2023- ಹೊಸ ಅಂಕಿ, ಹಳೆಯ ಪ್ರಶ್ನೆಗಳು

ವೇದರಾಜ ಎನ್ ಕೆ

2022 ಹೋಗಿದೆ, 2023 ಬಂದಿದೆ. ಹೊಸ ವರ್ಷದ ಹೊಸಹರ್ಷದ ಆಶಯಗಳೊಂದಿಗೆ ಬದುಕು ಎಂದಿನಂತೆ ಸಾಗಲು ಆರಂಭವಾಗಿದೆ.  ಪ್ರಸಕ್ತ ಸನ್ನಿವೇಶದಲ್ಲಿ, ವಿಶೇಷವಾಗಿ ದೇಶದ  ಒಳಗಿನ ಸನ್ನಿವೇಶದಲ್ಲಿ ದೇಶದ ವ್ಯಂಗ್ಯಚಿತ್ರಕಾರರು ಹೇಗೆ ಇದನ್ನು ಸ್ವಾಗತಿಸಿದ್ದಾರೆ? ಜತೆಗೆ 2022ರ ಕೊನೆಯ ದಿನಗಳು ಹೇಗಿದ್ದವು? ಅವರ ರೇಖೆಗಳಲ್ಲಿಯೇ ನೋಡೋಣ:

ಶೀರ್ಷಿಕೆಯ ಚಿತ್ರದಲ್ಲಿ  ವ್ಯಂಗ್ಯಚಿತ್ರಕಾರರು ( ಎಂ ಅಲಿ, ಆರೋ ಆನಂದ) ಚಿತ್ರಿಸಿರುವಂತೆ ಈ ದಶಕದ ಇನ್ನೊಂದು ಅಂಕೆ ಹೋಗಿ ಮುಂದಿನ ಅಂಕೆ ಬಂದಿದೆ. ಅದರ ನಡುವೆ ಬದುಕು(ಮುಖ್ಯವಾಗಿ ದುಡಿಮೆಗಾರರ ಬದುಕು) ಎಂದಿನಂತೆ…..

2022ಕ್ಕೆ 2023:   “ಹೇಗಿತ್ತು ನಿಮ್ಮ ಕಾಲ?”

“2020 , 2021ರ ಗೋಜಲುಗಳನ್ನು ಸರಿಪಡಿಸುವಲ್ಲೇ
ಹೆಚ್ಚಿನ ಸಮಯ ಕಳೆದು ಹೋಯಿತು.”
(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಹೌದು, ಅಂಕೆ ಬದಲಾಗಿದೆ- ಜೀವನದ ಅವೇ ಪ್ರಶ್ನೆಗಳು ಹೊಸ ವರ್ಷದ ಕ್ಯಾಲೆಂಡರಿಗೂ ಮುಂದುವರೆದಿವೆ.

(ಪಿ.ಮಹಮ್ಮದ್, ವಾರ್ತಾಭಾರತಿ)

***

2023ರಲ್ಲೂ, ‘ಭಾವನೆಗಳು ಘಾಸಿ’ ಗೊಳ್ಳುವ, ಅದರ ಹೆಸರಿನಲ್ಲಿ ‘ಬಹಿಷ್ಕಾರ’ಗಳ ರಾಜಕೀಯ ಮುಂದುವರೆಯುತ್ತದೆಯೇ?

“ತಾಳು, ನಾವು ನಿನ್ನನ್ನು ಬಹಿಷ್ಕರಿಸುತ್ತೇವೆಯೇ 
ಎಂಬುದನ್ನು ಪರಿಶೀಲಿಸುತ್ತಿದ್ದೇವೆ!”

(ಸತೀಶ ಆಚಾರ್ಯ, ಫೇಸ್‍ಬುಕ್)

***

ಸರಿ ಹಾಗಾದರೆ, ಪ್ರಧಾನಿಗಳ ಹೊಸ ವರ್ಷದ ಪಣಗಳೇನು?

“…….ಅದೇ.. .. ..ನಾನು ಸುಳ್ಳು ಹೇಳುವುದಿಲ್ಲ.
ಕ್ಯಾಮರಾಗಳಿಂದ ದೂರ ಇರುತ್ತೇನೆ ಎಂದೇ?”

ರೆಮಿಕ್ಸ್ ಕಾಮಿಕ್ಸ್, ಫೇಸ್‍ಬುಕ್

***

2022ರೊಳಗೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದರು

-ಅದು ಕಳೆದ 4 ವರ್ಷಗಳಲ್ಲಿ 1.6% ವಾರ್ಷಿಕ ದರದಲ್ಲಿ ಕುಸಿಯುತ್ತಿದೆ.

2022ರೊಳಗೆ ದೇಶ ಅಪೌಷ್ಟಿಕತೆಯಿಂದ ಮುಕ್ತವಾಗುತ್ತದೆ ಎಂದರು

– ಜಾಗತಿಕ ಹಸಿವಿನ ಸೂಚ್ಯಂಕ ಭಾರತವನ್ನು 122ರಲ್ಲಿ 107ನೇ ಸ್ಥಾನಕ್ಕೆ ಇಳಿಸಿದೆ.

2022ರೊಳಗೆ 100% “ಡಿಜಿಟಲ್‍ ಸಾಕ್ಷರತೆ” ಎಂದರು-

-60%ದಷ್ಟು ಶಾಲೆಗಳಿಗೆ ಇಂಟರ್ನೆಟ್‍ ಸಂಪರ್ಕವಿಲ್ಲ, ಕಾರ್ಯಯೋಗ್ಯ ಕಂಪ್ಯೂಟರುಗಳಿಲ್ಲ.

2022ರೊಳಗೆ ಪ್ರತಿಯೊಬ್ಬರಿಗೂ ಮನೆ ಎಂದರು

-17.7 ಲಕ್ಷ ಮಂದಿಗೆ ಮನೆಯಿಲ್ಲ, 10 ಕೋಟಿ ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.

2022ರೊಳಗೆ ಬುಲೆಟ್‍ ರೈಲುಗಳು, ಪ್ರತಿಮನೆಯಲ್ಲಿ 24×7 ವಿದ್ಯುತ್‍ ಇತ್ಯಾದಿ ಇತ್ಯಾದಿ ಇತ್ಯಾದಿ

2022ರ ಸ್ವಗತ:  “ನನ್ನಿಂದ ಇಷ್ಟೊಂದು ದೊಡ್ಡ ವೈಫಲ್ಯ!”

(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

***

ಪಾಪ, ಹಿಂದಿನ ವರ್ಷಗಳ ಪಣಗಳು ಈಡೇರದಿದ್ದರೆ  ಅದಕ್ಕೆ ಪ್ರಧಾನಿಗಳು ಏನು ಮಾಡಿಯಾರು?

ಎಲ್ಲಾ ಆ 2022 ರ ವಿಫಲತೆ!! ನೆಹರುದ್ದೂ ಅಲ್ಲ…

ಆತ ಮೋದೀಜೀಯವರ ಆಶ್ವಾಸನೆಗಳನ್ನು
 ಈಡೇರಿಸಲಿಲ್ಲ! ಬಿಡಬೇಡಿ ಅವನ!!

(ಮಂಜುಲ್, ಅವರ 2023ರ ಕ್ಯಾಲೆಂಡರ್ ನಲ್ಲಿ)

***

  • ಅದಿರಲಿ, 2023ರ ಪ್ರಮುಖ ಕಾರ್ಯಭಾರ..? ಚೂರಿಗಳನ್ನು ಹರಿತಗೊಳಿಸುವುದು..?

(ಸಜಿತ್ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

“ನಿಮ್ಮ ಮನೆಗಳಲ್ಲಿ ಶಸ್ತ್ರಗಳನ್ನು ಇಟ್ಟುಕೊಳ್ಳಿ, ತರಕಾರಿ ಹೆಚ್ಚುವ ಚಾಕುಗಳನ್ನಾದರೂ ಹರಿತ ಮಾಡಿ ಇಟ್ಟುಕೊಳ್ಳಿ” ಎಂದು ಶಿವಮೊಗ್ಗೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಮಾರಂಭದಲ್ಲಿ ಹೇಳಿ ಭೋಪಾಲದ ಎಂಪಿ ಮತ್ತೊಮ್ಮೆ ವಿವಾದ ಸೃಷ್ಟಿಸಿರುವುದಾಗಿ ವರದಿಯಾಗಿದೆ.

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

***

ಅವರು ತಮ್ಮ ಭಾಷಣದಲ್ಲಿ ಕೋಮು ಸಾಮರಸ್ಯವನ್ನು ಕೆಡಿಸುವ ಇನ್ನೂ ಹಲವು ಮಾತುಗಳನ್ನು ಬಹಿರಂಗ ಸಮಾರಂಭದಲ್ಲಿ ಹೇಳಿದ್ದರೂ  ಏಕೆ ಕ್ರಮ ಕೈಗೊಂಡಿಲ್ಲ ಎಂದು ಪೋಲಿಸರನ್ನು ಕೇಳಿದಾಗ ತಮಗೆ ಯಾವ ದೂರೂ ಬಂದಿಲ್ಲ, ಯಾರಾದರೂ ದೂರು ಕೊಟ್ಟರೆ ನೋಡೋಣ  ಎಂದರಂತೆ.

“ನೀವೇನು ಮಾಡುತ್ತಿದ್ದೀರಿ, ಮೋದೀಜೀ?”
“ ಏನಿಲ್ಲ .. ಪೆನ್ಸಿಲ್‍ ಮೊನೆ ಮಾಡುತ್ತಿದ್ದೆ”

“ಪೆನ್ಸಿಲ್‍ ಮೊನೆಗೊಳಿಸುವುದನ್ನು ಬಿಟ್ಟು ಚಾಕುಗಳನ್ನು ಮೊನಚುಗೊಳಿಸಿ!
ಪ್ರಜ್ಞಾ ಏನು ಹೇಳಿದರು ಎಂದು ಕೇಳಿಲ್ಲವೇ?”
( ರೆಮಿಕ್ಸ್ ಕಾಮಿಕ್ಸ್, ಫೇಸ್‍ ಬುಕ್)

ಅವರು ಕೇಳಿದ್ದಾರೋ ಇಲ್ಲವೋ…….ಭೋಪಾಲ್‍ ಸಂಸದರಿಗೆ ಆತಂಕವೇನೂ ಇಲ್ಲ

“ಶಾಬಾಷ್, ನಮಗೆ ಇಂತಹುದೇ ವೀರರ, ಚಾಕು ಏಕ್‍ದಂ ಹರಿತವಾಗಿರುವ,
ಬುದ್ಧಿ ಏಕ್‍ದಂ ಮಂದವಾಗಿರುವವರ  ಅಗತ್ಯವಿದೆ”

(ರಾಜೇಂದ್ರ ದೋಢಪ್‍ಕರ್, ಫೇಸ್‍ಬುಕ್)

ಕೊನೆಗೂ ಆಕೆಯ ವಿವಾದಿತ ಹೇಳಿಕೆಯ ಮೇಲೆ ಎಫ್‍ಐಆರ್ ದಾಖಲಾಗಿದೆಯಂತೆ. ಆದರೆ…

ಇದರಿಂದೇನಾದರೂ ವ್ಯತ್ಯಾಸವಾಗುತ್ತದೆಯೇ?

(ಕೀರ್ತಿಶ್‍, ಬಿಬಿಸಿ ನ್ಯೂಸ್‍ ಹಿಂದಿ)

***

ಈ ನಡುವೆ ಕೇಂದ್ರ ಸರಕಾರ ಮತ್ತೆ ಕೊವಿಡ್‍ ಬರಬಹುದು ಎಂದು ಜನಗಳನ್ನು ಎಚ್ಚರಿಸಿದೆ.  ಅದರಂತೆ ಕರ್ನಾಟಕ ಸರಕಾರವೂ  ಮಾರ್ಗಸೂಚಿಗಳನ್ನು ಹೊರಡಸಿದೆ. ಆದರೆ ಶತ್ರುವಿನ ತಲೆ ಕಡಿಯಬಲ್ಲ ಶಸ್ತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ ಎಂಬ ಈ ದ್ವೇಷದ ವೈರಸ್‍ ಹರಡಿಸುವುದನ್ನು ತಡೆಯಲು ಮಾರ್ಗಸೂಚಿಗಳಿಲ್ಲವೇ ಎಂದು ಕೊರೊನ ವೈರಸ್ಸೇ ಕೇಳುವಂತಾಗಿದೆ!

(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

***

ಸರಕಾರ ಈಗೇಕೆ ಇದ್ದಕ್ಕಿದ್ದಂತೆ ಕೊವಿಡ್‍ ಹರಡುವ ಬಗ್ಗೆ ಮಾತಾಡುತ್ತಿದೆ? ಅಷ್ಟೇ ಅಲ್ಲ, ದಿಲ್ಲಿಗೆ ತಲುಪಲಿದ್ದ ‘ಭಾರತ್‍ ಜೋಡೋ’ ಯಾತ್ರೆಯ ಸಂಘಟಕರಿಗೆ ಮಾತ್ರ ಕೊವಿಡ್‍ ನಿಯಮಗಳನ್ನು ಪಾಲಿಸಿ, ಇಲ್ಲವೇ ಯಾತ್ರೆ ನಿಲ್ಲಿಸಿ ಎಂದು ಸರಕಾರದಿಂದ ನೋಟೀಸ್‍ ನೀಡಲಿಕ್ಕಾಗಿಯೇ  ಎಂದು ಹಲವರು ಕೇಳುತ್ತಿದ್ದಾರೆ.

ವಾಸ್ತವವಾಗಿ , ಗುಜರಾತ್‍ ಚುನಾವಣಾ ಪ್ರಚಾರ ತಾರಕಕ್ಕೆ ಏರಿದ್ದಾಗಲೇ ಅದೇ ಗುಜರಾತಿನಲ್ಲೇ ಕೋವಿಡ್‍ನ ಹೊಸ ವೈರಸ್‍ ಕಂಡು ಬಂದಿತ್ತಂತೆ. ಆದರೆ ಆಗ ಸರಕಾರ ಪ್ರಧಾನಿಗಳು, ಗೃಹಮಂತ್ರಿಗಳ ಬೃಹತ್‍ ರ‍್ಯಾಲಿಗಳ ಬಗ್ಗೆ ಸುಮ್ಮನಿದ್ದುದು ಏಕೆ ಎಂಬುದೇ ಹಲವರ ಪ್ರಶ್ನೆ. ಇದು ಕೋವಿಡ್‍ ವೈರಸ್‍ ನ ರಾಜಕೀಯ ರೂಪಾಂತರಿ ಎಂಬುದು ಅವರ ಅನ್ನಿಸಿಕೆ.

“ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ವಿಶೇಷವಾಗಿ ಯಾತ್ರೆಗಳಲ್ಲಿ”

“ಆರೋಗ್ಯಕರ ವೈದ್ಯಕೀಯ ಸ್ಪಂದನೆ ಬೇಕಾಗಿದೆ. ಅದು ವೈರಸ್‍ನ
ಒಂದು ರಾಜಕೀಯ ರೂಪಾಂತರಿಯಾಗಿ ಬಿಡಬಾರದು.”

(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)

***

ಇವೆಲ್ಲವುಗಳ ನಡುವೆ, 2022 ಕೊನೆಯಾಗುತ್ತಿದ್ದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದವನ್ನು ಮತ್ತೆ ಎತ್ತಲಾಗಿದೆ.. ಎರಡೂ ಕಡೆಯಿಂದ ನಿಲುವುಗಳು ಬಿರುಸಾಗುತ್ತಿವೆ- ಎರಡೂ ಕಡೆ ‘ಡಬಲ್ ಇಂಜಿನ್’ ಸರಕಾರಗಳು ಇದ್ದರೂ ಕೂಡ!

(ಪಿ.ಮಹಮ್ಮದ್ ಫೇಸ್‍ಬುಕ್)

‘ಕನ್ನಡಿಗರು’ ಮತ್ತು ‘ಮರಾಠೀ ಮಾಣುಸ್’ ಇಬ್ಬರೂ ಹಣದುಬ್ಬರ, ನಿರುದ್ಯೋಗ ಮತ್ತಿತರ ಸಮಸ್ಯೆಗಳಿಂದ ನರಳುತ್ತಿರುವಾಗ ಈ ಡಬಲ್‍ ಇಂಜಿನ್ ಗಳಿಗೆ ‘ಗಡಿವಿವಾದ’  ಗಮನ ಬೇರೆಡೆಗೆ ಹರಿಸುವ ಇನ್ನೊಂದು ಮಾರ್ಗೋಪಾಯ?

(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳಲ್ಲಿ 107ಕ್ಕೆ ಇಳಿದಿದೆ ಎಂಬ ವರದಿಯಾದಾಗ ಅದು ಫೇಕ್‍ನ್ಯೂಸ್‍, ನಮ್ಮಲ್ಲಿ ಅಷ್ಟೊಂದು ಹಸಿದವರು ಇಲ್ಲವೇ ಇಲ್ಲ  ಎಂದು ನಿರಾಕರಿಸಿದ್ದ, ಇತ್ತೀಚಿನ ದಿನಗಳಲ್ಲಿ ಬಡಜನರಿಗೆ ಸಬ್ಸಿಡಿಗಳನ್ನು ‘ರೆವ್ಡಿ’ ಎಂದು ಅಪಹಾಸ್ಯ ಮಾಡುತ್ತಿದ್ದ ಸರಕಾರ, ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದ್ದ ಪುಕ್ಕಟೆ/ಸಬ್ಸಿಡಿ ಆಹಾರ ಧಾನ್ಯ ಪೂರೈಕೆಯನ್ನು ಇನ್ನೂ ಒಂದು ವರ್ಷ ಮುಂದುವರೆಸುವುದಾಗಿ ಪ್ರಕಟಿಸಿ ಇದು ಪ್ರಧಾನಿಗಳ ಬಡವರ-ಪರ ನಿಲುವಿಗೆ ಸಾಕ್ಷಿ ಎಂದು ಹೇಳಿದೆ.

“80 ಕೋಟಿ ಜನಗಳಿಗೆ ಉಚಿತ ಆಹಾರ!”
“ನಮ್ಮಲ್ಲಿ ಅಷ್ಟೊಂದು ಹಸಿದ ಜನಗಳಿದ್ದಾರೆಯೇ”
(ಅಲೋಕ್‍ ನಿರಂತರ್, ಫೇಸ್‍ಬುಕ್)

ಅಥವಾ….ಈ ಪ್ರಕ್ರಿಯೆಯಲ್ಲಿ ಪಿಎಂಜೆಕೆಎವೈ ಸ್ಕೀಮನ್ನು ವಿಲೀನದ ಹೆಸರಲ್ಲಿ ರದ್ದು ಮಾಡಿದರೂ, ದೇಶದಲ್ಲಿ ಬಡತನ ಇಷ್ಟೊಂದು ಇದೆ, ಮಾತ್ರವಲ್ಲ, ಆ ಬಡಜನಗಳಿಗೆ  ಪರಿಹಾರ ಒದಗಿಸಲು ಇರುವ ಏಕೈಕ ಮಾರ್ಗವೆಂದರೆ ಸಬ್ಸಿಡಿ ದರಗಳಲ್ಲಿ ಪಡಿತರದ ಮೂಲಕ ಆಹಾರ ಒದಗಿಸುವುದು ಎಂದು ಎಂಟು ವರ್ಷಗಳ ನಂತರ ಕೊನೆಗೂ ಈ ಸರಕಾರ ಒಪ್ಪಿಕೊಂಡಂತಾಗಿದೆ ಎಂಬುದಕ್ಕೆ ಸಾಕ್ಷಿಯೇ ಎಂದು ಹಲವು ರಾಜಕೀಯ ವಿಶ್ಲೇಷಕರು ಕೇಳುತ್ತಾರೆ.

***

ಕೊನೆಯದಾಗಿ, ಪ್ರಧಾನ ಮಂತ್ರಿಗಳು 2022ರ ತನ್ನ ಕೊನೆಯ ‘ಮನ್‍ಕೀ ಬಾತ್‍’ ನಲ್ಲಿ ಅಮೃತ ಕಾಲ ಆರಂಭವಾಗುತ್ತಿದ್ದಂತೆ ಭಾರತ ತ್ವರಿತವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

ಹೌದೇ…. ಎಂದು ಕೇಳುತ್ತಿದ್ದಾರಂತೆ ದೇಶದ ಜನಸಾಮಾನ್ಯರು..

ನಮಗೆ ಗೊತ್ತೇ ಇರಲಿಲ್ಲ! ಅದೀಗ ಬ್ರೇಕಿಂಗ್‍ ನ್ಯೂಸ್!
(ಸಜಿತ್‍ಕುಮಾರ್, ಡೆಕ್ಕನ್‍ ಹೆರಾಲ್ಡ್)

Donate Janashakthi Media

Leave a Reply

Your email address will not be published. Required fields are marked *