ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಇಲ್ಲವೇ ನಾವು ತಡೆ ನೀಡುತ್ತೇವೆ – ಸುಪ್ರೀಂ ಎಚ್ಚರಿಕೆ

ನವದೆಹಲಿ ಜ 11 : ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ 47 ದಿನಗಳಿಂದ  ಪ್ರತಿಭಟನೆ ನಡೆಸುತ್ತಿರುವ ವಿವಿಧ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ತೀವ್ರ ನಿರಾಸೆ ತಂದಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆ ಮೂಲಕ ಕೋರ್ಟ್ ಸರಕಾರಕ್ಕೆ ಬಹಿರಂಗವಾಗಿ ಛೀಮಾರಿ ಹಾಕಿದೆ.

ಕೃಷಿ ಕಾನೂನುಗಳ ಅನುಷ್ಠಾನವನ್ನು ಕೇಂದ್ರ ಸರ್ಕಾರವು ನಿಲ್ಲಿಸದೇ ಹೋದರೆ, ನಾವು ಅದನ್ನು ತಡೆಹಿಡಿಯುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಬೋಬಡೆ ಹೇಳಿದ್ದಾರೆ. ‘ನೀವು (ರೈತರು) ಪ್ರತಿಭಟನೆಯನ್ನು ಮುಂದುವರಿಸಬಹುದು. ಆದರೆ, ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕೆ ಎಂಬ ಪ್ರಶ್ನೆ ಇದೆ,’ ಎಂದು ಅವರು ಹೇಳಿದ್ದಾರೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. ಸರಕಾರಕ್ಕೆ ಸುಪ್ರೀಕೋರ್ಟ್ ಈ ಹಿಂದೆಯು ಕೃಷಿ ಕಾಯ್ದೆ ವಿಚಾರದಲ್ಲಿ ರೈತರು ನಡೆಸಿದ ಹೋರಾಟವನ್ನು ಹತ್ತಿಕ್ಕುವ ಹಕ್ಕು ಸರಕಾರಕ್ಕೆ ಇಲ್ಲ  ಎಂದು ಹೇಳಿತ್ತು. ಕೇಂದ್ರ ಸರಕಾರ ಕಾನೂನನ್ನು ಗೌರವಿಸುವ ಪ್ರಮುಖ ಕೆಲಸವನ್ನು ಮಾಡಬೇಕಿತ್ತು, ಆದರೆ ಅದು ಆರೀತಿ ನಡೆಸದೆ 45 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಸಂಕಷ್ಟವನ್ನು, ನೋವನ್ನು ಕೇಳಲು ಮುಂದೆ ಬರುತ್ತಿಲ್ಲ. 8 ಸುತ್ತಿನ ಮಾತುಕತೆಯು ಕಾಟಾಚಾರದಿಂದ ಕೂಡಿತ್ತೆ ಹೊರತು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಇರಲಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

‘ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯಗಳು ದಂಗೆ ಏಳುತ್ತಿವೆ‘ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬಡೆ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ತಿಳಿಸಿದ್ದು, ‘ಸರ್ಕಾರ ಪ್ರತಿಭಟನಾ ನಿರತರೊಂದಿಗೆ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ತೀವ್ರ ನಿರಾಸೆ ತಂದಿದೆ‘ ಎಂದು ಹೇಳಿದೆ. ರಾಜ್ಯಗಳಿಂದ ರೈತರು ದೆಹಲಿಯತ್ತ ಬರುತ್ತಿದ್ದರು ಇನ್ನೂ ಸರಕಾರ ನಿದ್ರೆಯಿಂದ ಎದ್ದಿಲ್ಲ ಇದು ನಿರಾಸೆಯಿಂದ ಕೂಡಿದೆ. ಸರಕಾರ ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು, ಇಲ್ಲದೆ ಹೋದಲ್ಲಿ ಕಾಯ್ದೆಯನ್ನು ನಾವು ತಡೆಯುತ್ತೇವೆ ಎಂದು ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಚಳುವಳಿಯನ್ನು ಗಮನಿಸಿದ ಸುಪ್ರೀಂ ಕೋರ್ಟು ಕಳೆದ ದಶಂಬರ ೧೭ರಂದು ʼ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲʼ ಎಂದು ಹೇಳಿತ್ತು.

ಆದರೆ ಸರಕಾರ ತನ್ನ ಹಠಮಾರಿತನದಿಂದ ಹಿಂದೆ ಸರಿಯಲಿಲ್ಲ. ಇವತ್ತು ಚಳುವಳಿಯ 47 ನೇ ದಿವಸ ಮತ್ತೆ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರದ ಕ್ರಮದ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿ ʼ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಯಾವುದೇ ಹಂತದಲ್ಲಿ ಹಿಂಸೆ ಉಂಟಾಗಬಹುದು, ಈ ಹಂತದಲ್ಲಿ ಸರಕಾರವು ಕಾಯ್ದೆಯನ್ನು ತಡೆ ಹಿಡಿದರೆ ಮಾತ್ರ ನಮಗೆ ಏನಾದರೂ ಮಾಡಲು ಅವಕಾಶ ಸಿಗುತ್ತದೆ. ನೀವು ತಡೆ ಹಿಡಿಯುತ್ತೀರೋ ಅಥವಾ ನಾವೇ ಏನಾದರೂ ಮಾಡಬೇಕೋ?ʼ ಎಂದು ಸರಕಾರವನ್ನು ಪ್ರಶ್ನಿಸಿದೆ. ಇದರಿಂದ ಬಿಜೆಪಿಯ ಒಳಗಿನ ಬಿಕ್ಕಟ್ಟುಗಳು ಇನ್ನಷ್ಟು ಹೆಚ್ಚಾಗಲಿವೆ. ಪ್ರಧಾನಿ ಮೋದಿಯವರಿಗೆ ಇದು ಹಿನ್ನಡೆ ಮತ್ತು ರೈತರಿಗೆ ಇದೊಂದು ನೈತಿಕ ಜಯ ಎಂದು ಜೆ.ಎನ್.ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆಯವರು ಅಭಿಪ್ರಾಯ ಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *