ಸಿಕ್ಕಿಂ: ಭಾರತೀಯ ಸೇನಾ ವಾಹನವೊಂದು ಕಣಿವೆಗೆ ಉರುಳಿದ ಪರಿಣಾಮ 16 ಯೋಧರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ದುರ್ಘಟನೆಯು ಉತ್ತರ ಸಿಕ್ಕಿಂನ ಝೆಮಾ ಎಂಬಲ್ಲಿ ನಡೆದಿದೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘನೆ ಸಂಭವಿಸಿದ್ದು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದಿಂದಾಗಿ ಮೂವರು ಅಧಿಕಾರಿಗಳು ಸೇರಿದಂತೆ ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನೆಯ ಮುಖ್ಯಸ್ಥರು ತಿಳಿಸಿದ್ದಾರೆ. ಇದು ಮೂರು ವಾಹನದ ಬೆಂಗಾವಲು ಪಡೆಯ ಭಾಗವಾಗಿತ್ತು ಎಂದು ಸೇನೆ ತಿಳಿಸಿದೆ.
ಇದನ್ನು ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ: ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು – ಸಂಸತ್ ಆವರಣದಲ್ಲಿ ಪ್ರತಿಭಟನೆ
ಸೈನಿಕರು ಪ್ರಯಾಣಿಸುತ್ತಿದ್ದ ವಾಹನವು ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿ ಕಣಿವೆಗೆ ಬಿದ್ದಿದೆ. ವಾಹನವು ಬೆಳಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಹೊರಟಿತ್ತು. ಝೆಮಾದಲ್ಲಿ ಸಾಗುತ್ತಿದ್ದಾಗ ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಆಯತಪ್ಪಿ ಉರುಳಿದೆ ಎಂದು ಸೇನೆ ಹೇಳಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರು ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸ್ಥಳದಿಂದ ಎಲ್ಲಾ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರು ಸೇನಾ ಸಿಬ್ಬಂದಿಗಳ ಸ್ಥಿತಿ ಇನ್ನೂ ತಿಳಿದಿಲ್ಲ ಎಂದು ಲಾಚೆನ್‌ನಿಂದ ಪೊಲೀಸ್ ತಂಡದೊಂದಿಗೆ ಸ್ಥಳದಲ್ಲಿದ್ದ ಚುಂಗ್‌ಥಾಂಗ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅರುಣ್ ಥಾಟಲ್ ಹೇಳಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗ್ಯಾಂಗ್‌ಟಾಕ್‌ನ ಸರ್ಕಾರಿ ಎಸ್‌ಟಿಎನ್‌ಎಂ ಆಸ್ಪತ್ರೆಗೆ ರವಾನಿಸಲಾಗಿದೆ. ನಂತರ ಸೇನೆಗೆ ಹಸ್ತಾಂತರಿಸಲಾಗುವುದು.
ಇದನ್ನು ಓದಿ: ಈಶಾನ್ಯದ ಕೆಲವೆಡೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವ್ಯಾಪ್ತಿ ಕಡಿತ: ಅಮಿತ್ ಶಾ
ಈ ಬಗ್ಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಸಿಕ್ಕಿಂನಲ್ಲಿ ಸಂಭವಿಸಿದ ಅಪಘಾತದಿಂದ ನಮ್ಮ ಸೈನಿಕರು ಸಾವನ್ನಪ್ಪಿರುವುದು ನೋವಾಗಿದೆ. ಮೃತರಿಗೆ ಸಂತಾಪ ಸೂಚಿಸಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಭಾರತೀಯ ಸೇನೆಯ ಸಿಬ್ಬಂದಿಯ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ