ಪಿಎಂ ಸೂರ್ಯ ಘರ್ ಯೋಜನೆಯಡಿ 300 ಯೂನಿಟ್ ಉಚಿತ ವಿದ್ಯುತ್!! ಏನಿದು ಮೋದಿಯವರ ಮಾತಿನ ಮೋಡಿ?

– ಸಿ. ಸಿದ್ದಯ್ಯ

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ “ಪಿಎಂ ಸೂರ್ಯ ಘರ್ ಯೋಜನೆಯಡಿ 1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಸಕ್ರಿಯಗೊಳಿಸಲಾಗುವುದು. ಈ ಯೋಜನೆಯು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪವಿತ್ರ ದಿನದಂದು ಪ್ರಧಾನ ಮಂತ್ರಿಯವರ ಸಂಕಲ್ಪವನ್ನು ಅನುಸರಿಸುತ್ತದೆ.” ಎಂದು ಘೋಷಿಸಿದರು. ಹೀಗೆ ಹೇಳುವ ಮೂಲಕ ಇದೊಂದು ಹೊಸ ಯೋಜನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. “ಮೋದಿ ಸರ್ಕಾರದಿಂದ 300 ಯೂನಿಟ್ ವಿದ್ಯುತ್ ಉಚಿತ” ಎಂಬ ಘೋಷಣೆಯೇ ಬಿಜೆಪಿಯವರಿಂದ ಹೆಚ್ಚಾಗಿ ಕೇಳಿಬರುತ್ತಿದೆ. ತಮ್ಮ ಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಸಿಗುವ ಭರವಸೆಯಲ್ಲಿ ಬಹಳಷ್ಟು ಜನರಿದ್ದಾರೆ.

ಭಾರತದ ಒಂದು ಕೋಟಿ ಕುಟುಂಬಗಳಿಗೆ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024, ಫೆಬ್ರವರಿ 1 ರಂದು ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಇದೇ ಘೋಷಣೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ಮನೆಗಳ ಸಂಖ್ಯೆಯನ್ನು ಈಗ 3 ಕೋಟಿಗೆ ಹೆಚ್ಚಿಸಿದೆ.

ಇದನ್ನೂ ಓದಿ: 102 ಕ್ಷೇತ್ರಗಳಲ್ಲಿ ಆರಂಭವಾದ ಮತದಾನ; ಸಾಮಾನ್ಯ ಜನರೊಂದಿಗೆ ಮತಚಲಾಯಿಸಲು ಬಂದಿರುವ ನಾಯಕರು, ಸ್ಟಾರ್‌ಗಳು

ವ್ಯಾಪಾರಿಗಳು ‘ಗ್ರಾಹಕರನ್ನು’ ಸೆಳೆಯುವ ಇಂತದೇ ವ್ಯಾಪಾರಿ ತಂತ್ರಗಳನ್ನು ಮೋದಿ ಮತ್ತು ಬಿಜೆಪಿಯವರು ಮತದಾರರನ್ನು ತಮ್ಮತ್ತ ಸೆಳೆಯಲು ಮಾಡತೊಡಗಿದ್ದಾರೆ. ಹಳೆಯ ಯೋಜನೆಗಳಿಗೆ ಹಿಂದಿ ಅಥವಾ ಸಂಸ್ಕೃತ ಭಾಷೆಯ ಹೊಸ ಹೆಸರನ್ನಿಟ್ಟು, ಅದಕ್ಕೆ ‘ಪ್ರದಾನ ಮಂತ್ರಿ’ ಸೇರಿಸಿ, ಇದು ಜನಸಾಮಾನ್ಯರಿಗಾಗಿ ಹೊಸದಾಗಿ ರೂಪಿಸಿದ ಯೋಜನೆ ಎಂಬಂತೆ ಬಿಂಬಿಸಿ ಪ್ರಚಾರ ಮಾಡತೊಡಗುತ್ತಾರೆ. ಇದಕ್ಕೆ ಇತ್ತೀಚಿನ ಒಂದು ಉದಾಹರಣೆ: 3 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಎಂಬ ಘೋಷಣೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ‘ದೇಶದ ಮೂರು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಕೊಡುತ್ತೇವೆ, ಎಂದು ಹೇಳಿದೆ. “ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ,” ಎಂದು ಪ್ರದಾನಿ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಈ ಘೋಷಣೆಯಲ್ಲಿನ ‘ಕಂಡೀಶನ್’ ಅಥವಾ ‘ಷರತ್ತುಗಳು’ ಏನೆಂದು ತಿಳಿದಾಗ ಮಾತ್ರ ಈ ‘ಉಚಿತ ವಿದ್ಯುತ್’ ನ ರಹಸ್ಯ ಅರಿಯಲು ಸಾಧ್ಯ.

ಏನಿದು ಉಚಿತ ವಿದ್ಯುತ್ ?

 

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ನಿಜವಾಗಿಯೂ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ’ ಯೋಜನೆ ಅಥವಾ “ಪಿಎಂ ಸೂರ್ಯ ಘರ್ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಕೊಡುತ್ತದೆಯೇ? ಕರ್ನಾಟಕ ಸರ್ಕಾರ ಈಗ ಕೊಡುತ್ತಿರುವ 200 ಯೂನಿಟ್ ವರೆಗಿನ ವಿದ್ಯುತ್ ವೆಚ್ಚವನ್ನು ತಾನೇ ಬರಿಸುವಂತೆ ಕೇಂದ್ರ ಸರ್ಕಾರವೂ ಕೂಡ ಈ ಯೂಜನೆಯ ಫಲಾನುಭವಿಗಳು ಪ್ರತಿ ತಿಂಗಳು ಬಳಕೆ ಮಾಡುವ 300 ಯೂನಿಟ್ ಗಳಿಗೆ ಆಗುವ ವೆಚ್ಚವನ್ನು ತಾನೇ ಕೊಡುತ್ತದೆಯೇ? ಮೋದಿ ಮತ್ತು ಬಿಜೆಪಿಯವರ ಪ್ರಚಾರ ವೈಖರಿಯನ್ನು ನೋಡಿ, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಮ್ಮ ಮನೆಗೂ 300 ಯೂನಿಟ್ ವಿದ್ಯುತ್ ಉಚಿತ ಸಿಗುತ್ತದೆ ಎಂದು ನಂಬಿರುವವರೂ ಇದ್ದಾರೆ.  ವಿರೋಧ ಪಕ್ಷಗಳ ಆಡಳಿತ ಇರುವ ದೆಹಲಿ, ಪಂಜಾಬ್, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ನಿರ್ಧಿಷ್ಟ ಪ್ರಮಾಣದ ಗೃಹಬಳಕೆಯ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತಿರುವುದು ಬಿಜೆಪಿಗೆ ಸಂಕಟ ತಂದಿದೆ. ಇದಕ್ಕೆ ಪ್ರತಿಯಾಗಿ, ತಮ್ಮ ನೇತೃತ್ವದ ಕೇಂದ್ರ ಸರ್ಕಾರವೂ 300 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿಯೂ, ಈ ಬಾರಿಯೂ ನಮಗೆ ಮತ ನೀಡಿ ಗೆಲ್ಲಿಸಬೇಕೆಂದೂ ಬಿಜೆಪಿಯವರು ಹೇಳಿಕೊಳ್ಳತೊಡಗಿದ್ದಾರೆ.

ಉಚಿತ ವಿದ್ಯುತ್ ಅಲ್ಲ: ಸೋಲಾರ್ ಅಳವಡಿಕೆಗೆ ಸಬ್ಸಿಡಿ ಮಾತ್ರ

ಈ ಯೋಜನೆಯ ಹೆಸರು ‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ’. ಎಂದರೆ, ‘ಸೂರ್ಯನ ಮನೆ ಉಚಿತ ವಿದ್ಯುತ್’.  ಸೂರ್ಯನ ಮನೆಗೆ ಸೂರ್ಯನೇ ಉಚಿತವಾಗಿ ವಿದ್ಯುತ್ ಕೊಡುತ್ತಾನೆ. ಅಥವಾ ಸೂರ್ಯನ ಕಿರಣದಿಂದ ನಾವೇ ವಿದ್ಯುತ್ ಉತ್ಪಾಧನೆ ಮಾಡಿಕೊಳ್ಳಬೇಕು. ಇದಕ್ಕೆ ನಮ್ಮ ಮನೆಯ ಮೇಲೆ ಸೌರಫಲಕ (ಸೋಲಾರ್ ಸಿಸ್ಟಮ್) ಅಳವಡಿಸಿಕೊಳ್ಳಬೇಕು. ಇದಕ್ಕೆ ನಾವು ಒಂದೆರೆಡು ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಬೇಕು.

ಸೋಲಾರ್ ಸಿಸ್ಟಮ್ ಗೆ ಬಂಡವಾಳ ಹಾಕುವವರು ನಾವು (ಒಂದೆರಡು ಲಕ್ಷ ರೂಪಾಯಿ ಬಂಡವಾಳ ಹಾಕುವ ಸಾಮರ್ಥ್ಯ ಇರುವವರು ಮಾತ್ರ), ಮನೆ ಚಾವಣಿ ನಮ್ಮದು, (ಸ್ವಂತ ಮನೆ ಇರಬೇಕು, ಸೋಲಾರ್ ಅಳವಡಿಸಲು ಅನುಕೂಲಕರವಾದ ಮತ್ತು ಸಾಕಷ್ಟು ಸ್ಥಳಾವಕಾಶ ಇರುವ ಮೇಲ್ಚಾವಣಿ ಹೊಂದಿರಬೇಕು, ಸೂರ್ಯನ ಬೆಳಕು ಮನೆಯ ಛಾವಣಿ ಮೇಲೆ ಬೀಳುವಂತಿರಬೇಕು), ಸೂರ್ಯ ಮತ್ತು ಸೂರ್ಯನ ಕಿರಣಗಳು ಸಕಲ ಜೀವರಾಶಿಗಳಿಗೂ ಸೇರಿದ್ದು, ಇಷ್ಟೆಲ್ಲಾ ಆದ ನಂತರ ಅದರಿಂದ ಉತ್ಪನ್ನವಾಗುವ ವಿದ್ಯುತ್ ಕೂಡಾ ನಮ್ಮದೇ ಅಲ್ಲವೇ? ಹಾಗಾದರೆ, ನಾವು 3 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂಬ ಬಿಜೆಪಿಯವರ ಘೋಷಣೆ ಮೋಸದಿಂದ ಕೂಡಿದ್ದಲ್ಲವೇ?

ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಈ ಯೋಜನೆಯು 1 kW ಸಿಸ್ಟಮ್‌ಗೆ 30,000 ರೂ. 2 kW ಸಿಸ್ಟಮ್‌ಗಳಿಗೆ 60,000 ರೂ. ಮತ್ತು 3 kW ಅಥವಾ ಹೆಚ್ಚಿನ ಸಿಸ್ಟಮ್‌ಗಳಿಗೆ 78,000 ರೂ. ಸಬ್ಸಿಡಿಯನ್ನು ಒದಗಿಸುತ್ತದೆ. ಅಂದರೆ ವೆಚ್ಚದ ಶೇ. 60 ಅಥವಾ ಶೇ. 40 ರಷ್ಟು ಸಹಾಯಧನ ಕೊಡುತ್ತದೆ. ಇಷ್ಟು ಸಹಾಯಧನ ಕೊಡುವ ಬಿಜೆಪಿ ಸರ್ಕಾರ ತಾನೇ ಪ್ರತಿ ಮನೆಗಳಿಗೆ ಉಚಿತವಾಗಿ 300 ಯೂನಿಟ್ ವಿದ್ಯುತ್ ಕೊಡುತ್ತೇನೆ ಎಂಬಂತೆ ಪ್ರಚಾರ ಮಾಡುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳಿಗೆ 15,000 ರೂ ನಿಂದ 18,000 ರೂ ಉಳಿತಾಯವಾಗುತ್ತದೆ ಎಂದು ಕೂಡಾ ಹೇಳುತ್ತಿದೆ. ತಿಂಗಳಿಗೆ 200 ರಿಂದ  500 ರೂ.ಗಳಷ್ಟೇ ವಿದ್ಯುತ್ ಬಳಕೆ ಮಾಡುವ ಬಡವರು ಅಥವಾ 500 ರೂ. ಗಳಿಂದ 2000 ರೂ. ವರೆಗೆ ವಿದ್ಯುತ್ ಗಾಗಿ ವೆಚ್ಚ ಮಾಡುವ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟು ಈ ಉಳಿತಾಯದ ಮಾತುಗಳನ್ನು ಹೇಳಿದ್ದಲ್ಲ ಎಂಬುದು ಇದರಿಂದ ಸ್ವಷ್ಟ.

ಇದಕ್ಕೂ ಮುಂಚಿನಿಂದಲೂ ಸಬ್ಸಿಡಿ ಇದೆ

“ಮೋದಿ ಸರ್ಕಾರ ಇಷ್ಟಾದರೂ ಧನಸಹಾಯ ನೀಡಲು ಮುಂದಾಗಿದೆಯಲ್ಲ, ಇದನ್ನೂ ಟೀಕಿಸುವುದು ಎಷ್ಟು ಸರಿ” ಎನ್ನುತ್ತೀರಾ? ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವವರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸಹಾಯಧನ ಕೊಡುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದಲೂ ಇಂತಹ ಯೋಜನೆಗಳಿವೆ. ಇಂದಿಗೂ ಹಲವು ರಾಜ್ಯ ಸರ್ಕಾರಗಳು ಇದಕ್ಕಾಗಿ ಸಹಾಯಧನ ಕೊಡುತ್ತಲೇ ಬಂದಿವೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳೂ ಮೇಲ್ಛಾವಣಿ ಸೌರ ಯೋಜನೆಗಳಿಗೆ ಧನಸಹಾಯ ನೀಡುತ್ತಿವೆ. ನರೇಂದ್ರ ಮೋದಿಯವರೇ 30, ಜುಲೈ 2022 ರಂದು ರೂಫ್‌ಟಾಪ್ ಸೋಲಾರ್‌ಗಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು ಸಹಾ ಪ್ರಾರಂಭಿಸಿದ್ದಾರೆ.

24 ವರ್ಷಗಳ ಹಿಂದಿನಿಂದಲೇ ಸೌರಶಕ್ತಿಯನ್ನು ಉತ್ತೇಜಿಸಲು ಸರ್ಕಾರದ ಉಪಕ್ರಮ

ದೇಶದಲ್ಲಿ ಸೌರಶಕ್ತಿಯನ್ನು ಉತ್ತೇಜಿಸಲು ಭಾರತ ಸರ್ಕಾರವು 2000 ರಿಂದ,  ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ, ವಿದ್ಯುತ್ ಕಾಯಿದೆ 2003, ರಾಷ್ಟ್ರೀಯ ವಿದ್ಯುತ್ ನೀತಿ 2005, ಸುಂಕ ನೀತಿ 2006 ಮತ್ತು ಅದರ ತಿದ್ದುಪಡಿ 2011, ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ 2008, ಸೆಮಿಕಂಡಕ್ಟರ್ 2007 ಮತ್ತು ಕರ್ನಾಟಕ ಸೆಮಿಕಂಡಕ್ಟರ್ ಪಾಲಿಸಿ 2010. ಹಾಗೆಯೇ 14 ರಾಜ್ಯಗಳು ತಮ್ಮ ರಾಜ್ಯದ ನಿರ್ದಿಷ್ಟ ಸೌರ ನೀತಿಗಳನ್ನು ಏಪ್ರಿಲ್ 2014 ರವರೆಗೆ ಘೋಷಿಸಿವೆ.

ಸೌರ ಮೇಲ್ಛಾವಣಿ ಸಬ್ಸಿಡಿ ಯೋಜನೆ 

ಸೌರ ಮೇಲ್ಛಾವಣಿ (ರೂಪ್ ಟಾಪ್ ಸೋಲಾರ್ ಪ್ಲಾಂಟ್) ಸಬ್ಸಿಡಿ ಯೋಜನೆ ಮೂಲಕ ದೇಶದಲ್ಲಿ ಸೌರ ಛಾವಣಿಯ ವಿದ್ಯುತ್ ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಈ ಮೊದಲೇ ಕ್ರಮಕೈಗೊಂಡಿದೆ. ಕೇಂದ್ರ ಸರ್ಕಾರವು ಸೌರ ಮೇಲ್ಛಾವಣಿ ಸಬ್ಸಿಡಿ ಯೋಜನೆ ಮೂಲಕ ಗ್ರಾಹಕರಿಗೆ ಸೌರ ಮೇಲ್ಛಾವಣಿ ಸ್ಥಾಪನೆಗಳ ಮೇಲೆ ಸಬ್ಸಿಡಿಗಳನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರವು ಸಾಮಾನ್ಯ ವರ್ಗಗಳಲ್ಲಿ ರಾಜ್ಯಗಳಿಗೆ ಮೇಲ್ಛಾವಣಿಯ ಸೌರ ಸ್ಥಾವರಗಳ ಸ್ಥಾಪನೆಗೆ ಶೇ. 30 ಸಬ್ಸಿಡಿಯನ್ನು ಪಾವತಿಸುತ್ತದೆ. ವಿಶೇಷ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ ಮತ್ತು ಲಕ್ಷದ್ವೀಪಗಳಿಗೆ ಕೇಂದ್ರ ಸರ್ಕಾರವು ಶೇ. 70 ವರೆಗೆ ಸಹಾಯಧನವನ್ನು ನೀಡುತ್ತಾ ಬಂದಿದೆ.

ಸರ್ಕಾರದ ಮೇಲ್ಛಾವಣಿ ಸೌರ ಸ್ಥಾಪನೆಗಳ ಗುರಿಯು ತನ್ನ ವೇಗವನ್ನು ಪಡೆಯಲಿಲ್ಲ. 2022 ರ ಅಂತ್ಯದ ವೇಳೆಗೆ ಸಾಧಿಸಬೇಕಾದ 40 GW ಗುರಿಗೆ ಬದಲಾಗಿ, ಕೇವಲ 5.87 GW ಛಾವಣಿಯ ಸೌರ ಯೋಜನೆಗಳನ್ನು ಸ್ಥಾಪಿಸಲಾಗಿದೆ. ಇದು ಗುರಿಯ ಶೇ. 15ಕ್ಕಿಂತ ಕಡಿಮೆಯಾಗಿದೆ ಎಂದು 2023ರ ಮೇ ತಿಂಗಳಲ್ಲಿ ಇಂಧನ ಸಂಸತ್ ಸ್ಥಾಯಿ ಸಮಿತಿ ಹೇಳಿತ್ತು. ಈ ಕಾರಣದಿಂದ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಎಂದು ಹೆಸರಿಡಲಾಗಿದೆ.

ಬಾಕ್ಸ್ ಕರ್ನಾಟಕದಲ್ಲಿ ಸೌರ ವ್ಯವಸ್ಥೆಗಳನ್ನು ಅಳವಡಿಸಲು ಸಬ್ಸಿಡಿ 

ಭಾರತದಲ್ಲಿ ಸೌರ ವಿದ್ಯುತ್ ಉತ್ಪಾಧನಾ ಘಟಕಗಳ ಸ್ಥಾಪನೆಗೆ ಮತ್ತು ಮನೆಗಳ ಮೇಲ್ಚಾವಣಿಯಲ್ಲಿ ಸೌರ ಫಲಕಗಳ ಅಳವಡಿಕೆಗಳಿಗೆ ಸರ್ಕಾರಗಳು ಹಲವು ವರ್ಷಗಳಿಂದ ಧನಸಹಾಯ ಮಾಡುತ್ತಾ ಬಂದಿವೆ. ನಮ್ಮ ಕರ್ನಾಟಕ ರಾಜ್ಯವನ್ನೇ ತೆಗೆದುಕೊಂಡರೆ, ಕರ್ನಾಟಕವು 2011 ರಲ್ಲಿ ಮೀಸಲಾದ ಸೌರ ನೀತಿಯನ್ನು ಘೋಷಿಸಿದ ಮೊದಲ ರಾಜ್ಯವಾಗಿದೆ. ಅಂದಿನಿಂದ, ಈ ಉದ್ಯಮದಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸರಕ್ಕೆ ಅನುಗುಣವಾಗಿ ರಾಜ್ಯವು ತನ್ನ ಎಲ್ಲಾ ನೀತಿಗಳನ್ನು ನಿಯಮಿತವಾಗಿ ನವೀಕರಿಸುತ್ತಿದೆ.

ಕರ್ನಾಟಕವು 2011 ರಲ್ಲಿ ಮೀಸಲಾದ ಸೌರ ನೀತಿಯನ್ನು ಘೋಷಿಸಿದ ಮೊದಲ ರಾಜ್ಯವಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಪ್ರಕಟಿಸಿದ ರಾಜ್ಯ ಮೇಲ್ಛಾವಣಿಯ ಸೌರ ಆಕರ್ಷಣೆ ಸೂಚ್ಯಂಕದ ಪ್ರಕಾರ, ಕರ್ನಾಟಕ ಸೌರ ವಿದ್ಯುತ್ ಸ್ಥಾವರವು ಮೇಲ್ಛಾವಣಿಯ ಸೌರ ಯೋಜನೆಗಳನ್ನು ಸ್ಥಾಪಿಸುವಲ್ಲಿ ಅತ್ಯಂತ ಆಕರ್ಷಕ ರಾಜ್ಯವಾಗಿ ಇತರ ರಾಜ್ಯಗಳನ್ನು ಹಿಂದಿಕ್ಕಿದೆ. ರಾಜ್ಯ ಸರ್ಕಾರವು ಎಲ್ಲಾ ಮಾರುಕಟ್ಟೆ ಕ್ಷೇತ್ರಗಳ ಗ್ರಾಹಕರು ತಮ್ಮ ಛಾವಣಿಯ ಮೇಲೆ ಸ್ವತಂತ್ರವಾಗಿ ಸೌರಶಕ್ತಿಯನ್ನು ಉತ್ಪಾದಿಸಲು ಅನುವು ಮಾಡಿಕೊಡುವ ಅನುಕೂಲಕರ ಕಾನೂನುಗಳನ್ನು ಜಾರಿಗೆ ತಂದಿದೆ.

MNRE ಮಾರ್ಚ್ 2019 ರಲ್ಲಿ ‘ಸೌರ ಗೃಹ ಯೋಜನೆ’ಯನ್ನು ಘೋಷಿಸಿತು ಮತ್ತು ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸಲು ಎಸ್ಕಾಮ್ ಗಳಿಗೆ ಜವಾಬ್ದಾರಿಯನ್ನು ವಹಿಸಿದೆ. MNRE ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರಿಗೆ 3 kWh ವರೆಗೆ ಶೇ. 40 ಸಬ್ಸಿಡಿ ಮತ್ತು 3 kWh ಗಿಂತ ಹೆಚ್ಚಿನ ಅನುಸ್ಥಾಪನೆಗೆ ಶೇ. 20 ಸಬ್ಸಿಡಿ ನೀಡಲಾಗುತ್ತಿತ್ತು. ಸೌರ ಮೇಲ್ಛಾವಣಿ ಸಬ್ಸಿಡಿ ಯೋಜನೆಯಡಿ ವಸತಿ ಮತ್ತು ವಾಣಿಜ್ಯ ಆಸ್ತಿ ಮಾಲೀಕರು ತಮ್ಮ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಹಾಕಲು ಹಣಕಾಸಿನ ಪ್ರೋತ್ಸಾಹವನ್ನು ಪಡೆಯಬಹುದು. ಕರ್ನಾಟಕದಲ್ಲಿ ಸೋಲಾರ್ ಸಬ್ಸಿಡಿ ವಸತಿ ಗೃಹಗಳು, ಸರ್ಕಾರಿ ಕಟ್ಟಡಗಳು, ಶಾಲೆಗಳು, ಕಾಲೇಜುಗಳು ಇತ್ಯಾದಿಗಳಿಗೆ ಲಭ್ಯವಿದೆ.

10 ನವೆಂಬರ್ 2022ರ ಒಂದು ವರದಿಯಂತೆ, ಬೆಸ್ಕಾಂನ ಅಂದಾಜಿನ ಪ್ರಕಾರ, 2014 ರಿಂದ 2022ರ ವರೆಗೆ ಬೆಂಗಳೂರು ನಗರದ ಗ್ರಾಹಕರು ಸರ್ಕಾರದಿಂದ ಸಬ್ಸಿಡಿ ಪಡೆಯದೆಯೂ 175.259 MW ನಷ್ಟು ಸೋಲಾರ್ ಮೇಲ್ಛಾವಣಿಗಳನ್ನು ಸ್ಥಾಪಿಸಿದ್ದಾರೆ. ಇದಲ್ಲದೆ ಬೆಸ್ಕಾಂ ಇನ್ನೂ 4 ಮೆಗಾವ್ಯಾಟ್ ನಷ್ಟು ಸೋಲಾರ್ ಮೇಲ್ಛಾವಣಿಗಳನ್ನು ಸ್ಥಾಪಿಸುವಲ್ಲಿ ಆ ಅವಧಿಯಲ್ಲಿ ಯಶಸ್ವಿಯಾಗಿದೆ.

ಡೆಕ್ಕನ್ ಹೆರಾಲ್ಡ್ 08 ಜನವರಿ 2024ರ ವರದಿಯ ಪ್ರಕಾರ, (ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ’ ಯೋಜನೆ ಘೋಷಣೆಗೂ ಮುಂಚಿನ ವರದಿ)  ಸುಮಾರು 200 ಯುನಿಟ್‌ಗಳ ಉತ್ಪಾದನೆಗೆ ಸೌರ ಮೇಲ್ಛಾವಣಿ ಅಳವಡಿಕೆಯು ರೂ. 3 ಲಕ್ಷ ವೆಚ್ಚವಾಗಬಹುದು. ಕರ್ನಾಟಕ ಸರ್ಕಾರವು ಸೌರ ಮೇಲ್ಛಾವಣಿ ಅಳವಡಿಕೆಗಳಿಗೆ ಸಬ್ಸಿಡಿಗಳನ್ನು ಕೊಡುತ್ತಿದೆ. 3 kWh ಸಾಮರ್ಥ್ಯದವರೆಗಿನ ಮೇಲ್ಛಾವಣಿಯ ಸೌರ ವ್ಯವಸ್ಥೆಗಳನ್ನು ಅಳವಡಿಸಲು ಕರ್ನಾಟಕವು ಶೇ. 50ರಷ್ಟು ಅಥವಾ ರೂ. 50,000 ವರೆಗೆ ಸಬ್ಸಿಡಿಯನ್ನು ನೀಡುತ್ತದೆ.

ಸೋಲಾರ್ ವಾಟರ್ ಹೀಟರ್ ಸಬ್ಸಿಡಿ 

ಕರ್ನಾಟಕ ರಾಜ್ಯದ ಶುದ್ಧ ಇಂಧನ ಯೋಜನೆಯು, ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸೋಲಾರ್ ವಾಟರ್ ಹೀಟಿಂಗ್ ಸಿಸ್ಟಮ್‌ಗಳನ್ನು ಉತ್ತೇಜಿಸಲು, ರಾಜ್ಯ ಸರ್ಕಾರವು ಹಲವು ವರ್ಷಗಳಿಂದ ಸಬ್ಸಿಡಿಗಳನ್ನು ನೀಡುತ್ತಾ ಬಂದಿದೆ. ಸೋಲಾರ್ ವಾಟರ್ ಹೀಟಿಂಗ್ ಸಿಸ್ಟಮ್‌ಗಳನ್ನು ಅಳವಡಿಸಲು 100 ಎಲ್‌ಪಿಡಿಗೆ ರೂ. 5000 ಸಹಾಯಧನ ಕೊಡುತ್ತಿದೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಈ ಸಬ್ಸಿಡಿಯನ್ನು ಪಡೆಯಬಹುದು.

ಇದನ್ನೂ ನೋಡಿ: ದ್ವೇಷ ಬಿಟ್ಟು ದೇಶ ಕಟ್ಟಿ – ಡಾ ಹಂಸಲೇಖ Janashakthi Media

Donate Janashakthi Media

Leave a Reply

Your email address will not be published. Required fields are marked *