ತುಮಕೂರು: 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರಜೆ ನಗದೀಕರಣ, ಜಿಎಸ್‌ಎಲ್‌ಐ ಮಂಜೂರಾತಿ ನೀಡಲು ₹25 ಸಾವಿರ ಲಂಚ ಪಡೆದಿದ್ದ ಅನುದಾನಿತ ಶಾಲೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರಿಗೆ ಮೂರೂವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ₹40 ಸಾವಿರ ದಂಡ ವಿಧಿಸಿದೆ. ತುಮಕೂರು
ನ್ಯಾಯಾಲಯವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆ ದ್ವಿತೀಯ ದರ್ಜೆ ಸಹಾಯಕ ಗೋಪಾಲಸ್ವಾಮಿ, ಸಣಬನಘಟ್ಟ ರಾಜೇಂದ್ರ ಪ್ರಸಾದ್ ಅನುದಾನಿತ ಪ್ರೌಢಶಾಲೆ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಬೆಟ್ಟಸ್ವಾಮಿಗೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: 77 ಶೇ ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಯವರು: ಕಾನೂನು ಸಚಿವಾಲಯ
ಕೆಂಪೇಗೌಡ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ಕೆ.ಶ್ರೀನಿವಾಸ್ ಅವರಿಗೆ ರಜೆ ನಗದೀಕರಣ, ಜಿಎಸ್‌ಎಲ್‌ಐ ಮಂಜೂರಾತಿ ಮಾಡಲು ಇಬ್ಬರು ಆರೋಪಿಗಳು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹5 ಸಾವಿರ ಪಡೆದಿದ್ದರು. ಶ್ರೀನಿವಾಸ್ ಹಣ ನೀಡಲು ಇಷ್ಟವಿಲ್ಲದೆ 2021ರ ಫೆ. 12ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು.
ಕೆಂಪೇಗೌಡ ಅನುದಾನಿತ ಶಾಲೆಯ ಹತ್ತಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಇನ್‌ಸ್ಪೆಕ್ಟರ್ ಎಸ್.ವಿಜಯಲಕ್ಷ್ಮಿ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿತ್ತು. ಇನ್‌ಸ್ಪೆಕ್ಟರ್‌ಗಳಾದ ವಿಜಯಲಕ್ಷ್ಮಿ, ವೈ.ಸತ್ಯನಾರಾಯಣ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಬುಧವಾರ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕ ಆರ್.ಪಿ.ಪ್ರಕಾಶ್ ಎಸಿಬಿ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media