ಬಿಜೆಪಿ, ಟಿಎಂಸಿಯನ್ನು ಸಂಯುಕ್ತ ರಂಗ ಸೋಲಿಸುತ್ತದೆ – ಸೀತಾರಾಮ್‌ ಯೆಚುರಿ

ಕೋಲ್ಕತ್ತ : ನಿನ್ನೆ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಎಡಪಕ್ಷಗಳು, ಕಾಂಗ್ರೆಸ್‌ ಮತ್ತು ಐಎಸ್ಎಫ್ ಮೆಗಾ ರ್ಯಾಲಿಯನ್ನು ನಡೆಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ  ಪ್ರಚಾರ ಅಭಿಯಾನವನ್ನು ಆರಂಭಿಸಿವೆ. 15 ಲಕ್ಷಕ್ಕೂ ಹೆಚ್ಚುಜನ ಭಾಗವಹಿಸುವ ಮೂಲಕ  ಮೂರು ಪಕ್ಷಗಳು ಶಕ್ತಿ ಪ್ರದರ್ಶನವನ್ನು ನಡೆಸಿದವು.

ಕೋಲ್ಕಾತ್ತಾದಲ್ಲೀಗ ವಿಪೀರಿತ ಬಿಸಿಲು, ಸುಡುವ ಬಿಸಿಲಿನ್ನೂ ಲೆಕ್ಕಿಸದೆ  ಲಕ್ಷ-ಲಕ್ಷ ಸಂಖ್ಯೆಯಲ್ಲಿ ಬ್ರಿಗೇಡ್ ‍ಮೈದಾನಕ್ಕೆ ಪ್ರವಾಹದಂತೆ ಜನಸಾಗರ ಹರಿದು ಬರ್ತಾ ಇತ್ತು. ಮುಖಂಡರ ಭಾಷಣಗಳಿಗೆ ಪಕ್ಷದ ಕಾರ್ಯಕರ್ತರು ಚಪ್ಪಾಳೆ ಮತ್ತು ಘೋಷಣೆಗಳ ಮೂಲಕ ಭಾರೀ ಉತ್ಸಾಹವನ್ನು ತುಂಬಿದರು.  ರ್ಯಾಲಿ ಆರಂಭಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರಾಂತೀಗೀತಿಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ಹೆಚ್ಚಿಸಿದ್ದವು.

ಈ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನ ದುರಾಡಳಿತವನ್ನು ಎಳೆಎಳೆಯಾಗಿ ವಿವರಿಸಿದರು.   ಬಿಜೆಪಿ-ಆರೆಸ್ಸೆಸ್‍ನ ಕೋಮುವಾದಿ ರಥವನ್ನು ತಡೆದು ನಿಲ್ಲಿಸಬೇಕಾದರೆ  ಪಶ್ಚಿಮ ಬಂಗಾಲದಲ್ಲಿ ಟಿಎಂಸಿಯನ್ನೂ ಸೋಲಿಸಬೇಕಾಗಿದೆ, ಪಶ್ಚಿಮ ಬಂಗಾಲದಲ್ಲಿ ಕೋಮುವಾದಿ ರಥವನ್ನು ತಡೆದು ನಿಲ್ಲಿಸಿದರೆ ದೇಶದಲ್ಲಿಯೂ ಅದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು, ಕಾಂಗ್ರೆಸ್‍ ಮತ್ತು ಐಎಸ್‍ಎಫ್ ನ ಸಂಯುಕ್ತ ಮೋರ್ಚಾ ರಚನೆಗೊಂಡಿರುವುದನ್ನು ಸ್ವಾಗತಿಸಿದರು.  ದಿಲ್ಲಿಯ ಗಡಿಗಳಲ್ಲಿ ರೈತರ ಸಂಯುಕ್ತ ಕಿಸಾನ್‍ ಮೋರ್ಚಾ ಮೋದಿ ಸರಕಾರಕ್ಕೆ ಸವಾಲು ಹಾಕಿರುವಂತೆ ಪಶ್ಚಿಮ ಬಂಗಾಲದ ಈ ಸಂಯುಕ್ತ ಮೋರ್ಚಾ ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ಯಶಸ್ವಿಯಾಗಿ ಎದುರಿಸುತ್ತದೆ ಎಂದು ಅವರು ಹೇಳಿದರು. “ಇಲ್ಲಿ ಇತ್ರಿಶಂಕು ವಿಧಾನಸಭೆ ಏರ್ಪಟ್ಟರೆ ಏನು ಮಾಡುತ್ತೀರಿ ಎಂದು ಅನೇಕರು ನನ್ನನ್ನು ಕೇಳಿದ್ದಾರೆ. ಈ ಪ್ರಶ್ನೆಯನ್ನು ಟಿಎಂಸಿ ಗೆ ಕೇಳಬೇಕು ಎಂದು ನಾನು ಹೇಳಿದ್ದೇನೆ,  ಏಕೆಂದರೆ 1998ರಿಂದ ಹಲವು ಬಾರಿ ಟಿಎಂಸಿ ಯು ಎನ್‍ ಡಿಎ ಯ ಭಾಗವಾಗಿತ್ತು, ಟಿಎಂಸಿ ಮುಖಂಡರು ಅವರ ಸಂಪುಟದಲ್ಲಿ ಮಂತ್ರಿಗಳೂ  ಆಗಿದ್ದರು. ಈ ಬಾರಿಯೂ ಅಂತಹ ಅವಕಾಶ ಸಿಕ್ಕರೆ ರಾಜ್ಯದಲ್ಲಿ ಅದನ್ನೇ ಮಾಡುತ್ತಾರೆ” ಎಂದು ಸೀತಾರಾಂ ಯೆಚುರಿ ಆರೋಪವನ್ನು ಮಾಡಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ್‍ ಮಿಶ್ರ ಮಾತಾಡುತ್ತ  ಮಾಧ್ಯಮಗಳಲ್ಲಿ ತೋರಿಸುತ್ತಿರುವ ಬಿಜೆಪಿ-ಟಿಎಂಸಿ ಸೆಣಸಾಟ ಎಂಬ ಬಿಂಬ ರಾಜ್ಯದಲ್ಲಿನ ರಾಜಕೀಯವನ್ನು ಯಾವ ದಿಕ್ಕಿನತ್ತ ತಳ್ಳಬೇಕು ಎಂಬ ಕಾರ್ಪೊರೇಟ್‍ಗಳ ಆಕಾಂಕ್ಷೆಯನ್ನು ಬಿಂಬಿಸುತ್ತದೆ.  ರಾಜಕೀಯ ಪಕ್ಷಗಳ ಐಕ್ಯತೆಯಷ್ಟೇ ಸಾಲದು, ಜನಗಳ ಐಕ್ಯತೆಯನ್ನು ಸಾಧಿಸಲು ಸಂಯುಕ್ತ ಮೋರ್ಚಾ ಹುಟ್ಟಿಕೊಂಡಿದೆ.  ದುಡಿಯುವ ಜನಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಬೇಕಾಗಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಆದಿವಾಸಿಗಳು ರಾಜ್ಯದ ಜನಸಂಖ್ಯೆಯ 71ಶೇ. ರಷ್ಟಿದ್ದಾರೆ. ಪ್ರತಿಗಾಮಿ ಶಕ್ತಿಗಳು ಜನಗಳ ಐಕ್ಯತೆಯನ್ನು ಮುರಿಯಲು ಛಿದ್ರಕಾರಿ ತಂತ್ರಗಳನ್ನು ಬಳಸುತ್ತಾರೆ. ಅವನ್ನು ವಿಫಲಗೊಳಿಸಬೇಕು. ಸಂಯುಕ್ತ ಮೋರ್ಚಾ ಅಧಿಕಾರಕ್ಕೆ ಬಂದರೆ ಕೃಷಿ, ಆಹಾರ ಭದ್ರತೆ  ಮತ್ತು ಉಚಿತ ಶಿಕ್ಷಣ ಮತ್ತು ಆರೋಗ್ಯಸೇವೆಗಳನ್ನು ಒದಗಿಸಲು ಹಣ ಹೂಡಿಕೆ ಮಾಡುತ್ತದೆ ಎಂದರು. ನಮ್ಮದು ಒಂದು ಜನಪರ ಪರ್ಯಾಯ, ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಸರಕಾರೀ ಸೇವೆಯಲ್ಲಿರುವ ನಾಲ್ಕು ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿಮಾಡಲಾಗುವುದು ಎಂದರು.

ಕಾಂಗ್ರೆಸ್‍ ರಾಜ್ಯ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮತನಾಡಿದರು, ಟಿಎಂಸಿ ಮತ್ತು ಬಿಜೆಪಿ ಪರಸ್ಪರ ಕೈಮಿಲಾಯಿಸಿದ್ದಾರೆ. ಮೋದಿ ಮತ್ತು ಮಮತಾರವರ ಡಿಎನ್‍ಎ ಗಳು ಒಂದೇ ತೆರನವು ಎಂದರು. ಮುಂಬರುವ ಚುನಾವಣೆಗಳು ಮಾಧ್ಯಮಗಳು ಚಿತ್ರಿಸುವಂತೆ ಎರಡೇ ಪಕ್ಷಗಳ ನಡುವಿನ ಹೋರಾಟವಾಗಿರುವುದಿಲ್ಲ ಎಂಬುದನ್ನು ಈರ್ಯಾಲಿ ಸ್ಪಷ್ಟವಾಗಿ ತೋರಿಸಿದೆ ಎಂದರು.

ಛತ್ತೀಸ್‍ಗಡದ ಮುಖ್ಯಂತ್ರಿ ಭೂಪೇಶ್ ಬಘೇಲಾ ರ್ಯಾಲಿಯನ್ನುದ್ದೇಶಿ ಮಾತಾಡುತ್ತ, ಪ್ರಧಾನ ಮಂತ್ರಿಗಳು ನೇತಾಜಿ ಬೋಸ್‍ರವರ ಬಗ್ಗೆ ಈಗ ಬಹಳ ಮಾತಾಡುತ್ತಾರೆ, ಆದರೆ ಅವರು ಬ್ರಿಟಿಶರ ವಿರುದ್ಧ ಆಝಾದ್‍ ಹಿಂದ್‍ ಫೌಜ್‍ ರೂಪಿಸುತ್ತಿದ್ದಾಗ ಆರೆಸ್ಸೆಸ್‍ ನವರು ಅದೇ ಬ್ರಿಟಿಶರ ಬೆಂಬಲಕ್ಕೆ ನಿಂತಿದ್ದರು ಎಂದು ಲೇವಡಿ ಮಾಡಿದರು.

ಪೋಪಲ್ಸ್‌ ಬ್ರಿಗೇಡ್‌ ನಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾ, ಪಶ್ಚಿಮ ಬಂಗಾಳದ ರಾಜ್ಯ ಕಾರ್ಯದರ್ಶಿ ಸ್ವಪನ್  ಬ್ಯಾನರ್ಜಿ, ಆರ್‍.ಎಸ್‍.ಪಿ. ಯ ಪ್ರಧಾನ ಕಾರ್ಯದರ್ಶಿ ಮನೋಜ್‍ ಭಟ್ಟಾಚಾರ್ಯ ಫಾರ್ವರ್ಡ್‍ ಬ್ಲಾಕ್ ರಾಜ್ಯ ಕಾರ್ಯದರ್ಶಿ ನರೇನ್‍ ಚಟ್ಟೋಪಾಧ್ಯಾಯ ಸೇರಿದಂತೆ ಎಡಪಕ್ಷಗಳ ಮುಖಂಡರು, ಕಾಂಗ್ರೆಸ್‌ ಹಾಗೂ ಐಎಸೆಫ್‌ ನ ರಾಜ್ಯ ಮುಖಂಡರುಗಳು ಭಾಗವಹಿಸಿದ್ದರು. ಈ ಪೀಪಲ್ಸ್‌ ಬ್ರಿಗೇಡ್‌ ಕಾರ್ಯಕ್ರಮವನ್ನು ಆಯೋಜಿಸಲು ಎಡಪಕ್ಷಗಳು ಸಾಕಷ್ಟು ತಯಾರಿ ನಡೆಸಿದ್ದವು. ಪ್ರತಿ ಹಳ್ಳಿಗಳಿಗೆ, ಹೊಲಗಳಿಗೆ, ಕಾರ್ಖಾನೆಗಳಿಗೆ ಒಟ್ಟರೆ ಜನರ ಬಳಿ ಪೀಪಲ್ಸ್‌ ಬ್ರಿಗೇಡ್‌ ನ ವಿಚಾರವನ್ನು ಕೊಂಡೊಯ್ತಾ ಇದ್ರೂ ಆ ಕಾರಣಕ್ಕಾಗಿಯೇ 15 ಲಕ್ಷ ಜನ ಜಮಾವಣೆಗೊಳ್ಳಲು ಸಾಧ್ಯವಾಯಿತು.

ಈ ಬಾರಿ ಪಶ್ಚಿಮ‌ ಬಂಗಾಳದಲ್ಲಿ ಎಡಪಕ್ಷಕ್ಕೆ ವ್ಯಾಪಕ‌ ಬೆಂಬಲ ವ್ಯಕ್ತವಾಗುತ್ತಿದೆ. ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಅಷ್ಟು ಸುಲಭವಾಗಿ ಸೋಲಿಸಲು ಈ ಬಾರಿ ಸಾಧ್ಯವಿಲ್ಲ. ಹಾಗಾಗಿ ಟಿಎಂಸಿ ಗೆಲವು ಹಾಗೂ ಆಡಳಿತ ಹಿಡಿಯಲು ದುರ್ಮಾರ್ಗ ಬಳಸುತ್ತಿರುವ ಬಿಜೆಪಿಯ ಕನಸ್ಸಿಗೆ ಅಡ್ಡಿ ಆಗುವುದು ಗ್ಯಾರಂಟಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *