ಜುಲೈ 10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ದಿನ ಆಚರಣೆಗೆ ಅಂಗನವಾಡಿ ನೌಕರರ ಸಂಘದ ರಾಜ್ಯ ಕೌನ್ಸಿಲ್ ಸಭೆ ತೀರ್ಮಾನ
ಬೆಂಗಳೂರು: ರಾಜ್ಯದ ಅಂಗನವಾಡಿ ನೌಕರರಿಗೆ 1000 ಸಾವಿರ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದರೂ ಅದು ಈ ವರೆಗೂ ನೀಡಿಲ್ಲ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸುಮಾರು 3 ಲಕ್ಷ ಕುಟುಂಬಗಳಿಗೆ ನಂಬಿಸಿ ಮೋಸ ಮಾಡಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಗರದ ಸಂಪಂಗಿನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕೌನ್ಸಿಲ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್. ವರಲಕ್ಷ್ಮಿ, “ಗುಣಮಟ್ಟದ ಆಹಾರ ಸಮಸ್ಯೆ, ಅಂಗನವಾಡಿ ನೌಕರರಿಗೆ ನೀಡಲಾಗಿರುವ ಮೊಬೈಲ್ ಸಮಸ್ಯೆ, ಬಜೆಟ್‌ನಲ್ಲಿ ಮಂಡಿಸಲಾಗಿದ್ದ 1000 ರೂ. ನೀಡುವ ಬಗ್ಗೆ ಹಾಗೂ ಇ-ಸರ್ವೆ ಸಮಸ್ಯೆಗಳನ್ನು ಹೊಸ ಸರ್ಕಾರ ಪರಿಹರಿಸಬೇಕಿದೆ. ಈ ಎಲ್ಲಾ ಸಮಸ್ಯೆಯಿಂದಾಗಿ ಅಂಗನವಾಡಿ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ” ಎಂದು ಹೇಳಿದರು.
ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ಜುಲೈ 10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ದಿನ ಆಚರಣೆ ಮಾಡಲಿದ್ದೇವೆ ಎಂದು ವರಲಕ್ಷ್ಮಿ ಅವರು ಹೇಳಿದರು. ಒಂದು ವೇಳೆ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
“ನಾಲ್ಕು ವರ್ಷಗಳ ಹಿಂದೆ ನೀಡಲಾಗಿದ್ದ ಕಳೆಪೆ ಗುಣಮಟ್ಟದ ಮೊಬೈಲ್ ಅಲ್ಲಿ ಅಂಗನವಾಡಿ ನೌಕರರು ಇಲಾಖೆಯ ಕೆಲಸವನ್ನು ಮಾಡಿಕೊಡುತ್ತಿದ್ದಾರೆ. ಆದರೆ ಈ ಮೊಬೈಲ್‌ಗಳು ಈಗ ಹಾಳಾಗಿವೆ. ದಾಖಲೆಗಳ ಡಿಜಿಟಲ್ ಆಗುವ ಬಗ್ಗೆ ನಮಗೆ ಯಾವುದೆ ತಕರಾರಿಲ್ಲ. ಆದರೆ ಅವರಿಗೆ ನೀಡಲಾಗಿರುವ ಕಳಪೆ ಗುಣಮಟ್ಟದ ಮೊಬೈಲ್‌ಗಳಲ್ಲಿ ಈ ವ್ಯವಸ್ಥೆಯಿಲ್ಲ. ಇಲಾಖೆಯ ಎಲ್ಲಾ ಸರ್ವೆಗಳನ್ನೂ ಇದೆ ಮೊಬೈಲ್ ಅಲ್ಲಿ ಮಾಡಬೇಕು” ಎಂದು ಹೇಳಿದರು.
“ಇದೀಗ ಹೊಸತಾಗಿ ಇ-ಸರ್ವೇ ಕೂಡಾ ಅದರಲ್ಲೆ ಮಾಡಬೇಕು. ಆದರೆ ಅದರಲ್ಲಿ ಇ ಸರ್ವೇ ಅದರಲ್ಲಿ ಸಾಧ್ಯವೇ ಇಲ್ಲ ಎಂದು ಹೇಳಿದ್ದೇವೆ. ಆದರೆ ಅಧಿಕಾರಿಗಳು ಅದರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಂತಹ ಮೆಟ್ರೋ ಪಾಲಿಟನ್ ನಗರದಲ್ಲೆ ಬಿಎಸ್ಎನ್ಎಲ್ ಟವರ್ ಸಿಗುವುದಿಲ್ಲ. ಅಂತದ್ದರಲ್ಲಿ ರಾಜ್ಯದ ಬೇರೆ ಪ್ರದೇಶಗಳ ಬಗ್ಗೆ ಊಹಿಸಿ ನೋಡಿ. ಹೀಗಾಗಿ ಜುಲೈ 10 ಪ್ರತಿಭಟನೆಯ ವೇಳೆ ಅದನ್ನು ಸರ್ಕಾರಕ್ಕೆ ವಾಪಾಸು ನೀಡಲಿದ್ದೇವೆ” ಎಂದು ವರಲಕ್ಷ್ಮಿ ಅವರು ತಿಳಿಸಿದರು.
“ಅಂಗನವಾಡಿ ನೌಕರರಿಗೆ 1000 ರೂ. ಗೌರವಧನ ನೀಡಲಿದ್ದೇವೆ ಎಂದು ಬಜೆಟ್‌ನಲ್ಲಿ ಹೇಳಿದ್ದ ಬಿಜೆಪಿ ಸರ್ಕಾರ, ಅದನ್ನು ಜಾರಿ ಮಾಡಿಲ್ಲ. ಬಜೆಟ್‌ನಲ್ಲಿ ಹೇಳಿ ನೀಡದೆ ಇರುವ ಘಟನೆ ಬಹುಷಃ ಇದು ಮೊದಲನೇ ಬಾರಿ. ಸುಮಾರು 2.6 ಲಕ್ಷ ಅಂಗನವಾಡಿ ನೌಕರರು ಹಾಗೂ 40 ಸಾವಿರ ಆಶಾ ಕಾರ್ಯಕರ್ತೆಯ ಒಟ್ಟು ಮೂರು ಲಕ್ಷ ಕುಟುಂಬಕ್ಕೆ ಬಿಜೆಪಿಯ ಬೊಮ್ಮಾಯಿ ಸರ್ಕಾರ ನಂಬಿಸಿ ಮೋಸ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“1000 ರೂ ಹೆಚ್ಚಳ ಮಾಡುತ್ತೇವೆ ಎಂದ ಸರ್ಕಾರ ಅವನ್ನು ಇನ್ನೂ ಮಾಡಿಲ್ಲ. ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ 1000 ಗೌರವ ಧನ ಹೆಚ್ಚಿಸುವ ಘೋಷಣೆ ಮಾಡಬೇಕು. ಅಂಗನವಾಡಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಚೆನ್ನಾಗಿಲ್ಲ. ಅವುಗಳನ್ನು ಸರಿಪಡಿಸಬೇಕು. ಪ್ರಾದೇಶಿಕವಾಗಿ ಬಳಸುವ ಆಹಾರ ಧಾನ್ಯಗಳನ್ನು ನೀಡಬೇಕಿದೆ. ಉತ್ತಮ ಗುಣಮಟ್ಟದ ಮೊಟ್ಟೆ ಮತ್ತು ಎಣ್ಣೆಯನ್ನು ಅಂಗನವಾಡಿಗೆ ನೀಡಬೇಕು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ (ಸಿಐಟಿಯು ಸಂಯೋಜಿತ) ಸಂಘದ ಕಾರ್ಯಾಧ್ಯಕ್ಷರಾದ ಶಾಂತಾ ಘಂಟೆ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಖಜಾಂಚಿ ಜಿ. ಕಮಲ, ಸಂಘದ ರಾಜ್ಯ ಪದಾಧಿಕಾರಿಗಳಾದ ಯಮುನಾ ಗಾಂವ್ಕರ್, ಗುಲ್ಜಾರ್, ದೊಡ್ಡವ್ವ ಪೂಜಾರಿ, ಲಕ್ಷ್ಮಿ ದೇವಮ್ಮ, ಉಮಾ ಬಳ್ಳಾರಿ, ಪದ್ಮ ರಾಯಚೂರು, ಪುಷ್ಪ ಹಾಸನ ಉಪಸ್ಥಿತರಿದ್ದರು.