ಕರ್ನಾಟಕದಲ್ಲಿ ಮತ್ತೆ ಚುನಾವಣೆ ಬಂದಿದೆ. ರಾಜಕಾರಣಿಗಳು ಮತದಾರರಿಗೆ ಆಶ್ವಾಸನೆ ನೀಡುವ ಮುನ್ನ ಈ ಕತೆಯನ್ನು ಓದಬೇಕು
ಒಂದು ಚಳಿಗಾಲದ ಸಂಜೆ ಕೋಟ್ಯಾಧೀಶನೊಬ್ಬ ತನ್ನ ಮನೆಯ ಹೊರಗೆ ರಸ್ತೆಯಲ್ಲಿ ಚಳಿಯಿಂದ ನಡುಗುತ್ತಿದ್ದ ಬಡವನೊಬ್ಬನನ್ನು ಕಂಡ.
“ಅರೆ… ನಿನಗೆ ಚಳಿ ಆಗುತ್ತಿಲ್ಲವಾ? ನೀನ್ಯಾಕೆ ಕೋಟು ಹಾಕಿಕೊಂಡಿಲ್ಲ?” ಎಂದು ಆ ಶ್ರೀಮಂತ ಬಡವನನ್ನು ಕೇಳಿದ.
“ನನ್ನ ಬಳಿ ಕೋಟು ಇಲ್ಲ. ಆದರೆ ನನಗೆ ಚಳಿ ಅಭ್ಯಾಸವಾಗಿದೆ” ಎಂದು ಬಡವ ಉತ್ತರಿಸಿದ.
“ಇರು, ನಾನು ಮನೆಯ ಒಳಗೆ ಹೋಗಿ ನಿನಗೆ ಒಂದು ಅತ್ಯುತ್ತಮ ಕೋಟು ತಂದು ಕೊಡುತ್ತೇನೆ” ಎಂದ ಆ ಶ್ರೀಮಂತ.
ಬಡವನಿಗೆ ತುಂಬ ಖುಷಿಯಾಯಿತು. ಆತ ಅಲ್ಲೇ ನಿಂತ.
ಶ್ರೀಮಂತ ತನ್ನ ಐಶಾರಾಮಿ ಬಂಗಲೆಯೊಳಕ್ಕೆ ಹೋದ. ಆದರೆ ಒಳಗೆ ಹೋದ ಬಳಿಕ ಆತ ಬ್ಯುಸಿ ಆದ. ಬಡವನಿಗೆ ಹೇಳಿದ್ದು ಮರೆತೇ ಹೋಯಿತು.
ಬೆಳಿಗ್ಗೆ ಎದ್ದ ಬಳಿಕ ಶ್ರೀಮಂತನಿಗೆ ತಾನು ರಾತ್ರಿ ಹೇಳಿದ್ದು ನೆನಪಾಯಿತು. ಆತ ತಕ್ಷಣ ಮನೆಯಿಂದ ಹೊರಗೆ ರಸ್ತೆಗೆ ಬಂದ. ನೋಡಿದರೆ ರಾತ್ರಿಯಿಡೀ ಫುಟ್ ಪಾತ್ ನಲ್ಲಿ ಕುಳಿತಿದ್ದ ಬಡವ ಚಳಿಯಿಂದ ನಡುಗಿ ಮರಗಟ್ಟಿ ಮೃತ ಪಟ್ಟಿದ್ದ.
ಆ ಬಡವನ ಹೆಣದ ಬಳಿ ಶ್ರೀಮಂತನಿಗೆ ಬರೆದ ಪತ್ರವೊಂದಿತ್ತು. ಅದರಲ್ಲಿ ಹೀಗೆ ಬರೆಯಲಾಗಿತ್ತು:
“ನನ್ನ ಬಳಿಯಲ್ಲಿ ಬೆಚ್ಚನೆಯ ಬಟ್ಟೆಗಳು ಇಲ್ಲದಿದ್ದಾಗ ನನ್ನ ದೇಹದಲ್ಲಿ ಚಳಿಯನ್ನು ಎದುರಿಸುವ ಶಕ್ತಿ ಇತ್ತು. ಏಕೆಂದರೆ ನನಗೆ ಚಳಿ ತಡೆಯುವುದು ಅಭ್ಯಾಸವಾಗಿತ್ತು. ಆದರೆ ನನಗೆ ಕೋಟು ತಂದು ಕೊಡುವುದಾಗಿ ನೀವು ಭರವಸೆ ನೀಡಿದಾಗ ನಾನು ನಿಮ್ಮ ಭರವಸೆಯನ್ನು ನಂಬಿ ಕುಳಿತೆ. ಚಳಿಯನ್ನು ತಡೆಯುವ ನನ್ನ ಶಕ್ತಿ ಕುಂದಿ ಹೋಯಿತು.”
(Rabia Mys ಎಂಬವರ fb wall ನಿಂದ ಎತ್ತಿ ಅನುವಾದಿಸಿದ ಕತೆ ಇದು. ಮೂಲ ಕಥೆಗಾರ ಯಾರೆಂದು ಗೊತ್ತಿಲ್ಲ.)
ಬಿ ಎಂ ಹನೀಫ್