ಮುಂಬೈ : ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಭಾರೀ ದುರಂತವೊಂದು ನಡೆದಿದ್ದು, ಕೋವಿಡ್-19 ಸೆಂಟರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 13 ಕೊರೋನಾ ರೋಗಿಗಳು ಸಜೀವ ದಹನವಾಗಿದ್ದಾರೆ. ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಾಸೈನಲ್ಲಿನ ವಿಜಯ್ ವಲ್ಲಭ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅನೇಕ ರೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಐಸಿಯುನಲ್ಲಿದ್ದ 13 ರೋಗಿಗಳು ಸಾವನ್ನಪ್ಪಿದ್ದು, ಉಳಿದ ಮೂರ್ನಾಲ್ಕು ಕೊರೋನಾ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎರಡೇ ದಿನಗಳಲ್ಲಿ ಮಹಾರಾಷ್ಟ್ರದ ಕೊರೋನಾ ಆಸ್ಪತ್ರೆಯಲ್ಲಿ ನಡೆದ 2ನೇ ದುರಂತ ಇದಾಗಿದೆ. ಬುಧವಾರ ನಾಸಿಕ್ನ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ 24 ರೋಗಿಗಳು ಸಾವನ್ನಪ್ಪಿದ್ದರು.
Maharashtra | 13 people have died in a fire that broke out at Vijay Vallabh COVID care hospital in Virar, early morning today pic.twitter.com/DoySNt4CSQ
— ANI (@ANI) April 23, 2021
ವಾಸೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಐಸಿಯುನಲ್ಲಿದ್ದ ಏರ್ ಕಂಡೀಷನರ್ (ಎಸಿ)ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಹೊತ್ತಿದೆ ಎನ್ನಲಾಗಿದೆ. ಐಸಿಯುನಲ್ಲಿ 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 13 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ತುರ್ತಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ ನೀಡಿದ್ದಾರೆ.
ಈ ಘಟನೆಗೂ ಕೇವಲ 24 ಗಂಟೆ ಮೊದಲು ಮಹಾರಾಷ್ಟ್ರದ ನಾಸಿಕ್ನಲ್ಲಿ ಡಾ. ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿ 24 ರೋಗಿಗಳು ಸಾವನ್ನಪ್ಪಿದ್ದರು. ಈ ಆಸ್ಪತ್ರೆಯಲ್ಲಿ 171 ಕೋವಿಡ್-19 ರೋಗಿಗಳಿದ್ದರು. ಅವರಲ್ಲಿ 67 ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಆಮ್ಲಜನಕ ಸೋರಿಕೆಯಿಂದಾಗಿ 24 ರೋಗಿಗಳು ಮೃತಪಟ್ಟಿದ್ದರು. ಈ ಘಟನೆ ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು.
ನಾಸಿಕ್ ನಗರದ ಜಾಕಿರ್ ಹುಸೇನ್ ಆಸ್ಪತ್ರೆ ಕೊರೊನಾ ಸೋಂಕಿತ ರೋಗಿಗಳಿಗೆ ಮೀಸಲಾಗಿದೆ. ಸುಮಾರು 150 ರೋಗಿಗಳಿಗೆ ಆಮ್ಲಜನಕದ ಅಗತ್ಯವಿತ್ತು, ಅವರೆಲ್ಲರೂ ವೆಂಟಿಲೇಟರ್‌ಗಳಲ್ಲಿದ್ದರು. ಅದರಲ್ಲಿ 24 ಕೊರೊನಾ ಸೋಂಕಿತರು ಆಮ್ಲಜನಕ ಸ್ಥಗಿತದಿಂದ ಸಾವನ್ನಪ್ಪಿದ್ದರು. ಟ್ಯಾಂಕರ್‌ನಿಂದ ಟ್ಯಾಂಕ್‌ಗಳಲ್ಲಿ ಆಮ್ಲಜನಕವನ್ನು ತುಂಬುತ್ತಿರುವಾಗ ಈ ಘಟನೆ ಸಂಭವಿಸಿತ್ತು.
ಮಹಾರಾಷ್ಟ್ರದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು, ದಿನಕ್ಕೆ ನೂರಾರು ರೋಗಿಗಳು ಸಾಯುತ್ತಿದ್ದಾರೆ. ಅಲ್ಲಿನ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ಕೊರೋನಾ ರೋಗಿಗಳು ತುಂಬಿಕೊಂಡಿದ್ದು, ಹೊಸ ಸೋಂಕಿತರಿಗೆ ಬೆಡ್ ಸಿಗದಂತಾಗಿದೆ. ಇದರ ಮಧ್ಯೆ ಇಂದು ಆಸ್ಪತ್ರೆಗೆ ಬೆಂಕಿ ತಗುಲಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ.