- ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಇರಿಸಿದ್ದ ಮ್ಯಾಗ್ನೆಟಿಕ್ ಐಇಡಿ ಸ್ಪೋಟಕಗಳು ವಶ
- ಮಕ್ಕಳ ಟಿಫಿನ್ ಬಾಕ್ಸ್ಗಳಲ್ಲಿ ಟೈಮರ್ ಸೆಟ್ ಮಾಡಿ ಡ್ರೋನ್ ಮೂಲಕ ಸ್ಫೋಟಕಗಳ ರವಾನೆ
ಶ್ರೀನಗರ: ಜಮ್ಮು ಜಿಲ್ಲೆಯಲ್ಲಿ ವೈಮಾನಿಕ ಮಾರ್ಗದ ಮೂಲಕ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಹೊಸ ಪ್ರಯತ್ನ ನಡೆದಿದೆ. ಜಮ್ಮುವಿನ ಗಡಿ ಪ್ರದೇಶದಲ್ಲಿ ಡ್ರೋನ್ನಿಂದ ಬೀಳಿಸಿದ ಮೂರು ಮ್ಯಾಗ್ನೆಟಿಕ್ ಐಇಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಖ್ನೂರ್ ಸೆಕ್ಟರ್ನ ಕನಚಕ್ನ ಕಾಂಟೋವಾಲಾ-ದಯಾರನ್ ಪ್ರದೇಶದಲ್ಲಿ ಟೈಮರ್ಗಳನ್ನು ಹೊಂದಿಸಿ ಟಿಫಿನ್ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಲಾದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಕನಚಕ್ನ ದಯಾರನ್ ಪ್ರದೇಶದಲ್ಲಿ ಡ್ರೋನ್ ಅನ್ನು ಗಮನಿಸಿದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದವು. ಅದರಲ್ಲಿದ್ದ ಸ್ಪೋಟಕಗಳನ್ನು ಹೊರತೆಗೆದವು ಎಂದು ಎಡಿಜಿಪಿ ತಿಳಿಸಿದ್ದಾರೆ.
ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಡ್ರೋನ್ ಮೂಲಕ ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ಭಯೋತ್ಪಾದಕರು ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ.,ಏಳು ಮ್ಯಾಗ್ನೆಟಿಕ್ ಬಾಂಬ್ಗಳು, ಏಳು ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್) ಗ್ರೆನೇಡ್ಗಳನ್ನು ಹೊತ್ತ ಪಾಕಿಸ್ತಾನದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮೇ 29ರಂದು ಪೊಲೀಸರು ಹೊಡೆದುರುಳಿಸಿದ್ದರು. ಕಳೆದ ತಿಂಗಳು ಹಲವು ಬಾರಿ ಪಾಕಿಸ್ತಾನದ ಡ್ರೋನ್ಗಳು ಭಾರತದ ಗಡಿಯೊಳಕ್ಕೆ ನುಸುಳಲು ವಿಫಲ ಯತ್ನ ನಡೆಸಿದ್ದವು. ಇಂತಹ ಪ್ರಯತ್ನಗಳನ್ನು ಯೋಧರು ವಿಫಲಗೊಳಿಸುತ್ತಲೇ ಬಂದಿದ್ದಾರೆ.