ನವದೆಹಲಿ: ಸಂಸತ್ ಕಲಾಪ ಪದೇ ಪದೇ ಅಡ್ಡಿಯಾಗುತ್ತಿರುವುದು ಸರ್ಕಾರದ್ದೇ ಹೊಣೆಗಾರಿಕೆಯಾಗಿದೆ. ಸಂಸತ್ತಿನಲ್ಲಿ ಪೆಗಾಸಸ್ ಹಾಗೂ ರೈತರ ವಿಷಯಗಳ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಿಗೆ ನೀಡಿ ಸಂಸದೀಯ ಪ್ರಜಾಪ್ರಭುತ್ವವನ್ನು ಗೌರವಿಸುವಂತೆ ವಿರೋಧ ಪಕ್ಷಗಳು ಮನವಿ ಮಾಡಿವೆ.
ಇಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ 14 ಪಕ್ಷಗಳ 18 ನಾಯಕರು, “ಸಂಸತ್ತಿನ ಕಲಾಪಗಳ ಅಡ್ಡಿಗೆ ಪ್ರತಿಪಕ್ಷಗಳನ್ನು ಹೊಣೆ ಮಾಡುವ ಸರಕಾರದ ಧೋರಣೆಯೇ ವಿಪಕ್ಷಗಳ ಒಕ್ಕೂಟವಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆʼʼ ಎಂದು ಆರೋಪಿಸಿದರು.
ಇದನ್ನು ಓದಿ: ಮುಂಗಾರು ಅಧಿವೇಶನ: ಭಾರೀ ಗದ್ದಲದಿಂದಾಗಿ ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ
“ಕಲಾಪ ವ್ಯರ್ಥವಾಗುತ್ತಿರುವುದಕ್ಕೆ ಸರ್ಕಾರವೇ ನೇರಯಾಗಿದೆ. ಸರ್ಕಾರ ಪ್ರತಿಪಕ್ಷಗಳ ಬೇಡಿಕೆಗಳಿಗೆ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಚರ್ಚೆಯ ಬೇಡಿಕೆಯನ್ನು ಒಪ್ಪಲು ನಿರಾಕರಿಸುತ್ತಿದೆʼʼ ಎಂದು ಹೇಳಿದ್ದಾರೆ.
ಸಂಸದೀಯ ಪ್ರಜಾಪ್ರಭುತ್ವದ ನೀತಿಗೆ ಬದ್ಧವಾಗಿ ಮತ್ತೊಮ್ಮೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಪೆಗಾಸಸ್ ವಿಷಯವಾಗಿ ಎರಡೂ ಸದನಗಳಲ್ಲಿ ಚರ್ಚೆ ನಡೆಯಬೇಕೆಂಬ ಬೇಡಿಕೆಗೆ ವಿಪಕ್ಷಗಳು ಬದ್ಧವಾಗಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಇದು ರಾಷ್ಟ್ರೀಯ ಭದ್ರತೆಯ ಅಂಶವಾಗಿದೆ. ಗೃಹ ಸಚಿವರು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಂಟಿ ಹೇಳಿಕೆಯನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ನಾಯಕ ಟಿ ಆರ್ ಬಾಲು ಹಾಗೂ ಕಾಂಗ್ರೆಸ್ ತಿರುಚಿ ಶಿವಾ, ಕಾಂಗ್ರೆಸ್‌ನ ಆನಂದ್ ಶರ್ಮಾ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಡೆರೆಕ್ ಒ ‘ಬ್ರಿಯಾನ್ ಮತ್ತು ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ್ ಬ್ಯಾನರ್ಜಿ ಜಂಟಿಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.
ಶಿವಸೇನೆಯ ಸಂಜಯ್ ರಾವುತ್ ಮತ್ತು ವಿನಾಯಕ್ ರಾವುತ್ ಆರ್ ಜೆಡಿಯ ಮನೋಜ್ ಝಾ, ಸಿಪಿಐ(ಎಂ) ನ ಎಲಮಾರಂ ಕರೀಂ, ಸಿಪಿಐನ ಬಿನೋಯ್ ವಿಶ್ವಂ, ಎಎಪಿಯ ಸುಶೀಲ್ ಗುಪ್ತಾ, ಐಯುಎಂಎಲ್ ನ ಮೊಹ್ಮದ್ ಸೇರಿದಂತೆ ಇತರ ಸಹಿ ಹಾಕಿದ್ದಾರೆ.