ಸಿಪಿಐ(ಎಂ) 24ನೇ ಮಹಾಧಿವೇಶನ| ವಿಶ್ವದ ಶೇಕಡ 25 ರಷ್ಟು ಜನರು ಈಗಾಗಲೇ ಸಮಾಜವಾದದ ನೆರಳಿನಲ್ಲಿದ್ದಾರೆ – ಎಂ.ಎ. ಬೇಬಿ

ಮದುರೈ: ಕೆಂಪು ಬಾವುಟವೇ ಭವಿಷ್ಯ ಎಂದು ಸಿಪಿಎಂನ ನೂತನ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದರು. ಏಪ್ರಿಲ್ 6 ರಂದು ಮದುರೈನ ಎನ್. ಶಂಕರಯ್ಯ ಮೈದಾನ (ರಿಂಗ್‌ ರೋಡ್ ಮೈದಾನ) ದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿಪಿಎಂ

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಮೊದಲ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿ, ವಿಶ್ವದ ಜನಸಂಖ್ಯೆಯ ಶೇಕಡಾ 25 ರಷ್ಟು ಜನರು ಈಗಾಗಲೇ ಸಮಾಜವಾದದ ನೆರಳಿನಲ್ಲಿದ್ದಾರೆ, ಪ್ರಗತಿಪರ ಶಕ್ತಿಗಳಿಂದ ಆಳಲ್ಪಡುವ ದೇಶಗಳ ಜನಸಂಖ್ಯೆಯನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಸಹ ನಮ್ಮ ಬಳಿ ಇವೆ ಎಂದು ಹೇಳಿದರು.

ಇದಕ್ಕೂ ಮೊದಲು, ಏಪ್ರಿಲ್ ಎರಡರಿಂದ ಐದು ದಿನಗಳ ಕಾಲ ಸ್ಥಳೀಯ ಸೀತಾರಾಮ್ ಯೆಚೂರಿ ನಗರದಲ್ಲಿ ನಡೆದ ಸಿಪಿಎಂನ 24 ನೇ ಅಖಿಲ ಭಾರತ ಮಹಾಸಭಾ ಏಪ್ರಿಲ್ 6ರಂದು ಭಾನುವಾರ ಉತ್ಸಾಹದೊಂದಿಗೆ ಮುಗಿಯಿತು.

ಇದನ್ನೂ ಓದಿ: ಟ್ರಂಪ್ ಹೊಸ ಸುಂಕ ನೀತಿ – ಚೀನಾದ ಮೇಲೆ ಶೇ.104ರಷ್ಟು ತೆರಿಗೆ

ಲಕ್ಷಾಂತರ ಜನರು ಭಾಗಿ

ಸಮ್ಮೇಳನ ಮುಗಿದ ನಂತರ, ಸ್ಥಳೀಯ ಮಧುರೈ ಪಾಂಡಿ ಗುಡಿ ಸೆಂಟರ್ ನಿಂದ ಬೃಹತ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಲಕ್ಷಾಂತರ ಜನರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಪ್ರದರ್ಶನದ ಮುಂಚೂಣಿಯಲ್ಲಿ ಸಾವಿರಾರು ಮಂದಿ ಕೆಂಪು ಅಂಗಿ ಧರಿಸಿದ ಸ್ವಯಂಸೇವಕರು ಕವಾಯತು ನಡೆಸಿದರು.

ಇದರ ಪರಿಣಾಮವಾಗಿ ಮೆರವಣಿಗೆ ನಡೆದ ಸುತ್ತಮುತ್ತಲಿನ ಪ್ರದೇಶಗಳು ಕೆಂಪು ಸಮುದ್ರದಂತೆ ಕಾಣುತ್ತಿದ್ದವು. ನಂತರ ನಡೆದ ಸಾರ್ವಜನಿಕ ಸಭೆಗೆ ಸಿಪಿಎಂ ತಮಿಳುನಾಡು ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅಧ್ಯಕ್ಷತೆ ವಹಿಸಿದ್ದರು.

ಶಂಕರಯ್ಯ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಲಕ್ಷಾಂತರ ಜನರಿಂದ ತುಂಬಿ ತುಳುಕುತ್ತಿದ್ದವು, ತಮ್ಮ ಭಾಷಣದ ಆರಂಭದಲ್ಲಿ ಬೇಬಿಯವರು ಈ ವಿಷಯವನ್ನು ಪ್ರಸ್ತಾಪಿಸುತ್ತ, ಐತಿಹಾಸಿಕವಾಗಿ ಪ್ರಸಿದ್ಧವಾದ ಮಧುರೈ ನಗರ ಸುಂದರವಾದ ಕೆಂಪು ಬಣ್ಣಕ್ಕೆ ತಿರುಗುತ್ತಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದರು.

ಪ್ರಧಾನ ಕಾರ್ಯದರ್ಶಿಯಾಗಿ ಅವರ ಮೊದಲ ಭಾಷಣವು ಕಾವ್ಯಾತ್ಮಕವಾದ ಹೋಲಿಕೆಗಳು ಮತ್ತು ಉದಾಹರಣೆಗಳಿಂದ ತುಂಬಿತ್ತು. ಕೇರಳ ಮತ್ತು ತಮಿಳುನಾಡಿಗೆ ಸೇರಿದ ಹಲವಾರು ಪ್ರಸಿದ್ದ ಬರಹಗಾರರು ಮತ್ತು ಕವಿಗಳ ಕೃತಿಗಳನ್ನು ಅವರು ಉಲ್ಲೇಖಿಸಿದರು.

ಅನಿರೀಕ್ಷಿತ ಮಳೆ

ಬೇಬಿಯವರ ಮಾತುಗಳಿಗೆ ಬಹಿರಂಗ ಸಭೆಯಲ್ಲಿ ಸೇರಿದ್ದ ಜನರು ಜೋರಾಗಿ ಹರ್ಷೋದ್ಗಾರ ಮಾಡಿದರು. ಭಾಷಣ ನಡೆಯುತ್ತಿರುವ ಸಮಯದಲ್ಲಿಯೇ ಅನಿರೀಕ್ಷಿತವಾಗಿ ಮಳೆ ಪ್ರಾರಂಭವಾಗಿ ಬಹಿರಂಗ ಸಭೆಯಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು.  ಕೆಲವರು ಸಭೆಯಿಂದ ಹೊರನಡೆಯಲು ಪ್ರಾರಂಭಿಸಿದರು.

ಆಗ ಎಂ.ಎ. ಬೇಬಿಯವರು, “ಈಗ ನಮ್ಮ ಮುಂದೆ ಎರಡು ಮಾರ್ಗಗಳಿವೆ. ಒಂದು ಸಭೆಯನ್ನು ಅರ್ಧಕ್ಕೆ ಮುಗಿಸಿ ಹೊರಡುವುದು, ಎರಡನೆಯದು, ಯಾವುದೇ ಅಡೆತಡೆಗಳು ಎದುರಾದರೂ ನಿಲ್ಲಿಸದೆ ಸಭೆಯನ್ನು ಮುನ್ನಡೆಸುವುದು. ಸಭೆಯನ್ನು ಇಲ್ಲಿಗೇ ಮುಗಿಸಿ ಹೋದರೆ ಮಳೆಗೆ ಭಯಪಟ್ಟು ಹೊರಟುಹೋದರು ಎನ್ನುತ್ತಾರೆ.

ಏನು ಮಾಡೋಣ?… ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹೇಳುವ ನಾವು, ಈ ಸಣ್ಣ ಮಳೆಗೆ ಹೆದರುತ್ತೇವೆಯೇ? ನಮಗೆ ಭಯವಿಲ್ಲ. ಯಾವುದೇ ಶಕ್ತಿಗಳು ನಮ್ಮನ್ನು ಹೆದುರಿಸಲು ಸಾಧ್ಯವಿಲ್ಲ. ಎಷ್ಟೇ ಕಷ್ಟ ಬಂದರೂ, ಎಷ್ಟೇ ನಷ್ಟಗಳು ಬಂದರೂ ನಮ್ಮ ಪ್ರಯಾಣ ಮುಂದೆ ಹೋಗುತ್ತದೆ…” ಎಂದರು. ಈ ಮಾತುಗಳಿಗೆ ಸಭಿಕರು ಸ್ಪಂಧಿಸಿ ಎಲ್ಲಿದ್ದರೋ ಅಲ್ಲೇ ನಿಂತುಬಿಟ್ಟರು. ತಾವು ಕುಳಿತಿದ್ದ ಕುರ್ಚಿಗಳನ್ನೇ ತಲೆಯ ಮೇಲೆ ಅಡ್ಡವಾಗಿ ಇಟ್ಟುಕೊಂಡು ಬೇಬಿಯವರ ಭಾಷಣವನ್ನು ಕೊನೆಯವರೆಗೂ ಆಲಿಸಿದರು.

ಬೇಬಿ ತಮ್ಮ ಭಾಷಣವನ್ನು ಮುಂದುವರಿಸುತ್ತಾ ಕ್ಯೂಬಾ, ಉತ್ತರ ಕೊರಿಯಾ ಮತ್ತು ಚೀನಾ ಮತ್ತಿತರ ದೇಶಗಳನ್ನು ಉಲ್ಲೇಖಿಸಿದರು. ಹಲವು ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಎಡಪಂಥೀಯ ನೀತಿಗಳನ್ನು ಅನುಸರಿಸುವ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ನಮ್ಮ ನೆರೆಯ ದೇಶವಾದ ಶ್ರೀಲಂಕಾದಲ್ಲೂ ಎಡಪಂಥೀಯರು ಅಧಿಕಾರಕ್ಕೆ ಬಂದಿದ್ದಾರೆ.

ನೇರವಾಗಿ ಕಮ್ಯುನಿಸ್ಟ್ ಪಕ್ಷಗಳು, ಎಡಪಂಥೀಯ ಸಿದ್ಧಾಂತದ ಮೂಲಕ ಅಧಿಕಾರದಲ್ಲಿರುವ ದೇಶಗಳಲ್ಲಿನ ಜನರನ್ನು ಸೇರಿಸಿದರೆ, ಜಗತ್ತಿನ ಜನಸಂಖ್ಯೆಯ ಶೇಕಡಾ 25 ಕ್ಕಿಂತ ಹೆಚ್ಚು ಜನರು ಸಮಾಜವಾದದ ನೆರಳಿನಲ್ಲಿದ್ದಾರೆ. ಬಂಡವಾಳಶಾಹಿಯ ಬಿಕ್ಕಟ್ಟಿನಿಂದಾಗಿ, ಅನೇಕ ದೇಶಗಳ ಜನರು ಪರ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ವಿವರಿಸಿದರು.

ವಿಶ್ವದ ಮುಂದೆ ಬಯಲಾದ ಬಂಡವಾಳಶಾಹಿ

ಅಮೆರಿಕ ಅಧ್ಯಕ್ಷ ಟ್ರಂಪ್ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಗಳು ಬಂಡವಾಳಶಾಹಿ ನೀತಿಗಳ ನಿಜವಾದ ಸ್ವಭಾವವನ್ನು ಮತ್ತು ಅದರಲ್ಲಿರುವ ಭಯವನ್ನು ವಿಶ್ವದ ಜನರ ಮುಂದೆ ಬಟಾಬಯಲು ಮಾಡುತ್ತಿವೆ ಎಂದು ಹೇಳಿದ ಬೇಬಿಯವರು, ಇದಕ್ಕೆ ಭಿನ್ನವಾಗಿ, ಚೀನಾ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ ಮುನ್ನುಗ್ಗುತ್ತ, ವಿಶ್ವದ ಜನರಿಗೆ ಹೊಸ ಮಾರ್ಗವನ್ನು ತೋರಿಸುತ್ತಿದೆ ಎಂದು ಹೇಳಿದರು.

ಅದೇ ಸಮಯದಲ್ಲಿ, ಕಮ್ಯುನಿಸ್ಟ್ ಚಳುವಳಿಯಲ್ಲಿನ ದೌರ್ಬಲ್ಯಗಳನ್ನು ಸಹ ಅವರು ಉಲ್ಲೇಖಿಸಿದರು. “ಈ ಮಾತುಗಳನ್ನು ನಾವು ಹೇಳುತ್ತಿದ್ದೇವೆಂದರೆ, ಇದರರ್ಥ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿ ಕೆಲವು ವರ್ಷಗಳಿಂದ ಬಲಹೀನಗೊಂಡಿದೆ. ಹಿನ್ನಡೆಗಳನ್ನು ಅನುಭವಿಸಲಾಗಿದೆ. ನಾವು ಇದನ್ನು ಒಪ್ಪಿಕೊಳ್ಳಬೇಕು. ಕೇರಳದಲ್ಲಿ ಸತತ ಚುನಾವಣೆಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದೇವೆ. ಅದೇ ಸಮಯದಲ್ಲಿ, ಬಂಗಾಳ, ತ್ರಿಪುರ ರಾಜ್ಯಗಳಲ್ಲಿ ನಾವು ಹಿನ್ನಡೆಯನ್ನು ಎದುರಿಸಿದೆವು. ಇವುಗಳನ್ನು ಗುರುತಿಸಿ ಸರಿಪಡಿಸಿಕೊಂಡು ಮುಂದಕ್ಕೆ ಸಾಗಲು ಅಲ್ಲಿ ನಮ್ಮ ಸಂಗಾತಿಗಳು ಹೋರಾಡುತ್ತಿದ್ದಾರೆ.” ಎಂದು ಹೇಳಿದರು.

ದೇಶದಲ್ಲಿ ಪ್ರಸ್ತುತ ಪ್ರತಿಗಾಮಿ ಶಕ್ತಿಗಳಾದ ಕೋಮುವಾದಿ ಮತ್ತು ಕಾರ್ಪೊರೇಟ್ ಶಕ್ತಿಗಳ ಕೂಟವು ಅಧಿಕಾರದಲ್ಲಿದೆ ಎನ್ನುತ್ತ, ನವ-ಫ್ಯಾಸಿಸ್ಟ್ ನೀತಿಗಳನ್ನು ದೇಶದ ಮೇಲೆ ಹೇರುತ್ತ, ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸುತ್ತಿದೆ.

ಈ ನೀತಿಗಳ ವಿರುದ್ಧ ಜನರನ್ನು ಸಂಘಟಿಸಲು ಮುಂದಾಗಬೇಕೆಂದು 24 ನೇ ಮಹಾಧಿವೇಶನ ಕರೆ ನೀಡಿದೆ. ಆ ಗುರಿಗಳನ್ನು ಸಾಧಿಸಲು ಸಿಪಿಐ(ಎಂ) ಮತ್ತು ಎಡ ಪಕ್ಷಗಳನ್ನು ಬಲಪಡಿಸಬೇಕು ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಇತ್ತೀಚೆಗೆ ನಿಧನರಾದ ಸೀತಾರಾಮ್ ಯೆಚೂರಿ, ಕೊಡಿಯೇರಿ ಬಾಲಕೃಷ್ಣನ್ ಮತ್ತು ಬುದ್ಧದೇಬ್ ಭಟ್ಟಾಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮಿಳುನಾಡಿನೊಂದಿಗಿನ ತಮಗಿರುವ ಸಂಭಂದವನ್ನು ಅವರು ನೆನಪಿಸಿಕೊಂಡರು.

ಇದನ್ನೂ ನೋಡಿ: ಆರ್‌ಎಸ್‌ಎಸ್‌ ಕುರಿತ ಪ್ರಶ್ನೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕಿಗೆ ಜೀವನಪರ್ಯಂತ ನಿಷೇಧ! Janashakthi Media

Donate Janashakthi Media

Leave a Reply

Your email address will not be published. Required fields are marked *