ಕರ್ನಾಟಕದಲ್ಲಿ ಮಳೆಗೆ 20 ಜನರ ಸಾವು, 40ಕ್ಕೂ ಹೆಚ್ಚು ಜಾನುವಾರುಗಳು ಮೃತ

ಕುಮುಟಾ : ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿಮಳೆಗೆ ಇಬ್ಬರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ  20 ಜನರು ಬಲಿಯಾಗಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಸಿದ್ದವಿದ್ದು, ಹಾನಿಯಾದ ಮನೆಗಳಿಗೆ 1.25 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಮಿಂಚು ಸಹಿತ ಭಾರೀ ಮಳೆ

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಅಧಿಕಾರಿಗಳ ವರ್ಗಕ್ಕೆ ಚುರುಕು ಮೂಡಿಸಲು ಭೇಟಿ ನೀಡುತ್ತಿದ್ದೇವೆ. ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಜುಲೈ ಕೊನೆ ವಾರದವರೆಗೆ ಕಾದು-ನೋಡಿ ಮೋಡ ಮತ್ತು ಬಿತ್ತನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಕೇಂದ್ರದ ನಿಯಮಗಳ ಅನ್ವಯ ಮೋಡ ಬಿತ್ತನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಕೃಷ್ಣಭೈರೇಗೌಡ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು. ಘಟನೆ ಸಂಬಂಧ ಮೃತರ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದು, ಕಂದಾಯ ಇಲಾಖೆ‌ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ:ಮುಂದುವರಿದ ಮಳೆ : ಹಲವು ಜಿಲ್ಲೆಗಳಲ್ಲಿ ಶಾಲಾ – ಕಾಲೇಜಿಗೆ ರಜೆ, ಹೈ ಅಲರ್ಟ್ ಘೋಷಣೆ

ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗುತ್ತಿರುವ ಬಗ್ಗೆ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಾರವಾರದಲ್ಲಿ ಸೇತುವೆ ಬಿದ್ದಿರುವ ಮಾಹಿತಿ ಇದೆ. ಎಲ್ಲೇಲ್ಲಿ ಅನಾಹುತ ಆಗಿದೆ ಕೂಡಲೇ ಸರಿಪಡಿಸಲು ಸೂಚಿಸಿದ್ದೇವೆ. ಮಳೆಗಾಲದಲ್ಲಿ ಆ ಭಾಗದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ನವೆಂಬರ್ ನಂತರ ಕೆಲಸ ಮಾಡಿ ಸರಿ ಪಡಿಸುತ್ತೇವೆ ಈಗ ತಾತ್ಕಾಲಿಕವಾಗಿ ಮಾಡುತ್ತೇವೆ. ಶಿರಾಡಿಘಾಟ್ ಸೇರಿದಂತೆ ಹಲವು ಕಡೆ ಭೂಕುಸಿತ ಆಗುತ್ತೆ ಅದಕ್ಕೆ ತಡೆಗೋಡೆ ನಿರ್ಮಿಸಲಾಗುತ್ತದೆ. ಸರ್ಕಾರಕ್ಕೆ ಚಾಲೆಂಜ್ ಆಗಿತ್ತು ಅದನ್ನ ಟೈಮ್ ಬಾಂಡ್​ನಲ್ಲಿ ಮುಗಿಸಲು ಹೇಳಿದ್ದೇವೆ. ಅವಶ್ಯಕತೆ ಬಿದ್ದರೆ ಉಡುಪಿ, ಮಂಗಳೂರಿಗೆ ಭೇಟಿ ನೀಡುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *