ನವದೆಹಲಿ : ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ಜಾಮೀನು ಲಭಿಸಿದ ಎರಡು ದಿನಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಳೆದ ವರ್ಷ (2020) ಮೇ ತಿಂಗಳಲ್ಲಿ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಈ ಮೂವರು ಬಂಧನಕ್ಕೆ ಒಳಗಾಗಿದ್ದು ದೆಹಲಿ ಹೈಕೋರ್ಟ್ ಮೂವರಿಗೂ 2021ರ ಜೂನ್ 15ರಂದು ಜಾಮೀನು ನೀಡಿತ್ತು,
ಆದರೆ ಪೊಲೀಸರು ವಿಳಾಸ ಮತ್ತು ಶ್ಯೂರಿಟಿ ಪರಿಶೀಲನೆ ಮಾಡಬೇಕಾದ ಹಿನ್ನೆಲೆ ಮೂವರನ್ನು ತಕ್ಷಣ ಬಿಡುಗಡೆ ಮಾಡಲು ಕಡಕಡ್‌ಡೂಮಾ ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು. ತನಿಖಾಧಿಕಾರಿ ಬುಧವಾರ ಹೆಚ್ಚಿನ ಸಮಯಾವಕಾಶ ಕೋರಿದ್ದರು. ಈ ಕಾರಣದಿಂದಾಗಿ ನಿನ್ನೆ ( ಬುಧವಾರ) ಈ ಮೂವರು ಬಿಡುಗಡೆಯಾಗಿರಲಿಲ್ಲ.
ಈ ನಡುವೆ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ದೆಹಲಿ ಹೈಕೋರ್ಟ್ ಆದೇಶದಂತೆ ಜೈಲಿನಿಂದ ಶೀಘ್ರ ಬಿಡುಗಡೆಯಾಗಬೇಕೆಂದು ಮೂವರು ವಿದ್ಯಾರ್ಥಿಗಳು ಮೇಲ್ಮನವಿ ಸಲ್ಲಿಸಿದ್ದು ಈ ತುರ್ತು ಮೇಲ್ಮನವಿಯನ್ನು ಗುರುವಾರ ಆಲಿಸಲಾಗಿದೆ.
ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಕಡಕಡ್‌ಡೂಮಾ ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಕದ ತಟ್ಟಿದ್ದರು. ”ಹೈಕೋರ್ಟ್ ಜಾಮೀನು ನೀಡಿದ ನಂತರವೂ ಸರ್ಕಾರವು ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ,” ಎಂದು ಆರೋಪಿಸಿದ್ದರು.
ಈ ಹಿನ್ನೆಲೆ ದೆಹಲಿ ಹೈಕೋರ್ಟ್, ”ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು. ಆ ಬಳಿಕ ಹೈಕೋರ್ಟ್ ಮಧ್ಯಾಹ್ನ 3.30 ಕ್ಕೆ ವಿಚಾರಣೆ ನಡೆಸಲಿದೆ,” ಎಂದು ಗುರುವಾರ ಬೆಳಿಗ್ಗೆ ತಿಳಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತನ್ಹಾ, ಕಲಿತಾ, ನತಾಶಾ ಬಿಡುಗಡೆಗೊಳಿಸಿ ಕಡ್‌ಕಡ್‌ಡೂಮಾ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶದಂತೆ ಸಂಜೆಯ ವೇಳೆಗೆ ಮೂವರು ವಿದ್ಯಾರ್ಥಿಗಳನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಮೂವರು ಆರೋಪಿಗಳಿಗೆ 50,000 ರೂ. ವೈಯಕ್ತಿಕ ಬಾಂಡ್‌ಗಳ ಜಾಮೀನು ಮೇರೆಗೆ ಬಿಡುಗಡೆಯಾಗಿದ್ದಾರೆ.
ಹಾಗೆಯೇ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ನಿವಾಸ ಬದಲಾವಣೆಯ ಸಂದರ್ಭದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ. ಇದಲ್ಲದೆ, ಪ್ರಕರಣದ ಯಾವುದೇ ಸಾಕ್ಷಿದಾರರೊಂದಿಗೆ ಸಂಪರ್ಕವನ್ನು ಮಾಡದಂತೆ ಅಥವಾ ಸಾಕ್ಷ್ಯಗಳ ಹಾಳು ಮಾಡದಂತೆ ಆರೋಪಿಗಳಿಗೆ ಆದೇಶಿಸಿದೆ. ಜಾಮೀನಿನ ಮೇಲೆ ಹೊರಗಿರುವಾಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆಯೂ ಆರೋಪಿಗಳಿಗೆ ಆದೇಶಿಸಿದೆ.
ಫೆಬ್ರವರಿ 24, 2020 ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಹಿಂಸಾಚಾರ ನಡೆದಿತ್ತು. ಇದರಲ್ಲಿ, ಒಂದು ಬಣ ಸಿಎಎಗೆ ಬೆಂಬಲ ಸೂಚಿಸಿದರೆ, ಇನ್ನೊಂದು ಬಣ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕೇಂದ್ರ ಸರಕಾರ ಹಿಂಸಾಚಾರಕ್ಕೆ ಕುಮ್ಮಕ್ಕೂ ನೀಡಿದವರನ್ನು ಬಂಧಿಸುವ ಬದಲು ಈ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ದೀರ್ಘ ಕಾಲದಿಂದ ನ್ಯಾಯಾಂಗ ಬಂಧನದಲ್ಲಿದ್ದರು.
ಈ ಹಿಂಸೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಸಿಪಿಐಎಂ ಸತ್ಯಶೋಧನಾ ಸಮಿತಿ ಬಯಲು ಮಾಡಿತ್ತು.