ನವದೆಹಲಿ: ಗರ್ಭಿಣಿಯರು ಕೆಲಸಕ್ಕೆ ಸೇರಿಕೊಳ್ಳುವುದನ್ನು ತಡೆಯುವ ವಿವಾದಾತ್ಮಕ ಮಾರ್ಗಸೂಚಿ ಹೊರಡಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವಿರುದ್ಧ ಹಲವೆಡೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೂರು ತಿಂಗಳಿಗಿಂತ ಹೆಚ್ಚು ಸಮಯವಾದ ಗರ್ಭಿಣಿಯರು ಕೆಲಸ ಮಾಡಲು ‘ತಾತ್ಕಾಲಿಕವಾಗಿ ಅನರ್ಹ’ರಾಗಿರುತ್ತಾರೆ ಎಂದು ಎಸ್‌ಬಿಐ ಹೇಳಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ದಿಲ್ಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿತ್ತು.
‘ಸ್ಟೇಟ್ ಬ್ಯಾಂಕ್ ಇಂಡಿಯಾ, 3 ತಿಂಗಳಿಗಿಂತ ಹೆಚ್ಚು ಸಮಯ ದಾಟಿದ ಗರ್ಭಿಣಿಯರು ಸೇವೆಗೆ ಸೇರಿಕೊಳ್ಳುವುದನ್ನು ತಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವಂತಿದೆ ಮತ್ತು ಅವರನ್ನು ‘ತಾತ್ಕಾಲಿಕವಾಗಿ ಅನರ್ಹರು’ ಎಂದು ಹೇಳಿದೆ. ಇದು ತಾರತಮ್ಯವೂ ಹೌದು ಮತ್ತು ಅಕ್ರಮವೂ ಹೌದು. ಮಹಿಳಾ ವಿರೋಧಿ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಅವರಿಗೆ ನಾವು ನೋಟಿಸ್ ನೀಡಿದ್ದೇವೆ’ ಎಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಬ್ಯಾಂಕ್‌ನ ನಡೆಯು ತಾರತಮ್ಯದಿಂದ ಕೂಡಿದೆ ಮತ್ತು ಅಕ್ರಮವಾಗಿದೆ. ಅದು ಕಾನೂನಿನ ಅಡಿಯಲ್ಲಿ ನೀಡಲಾಗುವ ತಾಯ್ತನ ಪ್ರಯೋಜನಗಳಿಗೆ ಹಾನಿ ಮಾಡಲಿದೆ ಎಂದು ಆರೋಪಿಸಲಾಗಿದೆ.
ಡಿಸೆಂಬರ್ 31ರಂದು ಸುತ್ತೋಲೆ ಹೊರಡಿಸಿದ್ದ ಎಸ್‌ಬಿಐ, ಮೂರು ತಿಂಗಳಿಗಿಂತ ಹೆಚ್ಚು ಸಮಯವಾದ ಗರ್ಭಿಣಿಯರು ಕರ್ತವ್ಯಕ್ಕೆ ಸೇರಿಕೊಳ್ಳುವುದನ್ನು ತಡೆಯುವಂತೆ ಸೂಚಿಸಿತ್ತು. ಇದು ಎಸ್‌ಬಿಐನ ನಿಗದಿತ ಪ್ರಕ್ರಿಯೆಯಲ್ಲಿ ಉತ್ತೀರ್ಣಗೊಂಡಿದ್ದರೂ ಅನ್ವಯಿಸುತ್ತಿತ್ತು. ಈ ನೋಟಿಸನ್ನು ಹಂಚಿಕೊಂಡಿರುವ ಮಲಿವಾಲ್, ‘ಗರ್ಭಿಣಿಯು ತಾತ್ಕಾಲಿಕವಾಗಿ ಅನರ್ಹಳು ಎಂದು ಸುತ್ತೋಲೆ ಹೇಳುತ್ತದೆ ಮತ್ತು ಆಕೆ ಮಗುವಿಗೆ ಜನ್ಮನೀಡಿದ ನಾಲ್ಕು ತಿಂಗಳ ಒಳಗೆ ಸೇರಿಕೊಳ್ಳಲು ಅವಕಾಶ ನೀಡಬಹುದು ಎಂದು ಹೇಳಿದೆ’ ಎಂದಿದ್ದಾರೆ.
ಈ ಹಿಂದೆ ಆರು ತಿಂಗಳ ಗರ್ಭಿಣಿ ಅಭ್ಯರ್ಥಿಯರು ಎಸ್‌ಬಿಐನಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಅವಕಾಶವಿತ್ತು. ಆಕೆ ಈ ಹಂತದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿರುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದಿಲ್ಲ ಎಂದು ಪ್ರಸವ ತಜ್ಞರಿಂದ ಪ್ರಮಾಣಪತ್ರ ನೀಡಬೇಕಿತ್ತು. ಆದರೆ ಡಿಸೆಂಬರ್ 31ರಂದು ಮಾರ್ಗಸೂಚಿ ಹೊರಡಿಸಿದ್ದ ಎಸ್‌ಬಿಐ, ಮೂರು ತಿಂಗಳಿಗೂ ಅಧಿಕ ಸಮಯದ ಗರ್ಭಾವಸ್ಥೆಯಲ್ಲಿ ಇದ್ದರೆ, ಮಹಿಳೆಯು ತಾತ್ಕಾಲಿಕವಾಗಿ ಅನರ್ಹಳಾಗಿರುತ್ತಾಳೆ ಮತ್ತು ಆಕೆ ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳ ಒಳಗೆ ಬ್ಯಾಂಕ್ ನೌಕರಿಗೆ ಸೇರಬಹುದು’ ಎಂದು ಹೇಳಿತ್ತು.
ಮಾರ್ಗಸೂಚಿ ವಾಪಸ್ಸು
ತೀವ್ರ ಟೀಕೆಗೆ ಗುರಿಯಾದ ಬಳಿಕ ಎಸ್‌ಬಿಐ ತೀವ್ರ ಆಕ್ರೋಶಕ್ಕೆ ವ್ಯಕ್ತವಾದ ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಂಡಿದೆ. ಎಸ್‌ಬಿಐ ತನ್ನ ಮಾರ್ಗಸೂಚಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಟ್ವೀಟ್ ಮಾಡಿದೆ. ‘ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತಹ ಪರಿಷ್ಕೃತ ಸೂಚನೆಯನ್ನು ವಾಪಸ್ ಪಡೆಯಲಾಗಿದೆ’ ಎಂದು ಅದು ತಿಳಿಸಿದೆ.