ದೆಹಲಿ : ಮೂರು ಕರಾಳ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ಚಳುವಳಿಯ ಭಾಗವಾಗಿ ಐಕ್ಯ ರೈತ ಆಂದೋಲನದ ಕರೆಯಂತೆ ಡಿಸೆಂಬರ್ 12ರಂದು ದೇಶಾದ್ಯಂತ 165 ಟೋಲ್ ಪ್ಲಾಝಾಗಳಲ್ಲಿ ಪಿಕೆಟಿಂಗ್ ನಡೆಸಿದ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಮುಕ್ತವಾಗಿ ಓಡಾಡುವಂತೆ ಮಾಡಿದರು.
ರಿಲಯಂಸ್ ಪೆಟ್ರೋಲ್ ಬಂಕ್‌ಗಳು, ಮಾಲ್‌ಗಳು ಮತ್ತು ಅದಾನಿ, ಅಂಬಾನಿಗಳ ಇತರ ಸಂಸ್ಥೆಗಳ ಎದುರು ಬೃಹತ್ ಪ್ರತಿಭಟನೆಗಳು ನಡೆದವು. ಶಾಂತಿಯುತವಾಗಿ ನಡೆದ ಈ ಪ್ರತಿಭಟನೆಗಳು ಸುತ್ತಮುತ್ತಲಿನ ಜನರು ಬೆಂಬಲಿಸುತ್ತಿರುವುದು ಕಾಣ ಬಂತು ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ. ಪಂಜಾಬಿನಲ್ಲಿ ಮುಕ್ತ-ಟೋಲ್ ಚಳುವಳಿ ಜೂನ್ ತಿಂಗಳಿನಿಂದಲೇ ನಡೆಯುತ್ತಿದೆ. ಹರ್ಯಾಣಾದಲ್ಲಿ 20ಕ್ಕಿಂತ ಹೆಚ್ಚು ಕಡೆಗಳಲ್ಲಿ ಮುಕ್ತ ಟೋಲ್ ಚಳುವಳಿ ಮತ್ತು ರಿಲಯಂಸ್ ಪೆಟ್ರೋಲ್ ಬಂಕ್‌ಗಳು ಮತ್ತು ಮಾಲ್‌ಗಳ ಎದುರು ಪ್ರತಿಭಟನೆಗಳು ನಡೆದವು.
ಒಡಿಶಾದಲ್ಲೂ ಹೌರಾ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಭುವನೇಶ್ವರ-ಪುರಿ ಹೆದ್ದಾರಿಯಲ್ಲಿ ಭುವನೇಶ್ವರ, ಗಂಜಾಂ , ಕಟಕ್ ಮುಂತಾದೆಡೆಗಳಲ್ಲಿ ಪಿಕೆಟಿಂಗ್ ನಡೆದಿದೆ.
ಆಂಧ್ರಪ್ರದೇಶದಲ್ಲಿ 31 ಕಡೆ ಪಿಕೆಟಿಂಗ್‌ಗಳು ನಡೆದವು, 25 ಸ್ಥಳಗಳಲ್ಲಿ ವಾಹನಗಳ ಟೋಲ್-ಮುಕ್ತ ಸಂಚಾರ ನಡೆಯಿತು ಎಂದು ವರದಿಯಾಗಿದೆ.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ ,ಮಹಾರಾಷ್ಟ್ರ, ಗುಜರಾತ್, ಝಾರ್ಖಂಡ್, ಬಿಹಾರ್ ರಾಜ್ಯಗಳಲ್ಲೂ ಹಲವು ಟೋಲ್ ಪ್ಲಾಝಾಗಳಲ್ಲಿ ಪಿಕೆಟಿಂಗ್ ನಡೆದಿವೆ.
ಕೇರಳದಲ್ಲಿ ತಿರುವನಂತಪುರದಲ್ಲಿ ಅನಿರ್ದಿಷ್ಟ ಕಾಲದ ಸತ್ಯಾಗ್ರಹ ಆರಂಭವಾಗಿದೆ, ರಾಜ್ಯದ ಇತರೆಡೆಗಳಲ್ಲೂ ಪಂಚಾಯತ್ ಚುನಾವಣೆಗಳ ನಂತರ ರೈತರಿಗೆ ಬೆಂಬಲವಾಗಿ ಪ್ರತಿಭಟನೆಗಳು ನಡೆಯಲಿವೆ ಎಂದು ವರದಿಯಾಗಿದೆ.
ದಿಲ್ಲಿ–ಜೈಪುರ್ ರಾಷ್ಟ್ರೀಯ ಹೆದ್ದಾರಿ ತಡೆ ಆರಂಭ
ರಾಜಸ್ತಾನ, ಹರ್ಯಾಣ ಮತ್ತು ಪಂಜಾಬಿನ ಸಾವಿರಾರು ರೈತರು ದಿಲ್ಲಿಯತ್ತ ಹೋಗುವ ಐದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಲ್ಕು ಈಗಾಗಲೇ ಬಂದ್ ಆಗಿದ್ದು ಇನ್ನೂ ತೆರೆದಿರುವ ಏಕೈಕ ದಿಲ್ಲಿ-ಜೈಪುರ್ ಹೆದ್ದಾರಿ ತಡೆ ಕಾರ್ಯಕ್ರಮ ಆರಂಭವಾಗಿದೆ. ರಾಜಸ್ತಾನ-ಹರ್ಯಾಣ ಗಡಿಯಲ್ಲಿರುವ ಶಾಹಜಹಾನ್ ಪುರದಲ್ಲಿ ದಿಲ್ಲಿಯತ್ತ ರೈತರ ಪಾದಯಾತ್ರೆ ಆರಂಭಿಸಿತು.
ಇದರಲ್ಲಿ ಎಐಕೆಎಸ್‌ಸಿಸಿ ಕಾರ್ಯಕಾರಿ ಗುಂಪಿನ ಸದಸ್ಯರಾದ ಹನ್ನನ್ ಮೊಲ್ಲ, ಡಾ.ಅಶೋಕ ಧವಳೆ, ರಾಜು ಶೆಟ್ಟಿ, ಮೇಧಾ ಪಾಟ್ಕರ್, ಪ್ರತಿಭಾ ಶಿಂಧೆ, ಯೋಗೇಂದ್ರ ಯಾದವ್, ಸತ್ಯವಾನ್, ಕವಿತ ಕುರುಗಂಟಿಯವರಲ್ಲದೆ, ರಾಜಸ್ತಾನದ ಎಐಕೆಎಸ್ ಮುಖಂಡರಾದ ಆಮ್ರ ರಾಮ್, ಪಂಜಾಬ್ ಕಿಸಾನ್ ಸಭಾದ ಮುಖಂಡರಾದ ಮೇಜರ್ ಸಿಂಗ್ ಹಾಗೂ ಎಐಕೆಎಸ್ ಜಂಟಿ ಕಾರ್ಯದರ್ಶಿ ವಿಜೂಕೃಷ್ಣನ್ ಮತ್ತಿತರರು ಭಾಗವಹಿಸಿದರು.