ಬೆಂಗಳೂರು ಫೆ 17 : ಹೆದ್ದಾರಿಗಳ ಟೋಲ್ ಮೂಲಕ ಸಾಗುವ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವೆಂಬ ನಿಯಮ ಸೋಮವಾರ ರಾತ್ರಿಯಿಂದ ಜಾರಿಗೆ ಬಂದಿದೆ. ಫಾಸ್ಟ್ ಟ್ಯಾಗ್ ಕುರಿತು ಸರಕಾರದ ನಿಲುವನ್ನು ವಿರೋಧಿಸಿ ಹಲವು ಟೋಲ್ ಗೇಟ್ ನಲ್ಲಿ ವಾಹನ ಸವಾರರು ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆಯ ನಡುವೆ ಫಾಸ್ಟ್ ಟ್ಯಾಗ್ ನಿಯಮ ವಾಹನ ಸವಾರರ ತಲೆ ಬಿಸಿ ಮಾಡಿದೆ.
‘ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಶುಲ್ಕ ಕಟ್ಟಿ’ ಎನ್ನುವ ನಿಯಮದ ವಿರುದ್ಧ ಕೆಲವು ಚಾಲಕರು ಸಿಡಿದೆದ್ದರು. ಎಲ್ಲೆಡೆ ಟೋಲ್ ಸಿಬ್ಬಂದಿ ಜತೆ ಬಿರುಸಿನ ವಾಗ್ವಾದ ನಡೆಯಿತು. ನಾಗಮಂಗಲದ ಟೋಲ್‌ನಲ್ಲಿ ‘ಬೌನ್ಸರ್’ಗಳು ‘ಬೈಸಫ್ಸ್ ‘ ತೋರಿಸಿ ಸವಾರರನ್ನು ಹೆದರಿಸಿದ ಘಟನೆ ಜರುಗಿದೆ.
ಬೆಂಗಳೂರಿನಿಂದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮಾರ್ಗದ ಹೆದ್ದಾರಿಗಳಲ್ಲಿ ಸಂಚರಿಸುವವರು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವಾಗ ಫಾಸ್ಟ್ ಟ್ಯಾಗ್ ಇಲ್ಲದವರು ಹೆಚ್ಚುವರಿ ಟೋಲ್ ಕಟ್ಟಿದರು. ಈ ಮದ್ಯೆ ಅನೇಕ ಸವಾರರು ಟೋಲ್ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದರು. ನಿರಂತರ ಜಟಾಪಟಿಯಿಂದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಯಿತು.
ಸ್ಥಳೀಯರು ಟೋಲ್ ಮೂಲಕ ಸಂಚರಿಸಲು ‘ಲೋಕಲ್ ಫಾಸ್ಟ್ ಟ್ಯಾಗ್’ ಪ್ರತ್ಯೇಕವಾಗಿ ಪಡೆಯಬೇಕೆನ್ನುವ ನಿಯಮಕ್ಕೆ ಉಡುಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹೆಚ್ಚುವರಿ ಶುಲ್ಕದ ಬಿಸಿ ತಪ್ಪಿಸಲು ಕೆಲವರು ಒಳಮಾರ್ಗಗಳನ್ನು ಹಿಡಿದರು. ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವುದು ಸರಿಯಾದ ಕ್ರಮವಲ್ಲ, ವಾಹನ ಪಡೆಯುವಾಗಲೂ ನಾವು ರಸ್ತೆಗೆ ಟ್ಯಾಕ್ಸ್ ಕಟ್ಟಿರುತ್ತೇವೆ, ಬೇರೆ ಬೇರೆ ಸಂದರ್ಭದಲ್ಲೂ ಟ್ಯಾಕ್ಸ್ ಕಟ್ಟಿರುತ್ತೇವೆ. ಒಂದೆಡೆ ಪೆಟ್ರೋಲ್, ಡಿಸೈಲ್ ಏರಿಕೆಯ ಬಿಸಿ, ಇನ್ನೊಂದೆಡೆ ಟೋಲ್, ಫಾಸ್ಟ್ ಟ್ಯಾಗ್ ಬಿಸಿ ನಾವು ಯಾವುದನ್ನು ಸಹಿಸಿಕೊಳ್ಳಬೇಕು? ಆಳುವ ಸರಕಾರಗಳು ಜನರ ಹಿತ ಕಾಪಾಡುವ ಬದಲು ಅವರು ಯಾರ ಪರ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ವಾಹನ ಸವಾರ ಮುಖೇಶ್ ಆರೋಪಿಸಿದ್ದಾರೆ.