ಬೆಂಗಳೂರು: ಮೂರು ದಿನಗಳಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ವಿಪಕ್ಷಗಳು ನಿನ್ನೆಯಿಂದ ಆಡಳಿತ ಪಕ್ಷದ ಮೇಲೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಿವೆ. ಅಧಿವೇಶನವನ್ನು ಸೂಸುತ್ರವಾಗಿ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಕಾಗೇರಿ ಮನವಿ ಮಾಡಿದರೂ ವಿಪಕ್ಷಗಳ ಪ್ರಶ್ನೆಗಳ ಸುರಿಮಳೆ ನಿಂತಿಲ್ಲ.
ವಿಶೇಷವಾಗಿ ಕಾಂಗ್ರೆಸ್ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ಹೆಣೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ಮುಖಂಡರು ಪಕ್ಷದ ಸಚಿವರಿಗೆ ಸೂಚನೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸೂಚನೆಗಳನ್ನು ಸಚಿವರು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ಈ ಸೂಚನೆಗಳನ್ನು ಸಚಿವರಿಗೆ ನೀಡಿದ್ದಾರೆ ಎಂಬ ಮಾತುಗಳು ಬಿಜೆಯಲ್ಲಿ ಕೇಳಿ ಬರುತ್ತಿವೆ. ಹಾಗಾದರೆ ಬಿಜೆಪಿ ಮುಖಂಡರು ನೀಡಿರುವ ಸಲಹೆಗಳೇನು? ಅವು ಈ ಕೆಳಗಿನಂತಿವೆ.
- ಅಧಿವೇಶನದಲ್ಲಿ ಸಚಿವರು ಯಾವುದೇ ಕಾರಣಕ್ಕೂ ಗೈರಾಗಬಾರದು
- ತಮ್ಮ ಇಲಾಖೆಯ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು ಹಾಗೂ ವಿಧೇಯಕ ಚರ್ಚೆಯ ಸಂದರ್ಭದಲ್ಲಿ ಬಹಳಷ್ಟು ಜಾಗೃತರಾಗಿರಬೇಕು. ಹಾಗೂ ವಿಧೇಯಕ ಅಂಗೀಕಾರ ಸಂದರ್ಭದಲ್ಲಿ ವಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಲು ಸಿದ್ದತೆ ಮಾಡಿಕೊಂಡರಬೇಕು ಎಂಬ ಸೂಚನೆಯನ್ನು ನೀಡಿದೆ.
- ಸದನದ ಗೌರವ ಕಾಪಾಡುವ ಜೊತೆಗೆ, ಸದನದಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳುವಂತೆ ನಡೆದುಕೊಳ್ಳಬೇಕು.
- ಅನಾವಶ್ಯಕವಾಗಿ ಯಾವುದೇ ಗೊಂದಲದ ಚರ್ಚೆ, ಉತ್ತರ ನೀಡಿ, ಮುಜುಗರಕ್ಕೆ ಒಳಗಾಗಬೇಡಿ
- ತಮ್ಮ ಬೆಂಬಲಕ್ಕೆ ಹಿರಿಯ ಸಚಿವರು ಇದ್ದಾರೆ. ಅವರಿಂದ ಅಗತ್ಯ ಮಾರ್ಗದರ್ಶನ ಪಡೆಯಿರಿ.
- ಸರ್ಕಾರ ಹಾಗೂ ಪಕ್ಷದ ಇಮೇಜ್ ಹೆಚ್ಚಿಸುವ ಜೊತೆಗೆ ಜನಪರ ಕಾಳಜಿಯನ್ನೂ ಸದನದಲ್ಲಿ ವ್ಯಕ್ತ ಪಡಿಸಿ
- ನೂತನ ಸಚಿವರಾದರ ಮೇಲೆ ಎಲ್ಲರ ಕಣ್ಣು ಇರುತ್ತೆ. ಸದನದಲ್ಲಿ ಜಾಗರೂಕರಾಗಿ ಉತ್ತರ ನೀಡಿ.
- ಸದನದಲ್ಲಿ ಪ್ರತಿಪಕ್ಷಗಳಿಗಿಂತ ಹೆಚ್ಚಿನ ಸೌಜನ್ಯ ತೋರಿ, ಕಾಡು ಹರಟೆ, ಅನಗತ್ಯ ಸಂವಾದ, ಚರ್ಚೆ ಬೇಡವೇ ಬೇಡ.
- ಸಚಿವರು ತಮ್ಮ ಕಾರ್ಯ ದಕ್ಷತೆ ಪ್ರದರ್ಶನಕ್ಕೆ, ಇಲಾಖೆಯ ಬಗೆಗಿನ ಜ್ಜಾನ ತೋರಲು ಅಧಿವೇಶನ ಉತ್ತಮ ವೇದಿಕೆ
- ಸರ್ಕಾರದ ಆಡಳಿತ ವೈಖರಿ ಕುರಿತಾಗಿ ಚರ್ಚೆ ಮಾಡಲು ಪ್ರತಿಪಕ್ಷ ಚರ್ಚೆ ಮಾಡುತ್ತೆ. ಆ ಸಂದರ್ಭದಲ್ಲಿ ಪಾರದರ್ಶಕ ಆಡಳಿತದ ಬಗ್ಗೆ ಪ್ರಸ್ತಾಪ ಮಾಡಿ