ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹಿಜಾಬ್ ಸೇರಿ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶವಿಲ್ಲವೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಚಿವರು, 2021-22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯುತ್ತಿದ್ದು ಪರೀಕ್ಷೆಗೆ ಹಿಜಾಬ್ ಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಘೋಷಿಸಿದ್ದಾರೆ.
ಇದನ್ನು ಓದಿ: ಹಿಜಾಬ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಎಸ್‌ಎಸ್‌ಎಲ್‌ಸಿ ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ ಎಂದು ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಮಾದರಿ ಪ್ರಶ್ನೆಪತ್ರಿಕೆಯಂತೆ ಅಂತಿಮ ಪರೀಕ್ಷೆ ಇರುತ್ತೆ. ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಮಾಡುವಲ್ಲಿ ಮಕ್ಕಳಿಗೆ ಧೈರ್ಯ ತುಂಬುವಂತೆ ಸಚಿವ ಬಿಸಿ ನಾಗೇಶ್ ಪೊಷಕರಿಗೆ ಸಲಹೆ ನೀಡಿದ್ದಾರೆ.
ಪರೀಕ್ಷೆಯು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು ಒಟ್ಟು 6,84,255 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 3,46,936 ಬಾಲಕಿಯರು ಹಾಗೂ 3,37,319 ಬಾಲಕರು ನೊಂದಣಿ ಮಾಡಿಕೊಂಡವರು.
ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 2,28,167, ವಾಣಿಜ್ಯ ವಿಭಾಗ 2,45,519 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದರು.
ಇದನ್ನು ಓದಿ: ಶಿರವಸ್ತ್ರ ವಿವಾದದಿಂದ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ವಂಚನೆಗೊಳಗಾಗದಂತೆ ಕ್ರಮವಹಿಸಲು ಸಾಹಿತಿ ಕಲಾವಿದರ ಆಗ್ರಹ
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಸೋರಿಕೆ ತಡೆಗೆ ಕ್ರಮ ವಹಿಸಲಾಗಿದೆ. ಅಕ್ರಮ ತಡೆಯಲು 2152 ಜಾಗೃತದಳ, 858 ತಾಲ್ಲೂಕು ಜಾಗೃತ ದಳ ಮತ್ತು 64 ಜಿಲ್ಲಾ ಜಾಗೃತ ದಳ ಕಾರ್ಯ ನಿರ್ವಹಿಸಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯು ಉಚಿತ ಬಸ್ ಸೇವೆಯನ್ನು ಒದಗಿಸಿದೆ. ಇನ್ನು ಪರೀಕ್ಷೆ ಸಂಬಂಧ ಸಮಸ್ಯೆ ಇದ್ದರೆ, ಸಹಾಯವಾಣಿ ಸಂಖ್ಯೆ 080-23080864 ಕರೆ ಮಾಡಿ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಬಹುದು ಹಾಗೂ ದೂರು ನೀಡಬಹುದು.