ನವದೆಹಲಿ: ಜನವರಿ 2017 ರಿಂದ ಕಳೆದ ಆರು ವರ್ಷಗಳಲ್ಲಿ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಉತ್ತರ ಕೊರಿಯಾ ಮೂಲದ ಹಾಗೂ ಅಲ್ಲಿನ ಸರ್ಕಾರಿ ಬೆಂಬಲಿತ ಹ್ಯಾಕರ್ಗಳು ಕದ್ದಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಸೈಬರ್ ಸೆಕ್ಯುರಿಟಿ ಕಂಪನಿ ರೆಕಾರ್ಡೆಡ್ ಫ್ಯೂಚರ್ ಪ್ರಕಾರ ಕಿಮ್ಸುಕಿ, ಲಾಜರಸ್ ಗ್ರೂಪ್, ಆಂಡರಿಯಲ್ ಮತ್ತು ಇತರ ಉತ್ತರ ಕೊರಿಯಾದ ಹ್ಯಾಕಿಂಗ್ ಗುಂಪುಗಳು ಇಂಥ ದಾಳಿ ನಡೆಸುತ್ತಿವೆ.
“ಆರಂಭದಲ್ಲಿ ಸ್ವಿಫ್ಟ್ ನೆಟ್ವರ್ಕ್ ಅನ್ನು ಹೈಜಾಕ್ ಮಾಡುವ ಮೂಲಕ ಹಣಕಾಸು ಸಂಸ್ಥೆಗಳಿಂದ ಸಂಪತ್ತು ಕದಿಯುವಲ್ಲಿ ಯಶಸ್ವಿಯಾದ ಉತ್ತರ ಕೊರಿಯಾ, 2017 ರ ಕ್ರಿಪ್ಟೊ ಅಲೆಯ ಸಮಯದಲ್ಲಿ ಕ್ರಿಪ್ಟೋಕರೆನ್ಸಿ ಕದಿಯಲು ಆರಂಭಿಸಿತು. ಕದಿಯುವಿಕೆ ದಕ್ಷಿಣ ಕೊರಿಯಾದ ಮಾರುಕಟ್ಟೆಯಿಂದ ಆರಂಭವಾಗಿ ಜಾಗತಿಕವಾಗಿ ವಿಸ್ತರಿಸಿತು” ಎಂದು ಸಂಶೋಧಕರು ತಿಳಿಸಿದ್ದಾರೆ.
ಹ್ಯಾಕರ್ಗಳು 2022 ರ ವರ್ಷವೊಂದರಲ್ಲಿಯೇ 1.7 ಬಿಲಿಯನ್ ಡಾಲರ್ ಕ್ರಿಪ್ಟೋಕರೆನ್ಸಿಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇದು ದೇಶದ ಆರ್ಥಿಕತೆಯ ಶೇಕಡಾ 5 ಅಥವಾ ಅದರ ಮಿಲಿಟರಿ ಬಜೆಟ್ನ ಶೇಕಡಾ 45 ಕ್ಕೆ ಸಮನಾಗಿದೆ.
ವರದಿಯ ಪ್ರಕಾರ, ಸಾಂಪ್ರದಾಯಿಕ ಸೈಬರ್ ಕ್ರಿಮಿನಲ್ ಗುಂಪುಗಳಿಗೆ ಹೋಲುವ ವಿಧಾನಗಳನ್ನು ಬಳಸಿಕೊಂಡು ಕದ್ದ ಹಣವನ್ನು ಆಗಾಗ ಲಾಂಡರಿಂಗ್ ಮಾಡಲಾಗುತ್ತದೆ. ಇದು ಸರ್ಕಾರಕ್ಕೆ ಕೂಡ ಆದಾಯ ತರುತ್ತಿದೆ. ಸರ್ಕಾರವೇ ಹ್ಯಾಕರ್ಗಳ ಬೆಂಬಲಕ್ಕೆ ನಿಲ್ಲುವುದರಿಂದ ಅಂತರರಾಷ್ಟ್ರೀಯ ನಿರ್ಬಂಧಗಳು ಇವರ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.
ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ಗಳು ಮಾತ್ರವಲ್ಲದೆ ವೈಯಕ್ತಿಕ ಬಳಕೆದಾರರು, ಬಂಡವಾಳ ಹೂಡಿಕೆ ಸಂಸ್ಥೆಗಳು ಮತ್ತು ಆಧುನಿಕ ತಂತ್ರಜ್ಞಾನ ಕಂಪನಿಗಳ ಮೇಲೆ ಹ್ಯಾಕಿಂಗ್ ದಾಳಿ ಮಾಡಲಾಗುತ್ತಿದೆ. ಕದ್ದ ಕ್ರಿಪ್ಟೋಕರೆನ್ಸಿಯನ್ನು ಆಗಾಗ್ಗೆ ಫಿಯೆಟ್ ಕರೆನ್ಸಿಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಉತ್ತರ ಕೊರಿಯಾದ ಹ್ಯಾಕರ್ಗಳು ಕದ್ದ ಸಾಕ್ಷಿಗಳನ್ನು ಅಳಿಸಲು ವಿವಿಧ ತಂತ್ರಗಳನ್ನು ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಉತ್ತರ ಕೊರಿಯಾ ಸರ್ಕಾರ ಕ್ರಿಪ್ಟೋಕರೆನ್ಸಿ ಕಳ್ಳತನವನ್ನು ತನ್ನ ಪ್ರಮುಖ ಆದಾಯದ ಮೂಲ ಮಾಡಿಕೊಂಡಿದೆ. ವಿಶೇಷವಾಗಿ ಮಿಲಿಟರಿ ಮತ್ತು ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ಈ ಹಣವನ್ನು ಅದು ಬಳಸುತ್ತಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳಿಗೆ ಎಷ್ಟು ಪ್ರಮಾಣದಲ್ಲಿ ಇಂಥ ಕದ್ದ ಹಣ ಬಳಸಲಾಗುತ್ತಿದೆ ಎಂಬುದು ಅಸ್ಪಷ್ಟವಾಗಿದ್ದರೂ, ಕ್ರಿಪ್ಟೋಕರೆನ್ಸಿ ಕದಿಯುವಿಕೆ ಮತ್ತು ಕ್ಷಿಪಣಿ ಉಡಾವಣೆ ಎರಡೂ ಹೆಚ್ಚಾಗುತ್ತಿವೆ” ಎಂದು ಸಂಶೋಧಕರು ಹೇಳಿದ್ದಾರೆ.