ಪೊಲೀಸ್​ ಗುಂಡಿಗೆ ಬಲಿಯಾದ ವ್ಯಕ್ತಿಯ ಮೇಲೆ ಕ್ರೂರ ದಾಳಿ ಮಾಡಿದ ಛಾಯಾಗ್ರಾಹಕ ಬಂಧನ

ಅಸ್ಸಾಂ: ಅಸ್ಸಾಂ ರಾಜ್ಯದ ಸಿಪಾಜಾರ್ ಭಾಗದಲ್ಲಿ ಗುರುವಾರ ಸ್ಥಳೀಯರು ಮತ್ತು ಪೊಲೀಸರ ನಡುವೆ ತೀವ್ರರೀತಿಯ ಘರ್ಷಣೆ ಸಂಭವಿಸಿತು. ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿ ಅವರ ಮನೆಗಳನ್ನು ಖಾಲಿ ಮಾಡಿಸಲು ಪೊಲೀಸರು ಶಸ್ತ್ರಸಜ್ಜಿತರಾಗಿ ತೆರಳಿದ್ದರು.

ಈ ಸಂದರ್ಭದಲ್ಲಿ ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಅಟ್ಟಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಪೊಲೀಸರು ಗುಂಡು ಹಾರಿಸಿ ಕ್ರೂರವಾಗಿ ಕೊಂದಿದ್ದಾರೆ. ಈ ವೇಳೆ ಪೊಲೀಸರು ಗನ್‌ ಮತ್ತು ಲಾಠಿ ಹಿಡಿದು ಶಸ್ತ್ರಸಜ್ಜಿತರಾಗಿ, ಗಲಭೆ ವಿರೋಧಿ ಧಿರಿಸು ಧರಿಸಿದ್ದರು.

ಘರ್ಷಣೆ ಸೆಪ್ಟೆಂಬರ್ 23 ರಂದು ನಡೆದಿದ್ದು, ಕನಿಷ್ಠ 2 ಪ್ರತಿಭಟನಾಕಾರರು ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಇದರ ಜೊತೆಗೆ, ಪ್ರತಿಭಟನಾಕಾರರು ಕಡ್ಡಿಗಳು ಮತ್ತು ಇತರ ಆಯುಧಗಳಿಂದ ಹಲ್ಲೆ ಮಾಡಿದ 9 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೊಲೀಸರ ಕ್ರೂರ ದಾಳಿಯಲ್ಲಿ ಸ್ಥಳೀಯ ವ್ಯಕ್ತಿ ಸ್ಥಳದಕ್ಕೇ ಸಾವನಪ್ಪಿದ ಹಾಗೂ ಇದೇ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಛಾಯಾಗ್ರಾಹಕ ಬಿಜೋಯ್ ಬೋನಿಯಾ ಮೃತ ವ್ಯಕ್ತಿಯ ಮೇಲೆ ಮೇಲಿಂದ ಮೇಲೆ ಅತ್ಯಂತ ಕ್ರೂರವಾಗಿ ಎರಗಿ ದಾಳಿ ಮಾಡಿರುವ ಘಟನೆಯ ವಿಡಿಯೋ ಒಂದು ಸಾಕಷ್ಟು ವೈರಲ್‌ ಆಗಿತ್ತು. ಬಿಜೋಯ್‌ ಶಂಕರ್‌ ಬೋನಿಯಾ ಅವರನ್ನು ಬಂಧಿಸಿಸಲಾಗಿದ್ದು, ಸಿಐಡಿ ತನಿಖೆ ಕೈಗೊಂಡಿದೆ, ಅಲ್ಲದೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರ ಗುಂಡೇಟಿಗೆ ವ್ಯಕ್ತಿ ನೆಲಕ್ಕೆ ಉರುಳಿ ನಿಶ್ಚಲವಾದ ನಂತರವು ಪೊಲೀಸರು ಗುಂಪಾಗಿ ಬಂದು ವ್ಯಕ್ತಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಫೋಟೋ ಪತ್ರಕರ್ತನೊಬ್ಬ ವ್ಯಕ್ತಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಪೊಲೀಸರು ಅವನನ್ನು ತಡೆದು ದೂರ ಕರೆದುಕೊಂಡು ಬಂದ ನಂತರ ಕೂಡಾ ದೂರದಿಂದ ಮತ್ತೆ ಹಾರಿ ಬಂದು ನಿಶ್ಚಲವಾಗಿ ನೆಲಕ್ಕೆ ಬಿದ್ದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ್ದಾನೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಸಿಪಿಎಂಎಲ್‌ ಪಾಲಿಟ್‌ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಅವರು, “ಒಬ್ಬ ಏಕಾಂಗಿ ವ್ಯಕ್ತಿ ಕೋಲು ಹಿಡಿದುಕೊಂಡು ಓಡುತ್ತ ಬಂದಾಗ ಎದೆಗೆ ಗುಂಡು ಹಾರಿಸಲು ಯಾವ ಪ್ರೋಟೋಕಾಲ್ ಆದೇಶಿಸುತ್ತದೆ. ಬಹುಶಃ ಸತ್ತು ನೆಲಕ್ಕೆ ಬಿದ್ದಿರುವ ಮನುಷ್ಯನ ದೇಹದ ಮೇಲೆ ರಕ್ತಪಿಪಾಸುವಿನಂತೆ ದ್ವೇಷದಿಂದ ಪದೇ ಪದೇ ಜಿಗಿಯುವ, ಕ್ಯಾಮರಾದೊಂದಿಗಿರುವ ನಾಗರಿಕ ಉಡುಪು ಧರಿಸಿದ ವ್ಯಕ್ತಿ ಯಾರು?” ಎಂದು ಪ್ರಶ್ನಿಸಿದ್ದರು.

ಘಟನೆಯನ್ನು ಖಂಡಿಸಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, “ಇದು ಯಾವ ನರಕ? ಈ ಹತ್ಯೆಯಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಈಗಲೇ ಕ್ರಮಕೈಗೊಳ್ಳಿ. ನತದೃಷ್ಟ ವ್ಯಕ್ತಿಯನ್ನು ಬಂಧಿಸಬಹುದಿತ್ತು. ಅವರನ್ನು ಕೊಲ್ಲಲು ಪೊಲೀಸರಿಗೆ ಅಧಿಕಾರವಿಲ್ಲ. ಒಂದು ಸಮಾಜವಾಗಿ ನಮಗೆ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರದಂದು ಕೂಡಾ ಅತಿಕ್ರಮಣ ವಿರೋಧಿ ಪ್ರಕ್ರಿಯೆಯ ಕಾರ್ಯಾಚರಣೆಯಲ್ಲಿ ಸುಮಾರು 800 ಕುಟುಂಬಗಳನ್ನು ಹೊರಹಾಕಲಾಗಿದೆ. ಸ್ಥಳೀಯರು ಕಲ್ಲುಗಳಿಂದ ದಾಳಿ ಮಾಡಿದ್ದರಿಂದ ಬಲಪ್ರಯೋಗಿಸಬೇಕಾಯಿತು ಎಂದು ಪೊಲೀಸರ ಹೇಳಿಕೆಯಾಗಿದೆ.

ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು “800 ಮನೆಗಳನ್ನು ತೆರವುಗೊಳಿಸುವ ಮೂಲಕ 4500 ಬಿಘಾಗಳನ್ನು ತೆರವುಗೊಳಿಸಿದ್ದಕ್ಕಾಗಿ ದರ್ರಾಂಗ್ ಜಿಲ್ಲಾಡಳಿತ ಮತ್ತು ಅಸ್ಸಾಂ ಪೊಲೀಸರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದ್ದರು.

ಪೂರ್ವ ಬಂಗಾಳ ಮೂಲದ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಹಳ್ಳಿಯಾದ ಧಲ್ಪುರದಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆಸಲಾದ ಸ್ಥಳೀಯರನ್ನು ಹೊರಹಾಕುವ ಪ್ರಕ್ರಿಯೆಯ ಸರಣಿಯಲ್ಲಿ ಗುರುವಾರದ್ದು ಕೊನೆಯದಾಗಿದೆ.

ಸೋಮವಾರ ನಡೆಸಿದ ಅತ್ಯಂತ ಬಲಪ್ರಯೋಗದ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಅಸ್ಸಾಂ ಸರ್ಕಾರವು 8000 ಬಿಘಾ ಭೂಮಿಯನ್ನು ಮರಳಿ ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ. ಕನಿಷ್ಠ 800 ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಜೂನ್ ನಲ್ಲಿ ಮೊದಲ ಬಾರಿಗೆ ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಮೊದಲಬಾರಿಗೆ ನಡೆಸಲಾಯಿತು. ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕ್ಯಾಬಿನೆಟ್ “77,000 ಬಿಘಾ ಸರ್ಕಾರಿ ಭೂಮಿಯನ್ನು ಬಳಸಿಕೊಳ್ಳಲು ಸಮಿತಿಯೊಂದನ್ನು ರಚಿಸಲು ಅನುಮೋದನೆ ನೀಡಿತು. ಕೃಷಿ ಉದ್ದೇಶಗಳಿಗಾಗಿ ದರ್ರಾಂಗ್‌ನ ಗೋರುಖುತಿ ಸಿಪಾ ಜಾರ್‌ನಲ್ಲಿನ ಸ್ಥಳೀಯರನ್ನು ಸ್ಥಳಾಂತರೀಸುವ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.

ಸಿಪಾಜ್ಹಾರ್ ನಲ್ಲಿ ಸ್ಥಳೀಯರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರೀ ಘರ್ಷಣೆಗೆ ಕಾರಣವಾಯಿತು.

 

Donate Janashakthi Media

Leave a Reply

Your email address will not be published. Required fields are marked *