ಬೆಂಗಳೂರು: ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ ನಂತರ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಲಸಿಕೆ ನೀಡಲು ಸಿದ್ಧತೆಗಳು ಆರಂಭವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 7 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ನಡೆಸುತ್ತಿದೆ.
ಜನವರಿ 3 ರಿಂದ 15ರಿಂದ 18 ವರ್ಷದ ಅರ್ಹ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದರಂತೆ ಬಿಬಿಎಂಪಿಯಲ್ಲಿಯೂ ಸಿದ್ಧತೆಗಳನ್ನು ನಡೆಯುತ್ತಿವೆ.
ಬಿಬಿಎಂಪಿ ವ್ಯಾಪ್ತಿಯ ಎಸ್‍ಎಸ್‍ಎಲ್‍ಸಿ ಮತ್ತು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 7 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಕಾಲೇಜುಗಳಲ್ಲಿ ಲಸಿಕೆ ನೀಡಿದ ಮಾದರಿಯಲ್ಲಿಯೇ 15 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಶಾಲೆಗಳಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಲಸಿಕಾ ಕೇಂದ್ರ ತಂಡದ ಪ್ರಮುಖರಿಂದ ಬಿಬಿಎಂಪಿ ಅಧಿಕಾರಿಗಳು ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ಮೊದಲ ಬಾರಿಗೆ ಲಸಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಬಳಿ 30 ನಿಮಿಷಗಳ ವಿಶ್ರಾಂತಿ ಪಡೆಯಲು ಸಹಕಾರಿಯಾಗುವಂತೆ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ಈಗಾಗಲೇ ಖಾಸಗೀ ಶಾಲಾ-ಕಾಲೇಜುಗಳ ಮಾಹಿತಿ ಸಂಗ್ರಹ. ಪ್ರತಿ ದಿನ ಸರಾಸರಿ ಒಂದು ಶಾಲಾ ಅಥವಾ ಕಾಲೇಜಿನಲ್ಲಿ 100 ಮಕ್ಕಳಿಗೆ ಲಸಿಕೆ ವಿತರಣೆ. ಮಕ್ಕಳಿಗೆ ಲಸಿಕೆಯನ್ನು ಪಡೆದುಕೊಳ್ಳುವಂತೆ ಜಾಗೃತಿ ಕಾರ್ಯಕ್ರಮ. ಲಸಿಕೆ ಪಡದ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಜೆ ಇತ್ಯಾದಿ ಹಲವು ಕ್ರಮಗಳನ್ನು ಬಿಬಿಎಂಪಿ ಆಡಳಿತ ಮಂಡಳಿ ನಿರ್ಧರಿಸಿದೆ.
ಶಾಲೆಗಳ ಸಮೀಪವೂ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅದರೊಂದಿಗೆ, ಮಕ್ಕಳ ನಿಗಾ ದೃಷ್ಟಿಯಿಂದ ಲಸಿಕೆ ನೀಡುವ ಎಲ್ಲ ಶಾಲೆಗಳ ಬಳಿ ಆಂಬುಲೆನ್ಸ್ ಸಹ ಇರಲಿದೆ. ಆನ್‍ಲೈನ್ ಪಾಠ ಕೇಳುವ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿಗಳು ಆನ್‍ಲೈನ್ ಪಾಠ ಕೇಳುವ ಮಕ್ಕಳಿಗೂ ಲಸಿಕೆ ನೀಡಲು ಮುಂದಾಗಿವೆ.
ಮೊದಲ ಹಂತದಲ್ಲಿ ಸರ್ಕಾರಿ ಹಾಗೂ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಲಸಿಕೆ ವಿತರಣೆ ಮಾಡಿ ನಂತರ ಖಾಸಗಿ ಶಾಲೆ ಕಾಲೇಜಿನ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿದೆ. ಈ ಕುರಿತಂತೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದಾರೆ.
ಒಂದು ವೇಳೆ ಪೋಷಕರು ತಮ್ಮ ಮಕ್ಕಳಿಗೆ ಖಾಸಗೀ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದಾದರೆ ಅದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.