ಔರಂಗಾಬಾದ್: ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತರಾದ 22 ಮಂದಿಯ ಮೃತದೇಹಗಳನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ರವಾನಿಸಿದ ಗಂಭೀರ ಪರಿಸ್ಥಿತಿ ಮಹಾರಾಷ್ಟ್ರದ ಬೀಡ್ ನಗರದಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಕರ್ಫ್ಯೂ ಹೇರಿದ್ದರಿಂದ ಸ್ವಲ್ಪಮಟ್ಟಿಗೆ ಕೋವಿಡ್ ಸೋಂಕಿನ ಪರಿಸ್ಥಿತಿ ಹತೋಟಿಗೆ ತಲುಪಿದೆ. ಆದರೆ, ಭಾನುವಾರ 22 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.
ಇದನ್ನು ಓದಿ: ಮತ ಎಣಿಕೆ ದಿನ ವಿಜಯೋತ್ಸವಕ್ಕೆ ಕಡಿವಾಣ: ಚುನಾವಣಾ ಆಯೋಗ
ಕೋವಿಡ್ ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಅಂತ್ಯಕ್ರಿಯೆಗಾಗಿ ಚಿತಾಗಾರಕ್ಕೆ ಸಾಗಿಸುವಾಗ ಈ ಮನಕಲಕುವ ಘಟನೆ ನಡೆದಿದೆ. ಆಂಬ್ಯುಲೆನ್ಸ್ ಕೊರತೆ ಎದುರಾದ ಕಾರಣ ಒಂದೇ ಆಂಬುಲೆನ್ಸ್ನಲ್ಲಿ ಮೃತದೇಹಗಳನ್ನು ರವಾನಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.
ವಾಹನಗಳ ಕೊರತೆ ಇರುವುದರಿಂದ ಈ ರೀತಿಯಾಗಿದೆ ಎಂದು ಜಿಲ್ಲಾಡಳಿತ ಕಾರಣ ನೀಡಿದೆ. ಬೀಡ್ ನಲ್ಲಿರುವ ಅಂಬಜೋಗೈ ನ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಟ್ಟಿದ್ದ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಒಟ್ಟಿಗೆ ಕಳಿಸಲಾಗಿದೆ.
ಆಸ್ಪತ್ರೆಯಲ್ಲಿ ಅಗತ್ಯವಿರುವಷ್ಟು ಆಂಬುಲೆನ್ಸ್ ಗಳು ಇಲ್ಲದ ಕಾರಣದಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಕಾಲೇಜಿನ ಡೀನ್ ಡಾ. ಶಿವಾಜಿ ಸುಕ್ರೆ ತಿಳಿಸಿದ್ದಾರೆ. ಕಳೆದ ವರ್ಷ ಕೋವಿಡ್-19 ಮೊದಲ ಅಲೆಯಲ್ಲಿ 5 ಆಂಬುಲೆನ್ಸ್ ಗಳಿದ್ದವು, ಈ ಪೈಕಿ 3 ಆಂಬುಲೆನ್ಸ್ ಗಳನ್ನು ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ವಾಪಸ್ ತೆಗೆದುಕೊಳ್ಳಲಾಯಿತು. ಈಗ ಆಸ್ಪತ್ರೆಯಲ್ಲಿ ಕೇವಲ ಎರಡು ಆಂಬುಲೆನ್ಸ್ ಇವೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಎರಡನೇ ಅಲೆಗೆ ಚುನಾವಣಾ ಆಯೋಗವೇ ನೇರ ಹೊಣೆ, ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಬಹುದು : ಮದರಾಸು ಹೈ ಕೋರ್ಟು
ಇರುವ ಎರಡೇ ಆಂಬುಲೆನ್ಸ್ಗಳಲ್ಲಿ ಕೋವಿಡ್ ರೋಗಿಗಳನ್ನು ಕರೆ ತರುವ ನಿರ್ವಹಣೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಿವಾಜಿಸೊರಕೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೆಲವೊಮ್ಮೆ ಮೃತರ ಕುಟುಂಬ ಸದಸ್ಯರನ್ನು ಪತ್ತೆ ಮಾಡುವುದಕ್ಕಾಗಿ ಸಮಯ ಬೇಕಾಗುತ್ತದೆ. ಲೋಖಂಡಿ ಸಾವರ್ಗಾಂವ್ ಗ್ರಾಮದಿಂದಲೂ ಸಹ ಕೋವಿಡ್ ಕೇಂದ್ರಕ್ಕೆ ಶವಗಳನ್ನು ಕಳಿಸಿದ್ದರು.
ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಮೂರು ಹೆಚ್ಚುವರಿ ಆಂಬುಲೆನ್ಸ್ ಗಳನ್ನು ಕಳಿಸುವುದಕ್ಕಾಗಿ ಜಿಲ್ಲಾಡಳಿತಕ್ಕೆ ಮಾರ್ಚ್ 17 ರಂದೇ ಮನವಿ ಮಾಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ.
ಅಲ್ಲದೇ ಗೊಂದಲಗಳನ್ನು ತಡೆಯುವ ಉದ್ದೇಶದಿಂದ ಕೋವಿಡ್-19 ಮೃತರ ಅಂತ್ಯಕ್ರಿಯೆಯನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ವರೆಗೆ ನಡೆಸುವಂತೆ ಮನವಿ ಮಾಡಲಾಗಿದೆ. ಮೃತ ದೇಹಗಳನ್ನು ಆಸ್ಪತ್ರೆಯ ವಾರ್ಡ್ ಗಳಿಂದ ನೇರವಾಗಿ ಚಿತಾಗಾರಕ್ಕೇ ಕಳಿಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೀಡ್ ಜಿಲ್ಲಾಧಿಕಾರಿ ರವೀಂದ್ರ ಜಗ್ತಾಪ್ ಮಾತನಾಡಿ ಈ ಬಗ್ಗೆ ತನಿಖೆ ನಡೆಸಲು ಅಂಬಜೋಗೈ ಹೆಚ್ಚುವರಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.