ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರಾಕರಿಸಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ. ಈ ರೀತಿಯ ಅಪಪ್ರಚಾರವನ್ನು ನಮ್ಮ ಸರಕಾರದ ಮೇಲೆ ಮೊದಲಿನಿಂದಲೂ ಮಾಡಲಾಗುತ್ತಿದೆ ಇದನ್ನು ನಾವು ಎದುರಿಸುತ್ತೇವೆ ಎಂದಿದ್ದಾರೆ.
ತಿರುವನಂತಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಿಣರಾಯಿ, “ಎಲ್‌ಡಿಎಫ್ ಸರಕಾರಕ್ಕೆ ಒಳ್ಳೆಯ ಹೆಸರು ಇದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಈ ಆಟ ಹೆಚ್ಚು ದಿನ ನಡೆಯುವುದಿಲ್ಲ. ಅವರ ಉದ್ದೇಶ ಈಡೇರುವುದಿಲ್ಲ, ನಮ್ಮ ಸರಕಾರದ ಮೇಲೆ ಮೊದಲಿನಿಂದಲೂ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಉತ್ತಮ ಆಡಳಿತ ನೀಡಿದ್ದಕ್ಕೆ ಮತ್ತೊಮ್ಮೆ ಸರಕಾರ ನಡೆಸಲು ಜನ ನಮಗೆ ಅಧಿಕಾರ ನೀಡಿದ್ದಾರೆ. ಈ ಸುಳ್ಳುಗಳ ಅಭಿಯಾನವನ್ನು ನಾವು ಎದುರಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್, ಸಿಎಂ ಪಿಣರಾಯಿ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2020 ರ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಪಿಣರಾಯಿ ವಿಜಯನ್, ಅವರ ಪತ್ನಿ ಮತ್ತು ಮಗಳು ಭಾಗಿಯಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದಾಗಿ ಸ್ವಪ್ನಾ ಸುರೇಶ್ ಮಂಗಳವಾರ ಬಹಿರಂಗಪಡಿಸಿದ್ದರು. ಈ ಆರೋಪವನ್ನು ಎಡರಂಗದ ನಾಯಕರಷ್ಟೆ ಅಲ್ಲ, ಸಾರ್ವಜನಿಕರು ಕೂಡಾ ತಳ್ಳಿ ಹಾಕಿದ್ದಾರೆ. ಇದು ರಾಜಕೀಯ ಅಜೆಂಡಾದ ಭಾಗವಾಗಿದೆ. ಎಡರಂಗ ಸರಕಾರ ಕೇರಳದ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಇದು ಸುಳ್ಳು ಆರೋಪವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.