ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಡಿ. ತ್ರಿವೇಣಿ ಆಯ್ಕೆ ಆಗಿದ್ದು, ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ತ್ರಿವೇಣಿ ಪಾತ್ರರಾಗಿದ್ದಾರೆ.
ಉಪ ಮೇಯರ್ ಆಗಿ ಕಾಂಗ್ರೆಸ್‌ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್‌ನಲ್ಲಿ ಮೂರು ದಿನಗಳಿಂದ ನಡೆದ ಗುದ್ದಾಟ ಕೊನೆ ಗಳಿಗೆವರೆಗೂ ನಡೆಯಿತು. ಇದರ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನಿಸಿತು. ಅದು ಕೈಗೂಡಲಿಲ್ಲ.
ಮೇಯರ್ ಸ್ಥಾನಕ್ಕೆ ತ್ರಿವೇಣಿ, ಉಮಾದೇವಿ ಮತ್ತು ಕುಬೇರ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ವೀಕ್ಷಕರಾದ ಚಂದ್ರಪ್ಪ ಮತ್ತು ಜಿಲ್ಲಾ ಮುಖಂಡರು ಉಳಿದಿಬ್ಬರ ನಾಮಪತ್ರ ವಾಪಸ್ ತೆಗೆಸಿದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಸ್ಥಾನಕ್ಕೆ ನೇರ ಹಣಾಹಣಿ ನಡೆಯಿತು.
ತ್ರಿವೇಣಿಗೆ 28 ಮತಗಳು ಬಿದ್ದರೆ, ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಬಂದವು. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಜಾನಕಮ್ಮ ಅವರ ಆಯ್ಕೆ ಅವಿರೋಧವಾಯಿತು. ಕೆಪಿಸಿಸಿ ವೀಕ್ಷಕರಾದ ಚಂದ್ರಪ್ಪ ಮಂಗಳವಾರ ಸಂಜೆಯೇ ಬಳ್ಳಾರಿ ಗೆ ಬಂದಿದ್ದರು. ಮಧ್ಯರಾತ್ರಿವರೆಗೂ ಪಾಲಿಕೆ ಸದಸ್ಯರ ಜತೆ ಸಮಾಲೋಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಿದರೂ ಪ್ರಯೋಜನ ಆಗಲಿಲ್ಲ. ಬೆಳಿಗ್ಗೆ ಪುನಃ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದರು. ಕೊನೆ ಕ್ಷಣದವರೆಗೆ ಹಗ್ಗ ಜಗ್ಗಾಟ ನಡೆಯಿತು.
ಇದಾದ ಬಳಿಕ ಕುಬೇರ ನಾಮಪತ್ರ ವಾಪಸ್ ಪಡೆದರು. ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ನಾಮಪತ್ರ ವಾಪಸ್ ಪಡೆಯಲು ಉಮಾದೇವಿ ಅವರಿಗೆ ಸೂಚಿಸಿದರು. ಆ ಸಂದರ್ಭದಲ್ಲಿ ಉಮಾದೇವಿ ಕಣ್ಣೀರಿಟ್ಟರು. ಪಾಲಿಕೆಯಲ್ಲಿ 39 ಸದಸ್ಯರಿದ್ದು ಕಾಂಗ್ರೆಸ್ 21, ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ ಹಕ್ಕಿದೆ.
ಇದನ್ನೂ ಓದಿ : ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಬಳ್ಳಾರಿ-ಹಿರಿಯೂರಿನಲ್ಲಿ ಪ್ರತಿಭಟನೆ
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದರೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾರ ಪರ ವಹಿಸದೆ ತಟಸ್ಥರಾಗಿ ಉಳಿದರು.
23ನೇ ವರ್ಷಕ್ಕೆ ಮೇಯರ್ ಸ್ಥಾನ:
ಬಳ್ಳಾರಿ ನಗರದ ಮೇಯರ್ ತ್ರಿವೇಣಿ ಅವರಿಗೆ ಈಗ ಕೇವಲ 23 ವರ್ಷ. ಅತೀ ಚಿಕ್ಕ ವಯಸ್ಸಿಗೆ ಅವರು ನಗರದ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪದವಿ ಶಿಕ್ಷಣ ಪೂರೈಸಿದ ತಕ್ಷಣ ಅವರಿಗೆ ಮೇಯರ್ ಹುದ್ದೆ ಅಲಂಕರಿಸುವ ಅದೃಷ್ಟ ಒಲಿದಿದೆ. ಅಷ್ಟೇ ಅಲ್ಲ , ಅವರ ಕುಟುಂಬದ 2ನೇ ಮೇಯರ್ ಎಂಬ ಹೆಗ್ಗಳಿಕೆಯೂ ಇವರದಾಗಿದೆ. ಇವರ ತಾಯಿ ಸುಶೀಲಾಬಾಯಿ ಈ ಹಿಂದೆ ನಗರದ ಮೇಯರ್ ಆಗಿದ್ದರು.