ರಾಜ್ಯ ಬಿಜೆಪಿ ಸರ್ಕಾರ 30 ಪರ್ಸೆಂಟ್ ಸರ್ಕಾರ ಆಗಿದೆ – ಸಿದ್ಧರಾಮಯ್ಯ ಆರೋಪ

ಲೂಟಿ ಹೊಡೆಯುತ್ತಿರುವ ವಿಜಯೇಂದ್ರ ಯಾವಾಗ ಬೇಕಾದರೂ ಅರೆಸ್ಟ್ ಆಗಬಹುದು

ಬೀದರ್: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 30 ಪರ್ಸೆಂಟ್ ಸರ್ಕಾರ ಆಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬಸವಕಲ್ಯಾಣ ನಗರದ ತೇರು ಮೈದಾನದಲ್ಲಿ ಮಂಗಳವಾರ ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಪರ ಪ್ರಚಾರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ನನ್ನ ನೇತೃತ್ವದ ಸರ್ಕಾರವನ್ನು ’10 ಪರ್ಸೆಂಟ್ ಸರ್ಕಾರ’ ಎಂದು ಜರಿದಿದ್ದರು. ಈಗ ಹೇಳಿ ಮೋದಿ ಅವರೆ, ಯಡಿಯೂರಪ್ಪ ಅವರದ್ದು ಎಷ್ಟು ಪರ್ಸೆಂಟ್ ಸರ್ಕಾರ’ ಎಂದು ಪ್ರಶ್ನಿಸಿದರು.

ಹಿಂದೆ ಯಡಿಯೂರಪ್ಪ ಅವರು ಚೆಕ್ ಮೂಲಕ ಹಣ ಪಡೆದು ಪೇಚಿಗೆ ಸಿಲುಕಿದ್ದರು. ಈಗ ಅವರ ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ. ಯಾವಾಗ ಸಿಕ್ಕಿಹಾಕಿಕೊಳ್ಳುತ್ತಾರೋ ಗೊತ್ತಿಲ್ಲ’ ಎಂದರು.

‘ರಾಜ್ಯದಲ್ಲಿ ಲೂಟಿ ಹೊಡೆದ, ಆರ್‌ಟಿಜಿಎಸ್ ಮೂಲಕ ಪಡೆದ ಹಣದಲ್ಲಿ ಈಗ ಏನೂ ಉಳಿದಿಲ್ಲ. ಎಲ್ಲವೂ 16 ವಿಧಾನಸಭಾ ಉಪ ಚುನಾವಣೆಗಳಿಗೇ ಖರ್ಚಾಗಿದೆ. ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗೂ ಆಡಳಿತಾರೂಢ ಪಕ್ಷ ₹  50 ಕೋಟಿ ಖರ್ಚು ಮಾಡುವ ಸಾಧ್ಯತೆ ಇದೆ. ರಾಜ್ಯ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಯಾರೂ ಮತ ಮಾರಿಕೊಳ್ಳಬಾರದು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ಎಂದೂ ಇಂಥ ಕೆಟ್ಟ ಹಾಗೂ ಭ್ರಷ್ಟ ಸರ್ಕಾರವನ್ನು ಕಂಡಿರಲಿಲ್ಲ. ನಾರಾಯಣರಾವ್ ಹೋದ ಮೇಲೆ ಬಸವಕಲ್ಯಾಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೇಳಿದರೆ ಯಡಿಯೂರಪ್ಪ ಕೊರೊನಾ ನೆಪ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಇದನ್ನೂ ಓದಿ : ಸಿಡಿ ಪ್ರಕರಣ : ಯುವತಿಯನ್ನು ಪತ್ತೆಹಚ್ಚದಿರುವುದು ಪೊಲೀಸರ ವೈಫಲ್ಯವನ್ನು ತೋರಿಸುತ್ತದೆ – ಸಿದ್ಧರಾಮಯ್ಯ

‘ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ. ₹  20 ಸಾವಿರ ಕೋಟಿ ಸಾಲ ಪಡೆದು ನೌಕರರ ವೇತನ, ಪೆನ್ಶನ್ ಹಾಗೂ ಸಬ್ಸಿಡಿ ಕೊಡಬೇಕಾದ ಸ್ಥಿತಿ ಇದೆ. ಯಡಿಯೂರಪ್ಪ ಅವರು ಎರಡೇ ವರ್ಷದಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ರಾಜ್ಯದ ಜನರನ್ನು ಸಾಲಗಾರರನ್ನಾಗಿಸುವ ಪರಿಸ್ಥಿತಿ ತಂದೊಡ್ಡಿದ್ದಾರೆ’ ಎಂದು ಆಪಾದಿಸಿದರು.

‘ಮನ್‍ಮೋಹನ್‍ಸಿಂಗ್ ಆಡಳಿತದಲ್ಲಿ ಕ್ರಮವಾಗಿ ₹  50, ₹  40 ಹಾಗೂ ₹  440 ಇದ್ದ ಪೆಟ್ರೋಲ್, ಡೀಸೆಲ್ ಹಾಗೂ ಸಿಲಿಂಡರ್ ಬೆಲೆ ಮೋದಿ ಆಡಳಿತದಲ್ಲಿ ಕ್ರಮವಾಗಿ ₹ 100, ₹  90 ಹಾಗೂ ₹  850 ಕ್ಕೆ ಏರಿಕೆಯಾಗಿವೆ. 2014 ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟಿದ್ದರು. 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷಿಸುವುದು ಇರಲಿ, ಇರುವ ಹುದ್ದೆಗಳನ್ನು ಉಳಿಸಲು ಅವರಿಗೆ ಸಾಧ್ಯವಾಗಿಲ್ಲ. ಕೈಗಾರಿಕೆಗಳು ಮುಚ್ಚಿ ಹೋಗಿವೆ’ ಎಂದು ವಾಗ್ದಾಳಿ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *