ಎಚ್.ಆರ್.ನವೀನ್ಕುಮಾರ್, ಹಾಸನ
“1232 ಕಿ.ಮೀ. ಮನೆ ತಲುಪಲು ಸಾಗಿದ ದೂರ” ಏಳು ವಲಸೆ ಕಾರ್ಮಿಕರ, ಏಳು ದಿನಗಳು ಮತ್ತು ಏಳು ರಾತ್ರಿಗಳ ರೋಚಕ ಕಥಾನಕವೇ ಈ ಪುಸ್ತಕ. ಪತ್ರಕರ್ತ, ನಿರ್ದೇಶಕ ವಿನೋದ್ ಕಾಪ್ರಿಯವರು ಬರೆದಿರುವ ಈ ಪುಸ್ತಕವನ್ನು ಕನ್ನಡದಲ್ಲಿ ಪತ್ರಕರ್ತರಾದ ಸತೀಶ್ ಜಿ.ಟಿ.ಯವರು ಬರೆದಿದ್ದಾರೆ. ನಾವು ಈ ಪುಸ್ತಕವನ್ನು ಅನುವಾದಿಸಿದ್ದಾರೆ ಎಂದು ಹೇಳುತ್ತಿಲ್ಲ. ಇಡೀ ಪುಸ್ತಕವನ್ನು ಓದಿದ ಮೇಲೆ ಸ್ವತಃ ಸತೀಶ್ ರವರೇ ಈ ಘಟನೆಯಲ್ಲಿ ಭಾಗಿಯಾಗಿ ನಮ್ಮ ಮುಂದೆ ಅದನ್ನು ನಮ್ಮದೇ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಎನ್ನುವಂತಿದೆ ಅವರ ಈ ಅನುವಾದದ ಕೆಲಸ. ಜೊತೆಗೆ ಮೂಲ ಇಂಗ್ಲೀಷ್ನಲ್ಲಿ ಕಾಪ್ರಿಯವರು ಇಡೀ ಕಥಾನಕವನ್ನು ಕಟ್ಟಿಕೊಟ್ಟಿರುವ ಶೈಲಿ ಅತ್ಯಂತ ಸರಳ ಮನೋಜ್ಞವಾಗಿದೆ. ಎಲ್ಲಿಯೂ ತನ್ನ ಸ್ವಂತ ಅಭಿಪ್ರಾಯಗಳನ್ನು ಓದುಗರ ಮೇಲೆ ಏರಿಕೆ ಮಾಡದೇ ಏಳು ಜನ ವಲಸೆ ಕಾರ್ಮಿಕರ ಜೊತೆಗಿನ ಮಾತುಗಳು, ಅವರ ಸಂಕಷ್ಟಗಳು ಮತ್ತು ಇಡೀ ಪಯಣದಲ್ಲಿ ಅವರ ಅನುಭವಕ್ಕೆ ಬಂದ ಎಲ್ಲಾ ಸಂಗತಿಗಳನ್ನು ಯತಾವತ್ತಾಗಿ ಧಾಖಲಿಸಿದ್ದಾರೆ. ನಾನೊಬ್ಬ ಅತ್ಯುತ್ತಮ ಪತ್ರಕರ್ತ ಎನ್ನುವುದನ್ನ ಕಾಪ್ರಿಯವನ್ನು ಎಲ್ಲಿಯೂ ಮರೆತಂತಿಲ್ಲ. ಈ ಕಾರ್ಮಿಕರೊಡನೆ ಅವರು ನಡೆಸಿದ ಸಂಭಷಣೆಗಳು ಮತ್ತು ಘಟನೆಗಳ ದಾಖಲೀಕರಣವೇ ನೈಜ ಭಾರತದ ಮುಖಗಳ ಕರಾಳ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ.
ನಾನು ಒಂದೇ ಸಾರಿ ಓದಿ ಮುಗಿಸಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಕೂಡ ಒಂದು. ಅಷ್ಟರ ಮಟ್ಟಿಗೆ ಈ ಪುಸ್ತಕ ನನ್ನನ್ನು ಮೊದಲಿನಿಂದ ಕೊನೆಯವರೆಗು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ. ಮಾತ್ರವಲ್ಲ ಏಳು ಜನರ ಜೊತೆ ನಾವು ಎಂಟನೆಯವರಾಗಿ ಸೈಕಲ್ನಲ್ಲಿ ಪ್ರಯಾಣ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವು ಸಾರಿ ನಾನು ಅತ್ಯಂತ ಭಾವುಕನಾಗಿರುವುದೂ ಉಂಟು ಅದೇ ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವುದೂ ಉಂಟು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೆಹಲಿಯ ಗಾಜಿಯಾಬಾದಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ದುಡಿಮೆ ಇಲ್ಲದೆ ಊಟ ಮಾಡಲೂ ಪರಿತಪಿಸುವ ಪರಿಸ್ಥಿತಿ ಬಂದಾಗ ತಮ್ಮ ಊರುಗಳಿಗೆ ವಾಪಸ್ ಹೋಗಲು ನಿರ್ಧರಿಸಿದ ರಿತೇಶ್, ಆಶಿಶ್, ರಾಮ್ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರದ ಸಹರ್ಸಾಗೆ 1232 ಕಿಲೋ ಮೀಟರ್ ಸೈಕಲಿನಲ್ಲಿ, ನಡೆದುಕೊಂಡು ಪ್ರಯಾಣಿಸುತ್ತಾರೆ. ಇದನ್ನು ಚಿತ್ರೀಕರಿಸಬೇಕು ಎಂದು ಅವರ ಜೊತೆ ಸೇರಿಕೊಳ್ಳುವ ವಿನೋದ್ ಕಾಪ್ರಿ ಮತ್ತು ಮಾನವ್ ಏಳು ದಿನ ಅವರ ಜೊತೆಯಲ್ಲೇ ಇದ್ದು ಇವರ ಸಂಕಷ್ಟಗಳ ಮೂಲಕ ಇಡೀ ದೇಶದ ಆಡಳಿತ ವ್ಯವಸ್ಥೆಯ ವೈಫಲ್ಯ ಮತ್ತು ದೇಶದ ಕಾರ್ಮಿಕರ ನೈಜ ಸ್ಥಿತಿಗಳನ್ನು ಇವರುಗಳ ಮೂಲಕ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಈ ಪುಸ್ತಕ ಪ್ರಕಟಗೊಳ್ಳುವ ಮೊದಲು ಇದರ ಸಾಕ್ಷ್ಯಚಿತ್ರ ಬಿಡುಗಡೆಯಾಗಿತ್ತು. ಅದನ್ನು ನೋಡಲು ಸತೀಶ್ರವರೇ ನನಗೆ ಹೇಳಿದ್ದರು. ನೋಡಿ ನನ್ನ ಅಭಿಪ್ರಾಯಗಳನ್ನು ದಾಖಲಿಸಿದ್ದೆ. ಆದರೆ ಈಗ ಪುಸ್ತಕ ಓದಿದ ಮೇಲೆ ನನಗನಿಸಿರುವುದು ಮತ್ತು ಸ್ವತಃ ಕಾಪ್ರಿಯವರೇ ಹೇಳಿರುವ ಹಾಗೆ “ಹಲವು ವಿಚಾರಗಳನ್ನು ಕೆಮರಾದಲ್ಲಿ ದೃಶ್ಯಗಳ ಮೂಲಕ ಕಟ್ಟಿಕೊಡಲು ಸಾಧ್ಯವಾಗಲಿಲ್ಲ ಅವನ್ನೆಲ್ಲಾ ನಾನು ಅಕ್ಷರ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇನೆ” ಇದು ನಿಜ ನನಗೆ ಆ ಸಾಕ್ಷ್ಯ ಚಿತ್ರಕ್ಕಿಂತ ಈ ಪುಸ್ತಕವೇ ಹೆಚ್ಚು ಆತ್ಮೀಯವಾಗಿತು ಮಾತ್ರವಲ್ಲ ಇದು ನನ್ನನ್ನು ಅತಿಯಾಗಿ ಕಾಡುತ್ತಿದೆ.
ನನ್ನ ಈ ಅಭಿಪ್ರಾಯ ಕೆಲವರಿಗೆ ಅತಿಶಯೋಕ್ತಿ ಅಂತ ಅನ್ನಿಸಬಹುದು ಆದರೆ ಇಡೀ ಪ್ರಯಾಣದಲ್ಲಿ ಅವರ ಜೊತೆಯಾದ ಮೇಲೆ ನನಗೆ ರಿತೇಶ್, ಆಶಿಶ್, ರಾಮ್ಬಾಬು ಈ ಮೂವರು ಆ ತಂಡವನ್ನು ಮುನ್ನಡೆಸಿದ ರೀತಿ, ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವಿಧಾನ, ಅವರ ಆಲೋಚನೆಗಳು ಸ್ವಾತಂತ್ರ್ಯ ಚಳುವಳಿಯ ದೃವತಾರೆಗಳಾದ ಭಗತ್ಸಿಂಗ್, ರಾಜ್ಗುರು ಮತ್ತು ಸುಖದೇವ್ರವರನ್ನು ನೆನಪಿಸುವಂತಿತ್ತು.
ಅವರ ಇಡೀ ಪ್ರಯಾಣದಲ್ಲಿ ಬರುವ ಕೆಲವು ಘಟನೆಗಳು ನಮ್ಮನ್ನು ಕೊನೆಯವರೆಗೂ ಕಾಡುತ್ತವೆ. ಪೊಲೀಸರ ಉಪಟಳದಿಂದ ತಮ್ಮನ್ನು ಕಾಪಾಡಿಕೊಳ್ಳಲು ಹೆದ್ದಾರಿಯ ಪ್ರಯಾಣವನ್ನು ನಿಲ್ಲಿಸಿ ಕಚ್ಚಾ ರಸ್ತೆಗಳಲ್ಲಿ ಪ್ರಯಾಣ ಆರಂಭಿಸಿ ಅವರು ಪಡುವ ಕಷ್ಟಗಳು ಅಷ್ಟು ಮಾತ್ರವಲ್ಲ ಗಂಗಾ ನದಿಯನ್ನು ಅವರ ಸೈಕಲ್ಗಳ ಜೊತೆ ದಾಟಲು ಹೋದ ಸಾಹಸ. ಚಕ್ ಪೋಸ್ಟ್ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಅವರು ಪಡುವ ಯಾತನೆ, ದೌರ್ಜನ್ಯ, ದಬ್ಬಾಳಿಕೆ, ಅಲ್ಲಿಂದ ತಪ್ಪಿಸಿಕೊಳ್ಳಲು ಅವರು ಮಾಡುವ ಯೋಜನೆಗಳು. ಅಂತಿಮವಾಗಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ವ್ಯವಸ್ಥೆಯ ವಿರುದ್ಧ ಅನಿವಾರ್ಯವಾಗಿ ಸಂಘಟಿತ ಹೋರಾಟವನ್ನು ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಮತ್ತು ತಮ್ಮನ್ನೂ ಮನುಷ್ಯರಂತೆ ಕಾಣಿ ಎಂದು ಹೇಳುವ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ಕಟ್ಟಿಕೊಡಲಾಗಿದೆ.
ಇಡೀ ಪುಸ್ತಕದಲ್ಲಿ ಬರುವ ಹಲವು ಘಟನೆಗಳು ದೇಶದ ಕಾರ್ಮಿಕರ ನೈಜ ಸ್ಥಿತಿಯ ಜೊತೆಗೆ, ಅಧಿಕಾರಿಗಳ ದರ್ಪ, ಮಾನವೀಯತೆಯನ್ನು ಕಳೆದುಕೊಂಡ ವ್ಯವಸ್ಥೆಯ ಮುಖ್ಯಸ್ಥರುಗಳು, ಕಾರ್ಮಿಕರನ್ನು ಮನುಷ್ಯರೇ ಅಲ್ಲ ಎನ್ನುವಂತೆ ನಡೆಸಿಕೊಂಡ ರೀತಿ, ಈ ಕಾರ್ಮಿಕರಿಗೆ ಯಾರು ಸಹಾಯ ಮಾಡುತ್ತಾರೆ, ಯಾರು ಸಹಾಯ ನಿರಾಕರಿಸುತ್ತಾರೆ. ಕುಡಿಯುವ ನೀರಿನಿಂದ ಹಿಡಿದು, ತಿನ್ನುವ ಊಟ, ಅವರ ಸೈಕಲ್ ಗಳಿಗೆ ಪಂಚರ್ ಹಾಕಿಹೊಡುವವರೆಗೆ ಯಾರು ಜೊತೆಗಿರುತ್ತಾರೆ, ಯಾರು ಮೋಸ ಮಾಡುತ್ತಾರೆ ಎಂಬುದನ್ನು ಹೇಳುವ ಮೂಲಕ ಭಾರತದ ಪ್ರಸಕ್ತ ಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ.
ತಮ್ಮ ಶ್ರಮ ಶಕ್ತಿಯ ಮೂಲಕ ಎಲ್ಲವನ್ನು ನಿರ್ಮಿಸುವ ಕಾರ್ಮಿಕರು ತಾವೇ ಕಟ್ಟಿದ ಬೃಹತ್ ನಗರಗಳಲ್ಲಿ ನಿಲ್ಲಲು ನೆಲೆಯಿಲ್ಲದೆ, ಹೊಟ್ಟೆಗೆ ಒಂದೊತ್ತು ಊಟವಿಲ್ಲದೆ ಪರದಾಡುವ ಸ್ಥಿತಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಕಾರ್ಮಿಕರ ಶ್ರಮ ಶಕ್ತಿಯನ್ನು ಶೋಷಣೆ ಮಾಡಿ ಅದರಿಂದ ಲಾಭ ಪಡೆದ ಮಾಲೀಕರು ಕಷ್ಟ ಬಂದಾಗ ಇವರುಗಳ ಜೊತೆ ನಿಲ್ಲದಿರುವ ಬಂಡವಾಳಶಾಹಿಯ ಅಮಾನವೀಯ ಕ್ರೂರ ವರ್ಗಗುಣ ಪದೇಪದೇ ಸಾಬೀತಾಗುತ್ತಿದೆ. ಮತ್ತೊಂದೆಡೆ ಸರ್ಕಾರ ಆಡಳಿತವರ್ಗ ಇವರನ್ನು ಕಸಕ್ಕಿಂತ ಕೀಳಾಗಿ ಕಾಣುತ್ತಿದೆ. ಇವರ ತೆರಿಗೆ ಮತ್ತು ಇವರ ಶ್ರಮ ಶಕ್ತಿ ಸರ್ಕಾರಗಳಿಗೆ ಬೇಕು ಆದರೆ ಇವರು ಸಂಕಷ್ಟದಲ್ಲಿದ್ದಾಗ ಇವರನ್ನು ಕೈಹಿಡಿಯುವ ಯಾವ ಹೃದಯವಂತಿಕೆಯನ್ನೂ ಆಳುವ ವರ್ಗ ತೋರಿಸುವುದಿಲ್ಲ. ಇದೇ ವಾಸ್ತವ. ಅದಕ್ಕಾಗಿಯೇ ಮಹಾನ್ ಚಿಂತಕ ಕಾರ್ಲ್ ಮಾರ್ಕ್ಸ್ ಹೇಳಿದ್ದು “ಜಗತ್ತಿನ ಕಾರ್ಮಿಕರೇ ಒಂದಾಗಿ, ನೀವು ಕಳೆದುಕೊಳ್ಳಲು ಸಂಕೋಲೆಯನ್ನೊರತುಪಡಿಸಿ ಬೇರೇನು ಇಲ್ಲ” ಈ ಮಾತು ಈ ಸಂದರ್ಭದಲ್ಲಂತೂ ಅತಿಹೆಚ್ಚು ಪ್ರಸ್ತುತವಾಗುತ್ತದೆ. ಎಲ್ಲಿಯವರೆಗು ಆಧುನಿಕ ಮಾನವ ಸಮಾಜವನ್ನು ನಿರ್ಮಿಸಿದ ಶ್ರಮ ಜೀವಿಗಳನ್ನು ಗೌರವಿಸಿ, ಅವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುವ ವ್ಯವಸ್ಥೆ ಬರುವುದಿಲ್ಲವೋ ಅಲ್ಲಿಯವರೆಗೆ ಈ ಕ್ರೂರ ಶೋಷಣೆ ಮುಂದುವರೆಯುತ್ತಿರುತ್ತದೆ.
ಈ ಪುಸ್ತಕವನ್ನು ಹಾಸನದ ಪ್ರಜೋದಯ ಪ್ರಕಾಶನ ಪ್ರಕಟಿಸಿದೆ.