ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಸೇರಿದಂತೆ ಕೋವಿಡ್ ಲಾಕ್‌ಡೌನ್ ಪ್ಯಾಕೇಜ್ ಘೋಷಿಸಿದ್ದು ಸ್ವಾಗತಾರ್ಹವಾದರೂ ಅವರು ಘೋಷಿಸಿದ ಪರಿಹಾರ ಮೊತ್ತ ರೂ.3000/- ಮಾತ್ರ. ಇದು ಅಸಂಘಟಿತ ಚಾಲಕರು ಉದ್ಯೋಗ ಕಳೆದುಕೊಂಡು ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪೂರಕವಾದ ವೈಜ್ಞಾನಿಕ ಪರಿಹಾರವಾಗಿಲ್ಲ ಈ ಪರಿಹಾರದ ಮೊತ್ತದಿಂದ ಅವರ ಜೀವನ ನಿರ್ವಹಣೆಗೆ ಯಾವುದೇ ಸಹಾಯವಾಗದು ಎಂದು ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ‍್ಸ್ ಯೂನಿಯನ್ಸ್(ರಿ.)-ಎಫ್‌ಕೆಎಆರ್‌ಡಿಯು, ಸಿಐಟಿಯು ಸಂಯೋಜಿತ ಸಂಘಟನೆಯು ಆರೋಪಿಸಿದೆ.
ಎಫ್‌ಕೆಎಆರ್‌ಡಿಯು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಬಿ.ವಿ.ರಾಘವೇಂದ್ರ ಅವರು ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಒಟ್ಟು ಪರಿಹಾರದ ಫಲಾನುಭವಿಗಳು 2.10 ಲಕ್ಷ ಚಾಲಕರಿಗೆ ಪರಿಹಾರದ ರೂಪದಲ್ಲಿ ರೂ.63 ಕೋಟಿಯನ್ನು ಘೋಷಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಸರ್ಕಾರದ ಅಂಕಿ-ಅಂಶದ ಪ್ರಕಾರ 7.75 ಲಕ್ಷ ಚಾಲಕರಿದ್ದಾರೆ. ಇನ್ನುಳಿದ ಇತರೆ ಖಾಸಗಿ ಬಸ್ ಚಾಲಕರು/ಗೂಡ್ಸ್ ಚಾಲಕರು/ಲಾರಿ ಚಾಲಕರು, ಕಂಡಕ್ಟರ್ ಮತ್ತು ಕ್ಲೀನರ್‌ಗಳು ಸೇರಿದರೆ ಲಕ್ಷಾಂತರ ಚಾಲಕರಾಗುತ್ತಾರೆ. ಹೀಗಾಗಿ ಈ ಪ್ಯಾಕೇಜ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದು ಘೋಷಿಸಿದ ಅಲ್ಪ ಮೊತ್ತ ಭಿಕ್ಷೆಯ ಅಣಕವಾಗಿದೆ ಎಂದು ತಿಳಿಸಿದ್ದಾರೆ.
ಎಫ್‌ಕೆಎಆರ್‌ಡಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ಅವರು ಕರ್ನಾಟಕ ರಾಜ್ಯ ಆಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಾಜ್ಯದಲ್ಲಿ ಗುರುತಿಸಲಾದ ಅಸಂಘಟಿತ ವಿಭಾಗದ ಕಾರ್ಮಿಕರನ್ನು ನೋಂದಾವಣೆ ಮಾಡಲು ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆ ರೂಪಿಸಿ ಹಲವು ವರ್ಷಗಳೇ ಕಳೆದರೂ ಇನ್ನೂ ಲಕ್ಷಾಂತರ ಚಾಲಕರನ್ನು ನೋಂದಣಿ ಮಾಡಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ನೀಡಲು ಗುತ್ತಿಗೆಯನ್ನು ಕಾರ್ಮಿಕ ಇಲಾಖೆಯು ನೀಡಿತ್ತು. ಆ ಗುತ್ತಿಗೆದಾರರು ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ಉಚಿತವಾಗಿ ನೀಡುವ ಬದಲು ಫಲಾನುಭವಿಗಳ ಬಳಿ ಒತ್ತಾಯಪೂರ್ವಕವಾಗಿ ರೂ.250/- ರಿಂದ ರೂ.300/- ಗಳವರೆಗೂ ಅನಧಿಕೃತವಾಗಿ ಹಣವನ್ನು ಪಡೆಯುತ್ತಿದ್ದಾರೆ. ಇದರ ಬಗ್ಗೆ ಕಾರ್ಮಿಕ ಇಲಾಖೆಯ ಗಮನಕ್ಕೆ ಸಾಕ್ಷಿ ಸಮೇತ ದೂರು ನೀಡಿದರೂ ಸಹ ಯಾವುದೇ ಕ್ರಮವಹಿಸುತ್ತಿಲ್ಲ. ಹೀಗಾಗಿ ನೋಂದಣಿಯಾಗದ ಕಾರ್ಮಿಕರಿಗೆ ಅನ್ಯಾಯವಾಗಲಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಪರಿಹಾರ ಸಿಗುವಂತೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿದರು.
ಎಫ್‌ಕೆಎಆರ್‌ಡಿಯು ಸಂಘಟನೆಯ ರಾಜ್ಯ ಖಜಾಂಚಿ ಸಿ.ಎನ್. ಶ್ರೀನಿವಾಸ್ ಅವರು ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಸೇರಿದಂತೆ ಎಲ್ಲಾ ವಿಭಾಗದ ಚಾಲಕರಿಗೂ ಮೂರು ತಿಂಗಳು ರೂ.10 ಸಾವಿರ ಆರ್ಥಿಕ ನೆರವು ನೀಡಬೇಕು. ಪ್ರತಿ ಚಾಲಕರಿಗೆ 10 ಕೆ.ಜಿಯಂತೆ ಮುಂದಿನ ಆರು ತಿಂಗಳು ಆಹಾರ ಧಾನ್ಯಗಳನ್ನು ವಿತರಿಸಲು ಒತ್ತಾಯಿಸಿ ನಾಳೆ (ಮೇ 21ರಂದು) ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಹಾಗು ಕುಟುಂಬದವರು ಮನೆ-ಮನೆಗಳಲ್ಲಿ, ಕೆಲಸದ ಸ್ಧಳಗಳಲ್ಲಿ ಪ್ರತಿಭಟನೆ ಮಾಡಿ ಸರಕಾರಕ್ಕೆ ಹಾಗು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಧರಿಗೆ ಆನ್‌ಲೈನ್ ಮನವಿಯನ್ನು ಸಲ್ಲಿಸಲು ಕರೆಯನ್ನು ನೀಡಲಾಗಿದ್ದು ಎಲ್ಲಾ ಚಾಲಕರು ಮಾಸ್ಕ್ ಧರಿಸಿ, ದೈಹಿಕ ಅಂತರದೊಂದಿಗೆ ಯಶಸ್ವಿಗೊಳಿಸಲು ಸಂಘಟನೆಯು ಮನವಿ ಮಾಡುತ್ತದೆ ಎಂದು ತಿಳಿಸಿದರು.