ರಸ್ತೆ ಜಗಳ ಪ್ರಕರಣ : ನವಜೋತ್ ಸಿಂಗ್ ಸಿಧುಗೆ ಜೈಲು ಶಿಕ್ಷೆ – ಏನಿದು ಪ್ರಕರಣ? ಅಂದು ನಡೆದದ್ದು ಏನು?

  • 1988 ಡಿಸೆಂಬರ್‌ 27 ರ ರೋಡ್‌ ರೇಜ್‌ ಪ್ರಕರಣ
  • ನ್ಯಾಯಲಯಕ್ಕೆ ಶರಣಾದ ನವಜೋತ್‌ ಸಿಂಗ್‌ ಸಿಧು

ನವದೆಹಲಿ : ಪಂಜಾಬ್‌ ಮಾಜಿ ಕಾಂಗ್ರೆಸ್‌  ಅಧ್ಯಕ್ಷ,  ನವಜೋತ್‌ ಸಿಂಗ್‌ ಸಿಧು ರವರ 34 ವರ್ಷಗಳ ಹಿಂದಿನ ರೋಡ್‌ ರೇಜ್‌ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವನ್ನಪ್ಪಿದ ಕಾರಣ, ಸುಪ್ರೀಂ ಕೋರ್ಟ್‌ ಗುರುವಾರ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಈ ಅಪಘಾತದಲ್ಲಿ ಪಾಟಿಯಾಲ ನಿವಾಸಿ ಗುರ್ನಾಮ್ ಸಿಂಗ್ (Gurnam Singh) ಎಂಬುವವರು ಸಾವಿಗೀಡಾಗಿದ್ದರು. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 1,000 ರೂಪಾಯಿ ದಂಡ ವಿಧಿಸಿ ಸಿಧು ಅವರನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ಒಂದು ವರ್ಷದ ಶಿಕ್ಷೆಗೆ ಗುರಿಯಾಗಿಸಲು ಸಿಧು ಅವರನ್ನು ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಎಸ್ ಕೆ ಕೌಲ್ ಅವರನ್ನೊಳಗೊಂಡ ಪೀಠವು ಸಿಧು ಅವರಿಗೆ ಒಂದು ವರ್ಷದ ಕಠಿಣ ಶಿಕ್ಷೆ ವಿಧಿಸಿದೆ.

ಘಟನೆಯ ಹಿನ್ನೆಲೆ : ಪಟಿಯಾಲದ ರಸ್ತೆಯೊಂದರಿಂದ ತನ್ನ ಕಾರನ್ನು ತೆಗೆಯುವಂತೆ ಕೇಳಿದ ವ್ಯಕ್ತಿಯೊಬ್ಬನಿಗೆ ಥಳಿಸಿದ ಆರೋಪದಲ್ಲಿ ನವಜೋತ್ ಸಿಂಗ್ ಸಿಧು ಮತ್ತು ರೂಪಿಂದರ್ ಸಂಧು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇವರಿಬ್ಬರಿಂದ ಥಳಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಜುಲೈ 14, 1989 ರಂದು ಪಂಜಾಬ್ ಪೊಲೀಸರು ಸಂಧು ವಿರುದ್ಧ ಮಾತ್ರ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದರು. ಜುಲೈ 22 ರಂದು ಸಿದ್ದು ಮತ್ತು ಸಂಧು ಇಬ್ಬರ ವಿರುದ್ಧವೂ ಪ್ರತ್ಯೇಕ ಕೊಲೆ ಪ್ರಕರಣ. ಸೆಪ್ಟೆಂಬರ್ 25, 1990 ರಂದು ಪಟಿಯಾಲದ ವಿಚಾರಣಾ ನ್ಯಾಯಾಲಯವು ಸಂಧು ವಿರುದ್ಧ ಕೊಲೆಗೆ ಸಮಾನವಲ್ಲದ ಆದರೆ ನರಹತ್ಯೆಯ ಅಪರಾಧಿ ಎಂದು ಆರೋಪವನ್ನು ರೂಪಿಸಿತು.

ಆಗಸ್ಟ್ 30, 1993 ರಂದು ಸೆಷನ್ಸ್ ನ್ಯಾಯಾಲಯವು ತನ್ನ ಅಧಿಕಾರವನ್ನು ಚಲಾಯಿಸಿ ಸಿಆರ್‌ಪಿಸಿಯ ಸೆಕ್ಷನ್ 319 ಅಡಿಯಲ್ಲಿ (ಹೆಚ್ಚುವರಿ ಆರೋಪಿಗಳನ್ನು ಸೇರಿಸಿ) ಮತ್ತು ವಿಚಾರಣೆ ಎದುರಿಸುವಂತೆ ಸಿಧುಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಸೆ.22, 1999 ರಂದು ಟ್ರಯಲ್ ಕೋರ್ಟ್ ಸಿಧು ಅವರನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಿತು.

ಡಿಸೆಂಬರ್ 1, 2006 ರಲ್ಲಿ ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್, ಟ್ರಯಲ್ ಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು ಮತ್ತು ಸಿಧು ಮತ್ತು ಸಂಧು ಕೊಲೆಗೆ ಸಮಾನವಲ್ಲದ ಪ್ರಕರಣದ ಅಪರಾಧಿಗಳೆಂದು ಮತ್ತು ಅವರಿಗೆ ತಲಾ 1 ಲಕ್ಷ ರೂಪಾಯಿ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಜನವರಿ 23, 2007 ರಲ್ಲಿ ಸುಪ್ರೀಂಕೋರ್ಟ್‌ ಸಿಧು ಮತ್ತು ಸಹ ಆರೋಪಿಗಳ ವಿರುದ್ಧದ ಈ ಶಿಕ್ಷೆಗೆ ತಡೆ ನೀಡಿ ಉಪ ಚುನಾವಣೆಯಲ್ಲಿ ಅಮೃತಸರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಲು ಸಿಧು ಅವರಿಗೆ ದಾರಿ ಮಾಡಿಕೊಟ್ಟಿತು.

ಏಪ್ರಿಲ್ 12, 2018 ರಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಿಧುಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದ ಹೈಕೋರ್ಟ್‌ನ ತೀರ್ಪು ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿತ್ತು.

2018 ಏಪ್ರಿಲ್ 18 ರಂದು ಪಂಜಾಬ್ ಹರಿಯಾಣ ಹೈಕೋರ್ಟ್ ತೀರ್ಪಿನ ವಿರುದ್ಧ ಸಿದು ಮತ್ತು ಸಂಧು ಸಲ್ಲಿಸಿದ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.

ಮೇ 15 ರಂದು ಸುಪ್ರೀಂಕೋರ್ಟ್‌ ಸಿಧು ಅವರನ್ನು ಜೈಲು ಶಿಕ್ಷೆಯಿಂದ ಮುಕ್ತಗೊಳಿಸಿತು. ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಅಪರಾಧಕ್ಕಾಗಿ ಅವರನ್ನು ದೋಷಿ ಎಂದು ಘೋಷಿಸಿ 1,000 ರೂ. ದಂಡ ವಿಧಿಸಿತ್ತು. ಆದರೆ ಇಂದು ಮೇ 19 ರಂದು ಮೂರು ದಶಕಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Donate Janashakthi Media

Leave a Reply

Your email address will not be published. Required fields are marked *