ಅರಸೀಕೆರೆ : ದೂರು ನೀಡಲು ಬಂದ ಇಬ್ಬರು ದಲಿತ ಯುವಕರನ್ನು ಬಾಣಾವರ ಪೊಲೀಸ್ ಠಾಣೆಯ ಪಿಎಸ್‌ಐ ಠಾಣೆಯಲ್ಲೇ ಕೂಡಿ ಹಾಕಿರುವ ಬಗ್ಗೆ ವರದಿಯಾಗಿದೆ. ತಮ್ಮ ತಂದೆ ಹಾಗೂ ತಾಯಿಗೆ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇಬ್ಬರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಯುವಕರಿಬ್ಬರು ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ವೇಳೆ ಕೂಡಿ ಹಾಕಲಾಗಿತ್ತು ಎಂದು ದಲಿತ ಮುಖಂಡು ಆರೋಪಿಸಿದ್ದಾರೆ.
ಮಾಹಿತಿ ತಿಳಿದ ಕೆಲವು ದಲಿತ ಮುಖಂಡರು ಪೊಲೀಸ್ ಠಾಣೆಗೆ ತೆರಳಿ, ಯುವಕರನ್ನು ಬಿಟ್ಟು ಕಳುಹಿಸುವಂತೆ ಪಿಎಸ್ ಐ ಅಭಿಜಿತ್ ಗೆ ಒತ್ತಾಯಿಸಿದ್ದಾರೆ. ಬಳಿಕ ಮಾರಣಾಂತಿಕ ಹಲ್ಲೆ ನಡೆಸಿ, ಜಾತಿನಿಂದನೆಗೈದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಬಾಣಾವರ ಹೋಬಳಿಯ ಹಿರಿಯೂರು ಗ್ರಾಮದ ಜಯಣ್ಣ ಮತ್ತು ಅವರ ಪತ್ನಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅದೇ ಗ್ರಾಮದ ಸ್ವಾಮಿ ಮತ್ತು ಅವರ ಪತ್ನಿ ಏಕಾಏಕಿ ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜಯಣ್ಣ ಮತ್ತು ಅವರ ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಜಯಣ್ಣ ಮತ್ತು ಅವರ ಪತ್ನಿ ಸರ್ಕಾರಿ ಆಸ್ಪತ್ರೆ ಅರಸೀಕೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ದಂಪತಿಯ ಮಕ್ಕಳಾದ ಅರುಣ್ ಮತ್ತು ನಿರಂಜನ್ ದೂರು ನೀಡಲು ಬಾಣಾವರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಪಿಎಸ್‌ಐ ಅಭಿಜಿತ್ ದೂರು ನೀಡಲು ಬಂದ ಇಬ್ಬರು ಯುವಕರನ್ನು ಬೆದರಿಸಿ ಠಾಣೆಯಲ್ಲಿ ಆರೋಪಿಗಳಂತೆ ಸುಮಾರು 10 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ.