ಊಟ ಸರಿಯಿಲ್ಲ ಅಂತಾ ಕೇಳಿದ್ದಕ್ಕೆ 25 ವಿದ್ಯಾರ್ಥಿಗಳು ಹೊರಕ್ಕೆ

ಬಳ್ಳಾರಿ: ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದರು ಎಂಬ ಕಾರಣಕ್ಕೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಹೊರಹಾಕಿರುವ ಘಟನೆ ಬಳ್ಳಾರಿಯಿಂದ ವರದಿಯಾಗಿದೆ. ನಗರದ ಕೌಲ್‌ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಊಟದ ವಿರುದ್ಧ ಪ್ರತಿಭಟಿಸಿದ 25 ವಿದ್ಯಾರ್ಥಿಗಳನ್ನು ಗುರುವಾರ ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಬುಧವಾರ ರಾತ್ರಿ ಕೋಳಿ ಸಾರು ನೀಡಲಾಗಿತ್ತು. ಈ ಸಾರು ಕಳಪೆಯಾಗಿದ್ದನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು. ಆನಂತರ ವಿದ್ಯಾರ್ಥಿಗಳು ಸಾರಿನ ಬಕೆಟ್ ಸಮೇತ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಅವರ ಮನೆಗೆ ಹೋಗಿದ್ದಾರೆ. ಹಾಸ್ಟೆಲ್‌ನಲ್ಲಿ ಕಳಪೆ ಊಟ ಕೊಡುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಲ ದೂರು ಕೊಡಲಾಗಿದೆ. ಆದರೆ, ಯಾರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಇದನ್ನೂ ಓದಿಬಯಲೇ ಶೌಚಾಲಯ! ಹಸಿ ಸೌದೆ ಬಳಸಿ ಅಡುಗೆ!! ಇದು ಸರಕಾರಿ ಹಾಸ್ಟೇಲ್‌ನ ಅವ್ಯವಸ್ಥೆ.

 

ಘಟನೆ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳು, ಈ ಹಿಂದೆ ನಿಲಯ ಪಾಲಕರಿಂದ ಸಮಸ್ಯೆ ಆಗುತ್ತಿದೆ ಅವರನ್ನು ಬದಲಾಯಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಸ್ಟೆಲ್​ನಲ್ಲಿ ಊಟ ಚೆನ್ನಾಗಿರಲ್ಲ. ಅದನ್ನು ದೂರಿದರೆ ಅದು ಕೂಡಾ ನಮ್ಮದೇ ತಪ್ಪಾಗುತ್ತದೆ. ನಿನ್ನೆ ಚಿಕನ್​ ಸಾರು ತಿಂದ ಕೆಲವರು ಇಂದು ಗಂಟಲು ಉರಿಯಾಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಹಾಸ್ಟೆಲ್​ನಲ್ಲಿ ಹಲವಾರು ಸಮಸ್ಯೆ ಇದೆ. ಬಹಳಷ್ಟು ಬಾರಿ ನಾವು ಸಮಸ್ಯೆಯನ್ನು ಹೇಳಿಕೊಂಡಿದ್ದೇವೆ. ಆದರೆ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಸಮಸ್ಯೆ ಹೇಳಿಕೊಂಡರೂ ಅದು ನಮ್ಮದೇ ತಪ್ಪಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಎಸ್‌ಎಫ್‌ಐ ನಿಂದ ಸಭೆ : 25 ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಲು ಮೌಖಿಕವಾಗಿ ಹೇಳಿದನ್ನು ಖಂಡಿಸಿ ನಿನ್ನೆ ರಾತ್ರಿ ಬಳ್ಳಾರಿಯ ಹಾಸ್ಟೆಲ್‌ನಲ್ಲಿ ಎಸ್‌ಎಫ್‌ಐ ಸಭೆ ನಡೆಸಿದೆ. ಊಟ ಸರಿಯಾಗಿಲ್ಲ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಹೊರ ಹಾಕಿದ್ದು ಸರಿಯಾದ ಕ್ರಮವಲ್ಲ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ ಆರೋಪಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಯಾವುದೇ ವಿದ್ಯಾರ್ಥಿಯನ್ನು ಹೊರಹಾಕಬಾರದು ಮತ್ತು ಹೊರಹಾಕಲು ಸೂಚಿಸಿದ ಪಟ್ಟಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಅಧಿಕಾರಿಗಳು ಆ ವಿದ್ಯಾರ್ಥಿಗಳನ್ನು ವಾಪಸ್ಸ ಸೇರಿಸಿಕೊಳ್ಳಲು ಸೂಚನೇ ನೀಡಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಅಮರೇಶ್‌ ಕಡಗದ ಮಾಹಿತಿ ನೀಡಿದ್ದಾರೆ. ಈ ವೇಳೆ ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರಡ್ಡಿ, ಮೈನು ಡಿವೈಎಫ್‌ಐ   ಮುಖಂಡರಾದ ಯರ್ರಿಸ್ವಾಮಿ ಇದ್ದರು.
Donate Janashakthi Media

Leave a Reply

Your email address will not be published. Required fields are marked *