ಟಿಕ್ರಿ ಗಡಿಯಲ್ಲಿ ‘ಟ್ರಕ್’ ಹರಿದು ಮೂವರು ರೈತ ಮಹಿಳೆಯರ ಸಾವು

ನವದೆಹಲಿ : ದೆಹಲಿ-ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ವೇಗವಾಗಿ ಬಂದ ಟ್ರಕ್ಕೊಂದು ಡಿವೈಡರ್ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ನಡೆದಿದೆ. ಗಂಭೀರ ಗಾಯಗಳಾಗಿರುವ
ಮೂವರು ಮಹಿಳೆಯರನ್ನು ಆಸ್ಪತ್ರಗೆ ಸೇರಿಸಲಾಗಿದೆ.

ಮೃತ ಮಹಿಳೆಯರು ರೈತ ಮಹಿಳೆಯರಾಗಿದ್ದು ಕೃಷಿಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ವಾಪಾಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ರಕ್ ಢಿಕ್ಕಿ ಹೊಡೆದಾಗ ಮಹಿಳೆಯರು ಡಿವೈಡರ್ ಮೇಲೆ ಕುಳಿತು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಅಪಘಾತದ ಸ್ಥಳದಿಂದ ಟ್ರಕ್ ಚಾಲಕ ಓಡಿಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮಹಿಳೆಯರು ಪಂಜಾಬ್‌ನ ಮಾನ್ಸಾ ಜಿಲ್ಲೆಗೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪಂಜಾಬ್, ಹರಿಯಾಣ ಮತ್ತು ಇತರೆಡೆಗಳಿಂದ ರೈತರು ದೆಹಲಿಯ ಗಡಿಯಲ್ಲಿ ಸುಮಾರು 11 ತಿಂಗಳುಗಳಿಂದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಸೂಕ್ತ ಜಾಗವನ್ನು ನೀಡಿ ಎಂದು ರೈತರು ಕೇಳುತ್ತಲೆ ಇದ್ದಾರೆ. ಸಂಸತ್ ಭವನದ ಮುಂಭಾಗ ಪ್ರತಿಭಟನೆಗೆ ಅವಕಾಶ ನೀಡಿ ಎಂದು ರೈತರು ಕೇಳುತ್ತಿದ್ದಾಗ ದೆಹಲಿ ಒಳ ಪ್ರವೇಶಿಸದಂತೆ ರೈತರ ಮೇಲೆ ಲಾಠಿ ಚಾರ್ಜ್, ಜಲಫಿರಂಗಿ ಮೂಲಕ ಹಿಂಸಾಚಾರ ನಡೆಸಲಾಯಿತು. ರೈತರು ಒಳ ಬರದಂತೆ ರಸ್ತೆಗೆ ದೊಡ್ಡದಾದ ಮೊಳೆ, ತಂತಿಬೇಲೆ, ಸಿಮೆಂಟ್ ಗೋಡೆಗಳನ್ನು ನಿರ್ಮಿಸಿ ರೈತರು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸುವಂತೆ ಮಾಡಿದರು.

ಮಳೆ, ಚಳಿ ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಕೆಟ್ಟ ಹೆಸರು ತರುವ ಕಾರಣಕ್ಕಾಗಿ ಕಾಣದ ಕೈಗಳು ಅಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಲೇ ಇವೆ. ಈ ಘಟನೆಯೂ ಕೂಡ ಅದೇ ರೀತಿ ಇರಬಹುದು. ರೈತರನ್ನು ಚದುರಿಸಲು ಈ ಕೃತ್ಯ ಎಸಗಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಒಟ್ಟಿನಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸದ ಸರಕಾರ ಜನರ ಜೊತೆ, ರೈತರ ಜೊತೆ ಚಲ್ಲಾಟವಾಡುತ್ತಿದೆ. ಅಪಾಯಕಾರಿ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *