಾನೆ.

ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಘಟನೆಯನ್ನು ಖಂಡಿಸಿದ್ದು, ಮನುಷ್ಯನ ಜಾತಿಗ್ರಸ್ತ ಮನಸ್ಸು ಅಸ್ಪೃಶ್ಯರ ವಿರುದ್ಧ ಅಮಾನವೀಯನಾಗುವ ಆತ್ಯಂತಿಕ ಹಂತ ಇದೇ ಇರಬಹುದು. ಸತ್ತ ಮಗುವನ್ನು ಸ್ಮಶಾನದ ಗುಂಡಿಯಿಂದ ಹೊರ ತೆಗೆಸಿದ ಹೆತ್ತವರನ್ನು ಸ್ಮಶಾನದಿಂದ ಆಚೆಗೆ ಓಡಿಸಿದ ಅಮಾನವೀಯ ಘಟನೆ ಇದು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದ ದಲಿತ ಕೂಲಿಕಾರರ ಕುಟುಂಬವೊಂದರ ಹೃದಯ ವಿದ್ರಾವಕವೂ ಕರುಣಾಜನಕವೂ ಆದ ಘಟನೆ ಇದು. ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ಹತ್ತಿರದ ಮನೆಗೋಡೆಗಳು ಮಾತ್ರ ಬಿರುಕು ಬಿಟ್ಟು ಹಾಳಾಗುವುದಲ್ಲದೆ ಮನುಷ್ಯನೂ ಸೇರಿದಂತೆ ಸುತ್ತಲ ಜೀವಜಾಲಕ್ಕೂ ಪ್ರಾಣಾಂತಿಕವಾಗಿವೆ.
ಅತ್ಯಂತ ಕಡು ಬಡತನದ ದಲಿತ ಕೂಲಿಕಾರ್ಮಿಕರ ಕುಟುಂಬಕ್ಕೆ ಸೇರಿದ ಎಳೆ ಮಗುವೊಂದು ಸತ್ತಾಗ, ಮೃತ ದೆಹವನ್ನೇ ಬಲವಂತವಾಗಿ ಸ್ಮಶಾನದ ಗುಂಡಿಯಿಂದ ಹೊರಗೆ ತೆಗಿಸಿ ದೌರ್ಜನ್ಯ ಎಸಗಿದ ಮೇಲ್ಜಾತಿಯ ಕಿರಾತಕನ ವರ್ತನೆಯ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿರಿ. ಮಾನವೀಯತೆಯನ್ನು ಮರೆತ ಇಂತಹ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದ ದಲಿತ ಕೂಲಿಕಾರ್ಮಿಕರ ಕುಟುಂಬಕ್ಕೆ ನ್ಯಾಯ ಸಿಕ್ಕಬೇಕು.
ಘಟನೆಯ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಡಾ. ವಡ್ಡಗೆರೆ ನಾಗರಾಜಯ್ಯ ಮನವಿ ಮಾಡಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *