ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಯಾವುದು

ಹಾಸನ : ಕೊರೋನಾ ಸೋಂಕು ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರು ಸೂಕ್ತ ಚಿಕಿತ್ಸೆಗಾಗಿ ಎಲ್ಲಡೆ ಪರದಾಡುವುದು ಸರ್ವೇಸಾಮಾನ್ಯವಾಗಿದೆ. ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವಷ್ಟು ಹಾಸಿಗೆಗಳ ಮತ್ತು ವೈದ್ಯಕೀಯ ನೆರವು ಸಿಗದಿರುವುದು, ಮತ್ತೊಂದೆಡೆ ಅತ್ಯಂತ ದುಬಾರಿಯಾದ ಖಾಸಗಿ ಆಸ್ಪತ್ರೆಗಳಿಗೆ ಸಾಮಾನ್ಯ ಸೋಂಕಿತರು ಹೋಗದೆ ಅತಂತ್ರ ಸ್ಥಿತಿಯಲ್ಲಿ ಪ್ರಾಣಗಳನ್ನು ಕಳೆದುಕೊಳ್ಳುವ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಕಷ್ಟ ಕಾಲದಲ್ಲಿರುವ ಬಡ ರೋಗಿಗಳಿಗೆ ನೆರವಾಗಲೆಂದೇ ಹಾಸನನಗರದಲ್ಲಿ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟ್ ಒಂದು ಪ್ರಾರಂಭವಾಗಿದೆ. ಹಾಸನದ ಹ್ಯುಮ್ಯಾನಿಟೇರಿಯನ್ ಸರ್ವಿಸ್ ಎಚ್‌ಬಿಎಸ್ ಆಸ್ಪತ್ರೆಯೊಂದಿಗೆ ಕೈಜೋಡಿಸಿ ಈ ಕೇಂದ್ರವನ್ನು ನಿರ್ಮಾಣಮಾಡಲಾಗಿದೆ. ಇದರಲ್ಲಿ ಹಾಸನದ ೧೦೦ ಕ್ಕೂ ಹೆಚ್ಚು ಮುಸ್ಲೀಮ್ ಯುವಕರು ಸ್ವಯಂ ಸೇವಕರಾಗಿ ಹಗಲು ರಾತ್ರಿ ಸೇವೆಸಲ್ಲಿಸುತ್ತಿದ್ದಾರೆ.

ಹಾಸನದ ಈಧ್ಗಾ ಮೈದಾನದಲ್ಲಿರುವ ಶರೀಫ್ ಚಾರಿಟಬಲ್ ಟ್ರಸ್ಟ್ನ ನಿರ್ಗತಿಕ ಮಕ್ಕಳ ಕುಟೀರ ಮತ್ತು ವಸತಿ ಶಾಲೆಯ ಕಟ್ಟಡದಲ್ಲಿ ಈ ಕೋವಿಡ್ ಕೇರ್ ಸೆಂಟರನ್ನು ಆರಂಬಿಸಲಾಗಿದೆ. ಸುತ್ತಲೂ ಮರಗಿಡಗಳಿಂದ ಹಸಿರಾಗಿರುವ ಸ್ವಚ್ಚಂದ ವಾತಾವರಣ ಹೊರಗೆ ಮಾತ್ರವಲ್ಲದೆ ಒಳಗೂ ಅಷ್ಟೇ ಅಹಲಾದಕರವಾಗಿದೆ. ಸಾಮಾನ್ಯವಾಗಿ ಕೋವಿಡ್ ಸೋಂಕು ಬಂದವರನ್ನು ಮಾತನಾಡಿಸುವುದು ಅವರ ಹತ್ತಿರ ನಿಂತು ಚಿಕಿತ್ಸೆ ನೀಡುವುದು, ಅವರಿಗೆ ಸಮಾಧಾನದ ಮಾತುಗಳನ್ನಾಡುವುದೇ ಇತ್ತೀಚೆಗೆ ಕಡಿಮೆಯಾಗಿ ಸೋಂಕಿತರು ಒಂದು ರೀತಿ ಖಿನ್ನತೆಯಿಂದ ಆತಂಕಕ್ಕೊಳಗಾಗುತ್ತಿರುವುದು ಎಲ್ಲಡೆ ಕೇಳಿಬರುತ್ತಿದೆ. ಆದರೆ ಇಲ್ಲಿ ಮೂರು ಜನ ತಜ್ಞ ವೈದ್ಯರು, ವೈದ್ಯಕೀಯ ಸಹಾಯಕರು ನಿರಂತರವಾಗಿ ಸೋಂಕಿತರೊಂದಿಗೆ ಬೆರೆತು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಧೈರ್ಯತುಂಬಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆಮ್ಲಜನಕ ಸಹಿತ ಮತ್ತು ಆಮ್ಲಜನಕ ರಹಿತವಾದ ಎರಡು ವಾರ್ಡ್ಗಳು ಮೇ ೧೪ ರಂದು ಪ್ರಾರಂಭವಾಯಿತು. ಇದುವರೆಗು ೯೦ ಜನ ಸೋಂಕಿತರು ಧಾಖಲಾಗಿದ್ದರು ಅದರಲ್ಲಿ ಈಗ ೩೫ ಜನ ಕೇಂದ್ರದಲ್ಲಿದ್ದಾರೆ. ಉಳಿದವರು ವಾಸಿಯಾಗಿ ವಾಪಸ್ ಮನೆಗೆ ಹೋಗಿದ್ದಾರೆ. ಇಲ್ಲಿ ಹಾಸಿಗೆಗೆ, ವೈಧ್ಯರಿಗೆ ಮತ್ತು ಆಕ್ಸಿಜನ್‌ಗೆ ಯಾವುದೇ ಶುಲ್ಕವನ್ನು ಕಟ್ಟಿಸಿಕೊಳ್ಳದೆ ಉಚಿತವಾಗಿ ಸೇವೆ ಮಾಡಲಾಗುತ್ತಿದೆ.

ಧರ್ಮದ ಅಮಲೇರಿಸಿಕೊಂಡ ಕೆಲವರು ಭಾರತದಲ್ಲಿ ಮುಸ್ಲಿಮ್ ತಬ್ಲಿಕಿಗಳೇ ಕೊರೋನವನ್ನು ಹಬ್ಬಿಸುತ್ತಿರುವುದು ಎಂದು ಅಪಪ್ರಚಾರ ಮಾಡುತ್ತಾ ಕೋಮುವಾದಿ ವೈರಸ್ಸನ್ನು ಹರಡುವ ಕೆಲಸವನ್ನು ಮಾಡುತ್ತಿರುವಾಗಲೇ ಇಂತಹ ಪ್ರಗತಿಪರ ಆಲೋಚನೆಗಳನ್ನಿಟ್ಟುಕೊಂಡಿರುವ ಮುಸ್ಲೀಂ ಯುವಕರ ತಂಡ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲದೆ. ಬಂದ ಎಲ್ಲರಿಗೂ ಸೇವೆ ನೀಡುವ ಮಹತ್ ಕಾರ್ಯವನ್ನು ಮಾಡುವ ಮೂಲಕ ಕೆಲಸದಲ್ಲಿ ಮನುಷ್ಯತ್ವವನ್ನು ಹುಡುಕುವ ಪ್ರಯತ್ನವನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ವರದಿ :  ಎಚ್.ಆರ್. ನವೀನ್‌ಕುಮಾರ್

Donate Janashakthi Media

Leave a Reply

Your email address will not be published. Required fields are marked *