ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯಳಬುರ್ಗಿ ಗ್ರಾಮದ 25 ವರ್ಷದ ಎನ್.ಗಾಯತ್ರಿ ಅವರ ಸತತ ಪರಿಶ್ರಮದಿಂದಾಗಿ ತಮ್ಮ ಕನಸು ನನಸಾಗಿಸಿಕೊಂಡಿದ್ದು, ಕರ್ನಾಟಕ ಹೈಕೋರ್ಟಿನ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
2021ರಲ್ಲಿ ಕಾನೂನು ಪದವಿ ಪಡೆದ ಗಾಯತ್ರಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.
ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮ ಅವರ ಪುತ್ರಿ ಎನ್.ಗಾಯತ್ರಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು ಬಂಗಾರಪೇಟೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಮನೆಯಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ಮಹಿಳೆಯಾದ ಗಾಯತ್ರಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಮತ್ತಷ್ಟು ಸಂತಸವನ್ನು ಹೆಚ್ಚಿಸಿದೆ.
ಬಡತನದ ಹಿನ್ನೆಲೆಯಿಂದ ಬಂದ ಎನ್.ಗಾಯತ್ರಿ ಅವರು ತಾಲೂಕಿನ ಕಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪಿಯು ಶಿಕ್ಷಣ ಪಡೆದುಕೊಂಡಿದ್ದಾರೆ. ಕೋಲಾರದ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿ, ಕೆಜಿಎಫ್ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿ ಕರ್ನಾಟಕಕ್ಕೆ 4ನೇ ರ್‍ಯಾಂಕ್ ಬರುವ ಮೂಲಕ ಗಮನ ಸೆಳೆದಿದ್ದಾರೆ.
ಪಟ್ಟಣದ ವಕೀಲ ಶಿವಸುಬ್ರಮಣ್ಯ ಬಳಿ ತರಬೇತಿ ವಕೀಲಿ ವೃತ್ತಿ ಮಾಡುತ್ತಿದ್ದ ಗಾಯತ್ರಿ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.