ಉತ್ತರ ಪ್ರದೇಶ : ಉಪಮುಖ್ಯಮಂತ್ರಿ ಸೇರಿ 11 ಮಂತ್ರಿಗಳ ಸೋಲು

ಲಕ್ನೋ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ವಿಜಯ ದಾಖಲಿಸಿದರೂ ಯೋಗಿ ಆದಿತ್ಯನಾಥ್ ಸರ್ಕಾರದ 11 ಮಂತ್ರಿಗಳು ಗೆಲ್ಲಲು ವಿಫಲರಾಗಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಫಲಿತಾಂಶ ಪ್ರಕಟವಾದ 402 ಸ್ಥಾನಗಳಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದಿದೆ.

ಸೋತ ಸಚಿವರಲ್ಲಿ ನಿರ್ಗಮಿತ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರತು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳಿಂದ ಸೋತಿದ್ದಾರೆ. ಪಟೇಲ್ ಅವರು ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಅಪ್ನಾ ದಳ(ಕೆ) ಉಪಾಧ್ಯಕ್ಷರಾಗಿದ್ದಾರೆ.

ಕಬ್ಬು, ಸಕ್ಕರೆ ಸಚಿವ ಸುರೇಶ್ ರಾಣಾ ಅವರು ಶಾಮ್ಲಿ ಜಿಲ್ಲೆಯ ಠಾಣಾ ಭವನದಲ್ಲಿ ಆರ್‌ಎಲ್‌ಡಿಯ ಅಶ್ರಫ್ ಅಲಿ ಖಾನ್ ವಿರುದ್ಧ 10,000 ಮತಗಳಿಂದ ಸೋತಿದ್ದಾರೆ.

ಮತ್ತೊಬ್ಬ ಸಚಿವ ಛತ್ರಪಾಲ್ ಸಿಂಗ್ ಗಂಗ್ವಾರ್ ಅವರನ್ನು ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅತೌರ್ ರೆಹಮಾನ್ 3,355 ಮತಗಳಿಂದ ಸೋಲಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್ ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ರಾಮ್ ಸಿಂಗ್ ವಿರುದ್ಧ 22,051 ಮತಗಳಿಂದ ಸೋತಿದ್ದಾರೆ.

ಆದಿತ್ಯನಾಥ್ ಸರ್ಕಾರದ ಮತ್ತೊಬ್ಬ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟದಲ್ಲಿ ಸಮಾಜವಾದಿ ಪಕ್ಷದ ಅನಿಲ್ ಕುಮಾರ್ ವಿರುದ್ಧ 20,876 ಮತಗಳಿಂದ ಸೋತಿದ್ದಾರೆ.

ಆನಂದ್ ಸ್ವರೂಪ್ ಶುಕ್ಲಾ ಅವರು ಬಲ್ಲಿಯಾ ಜಿಲ್ಲೆಯ ಬರಿಯಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜೈಪ್ರಕಾಶ್ ಅಂಚಲ್ ವಿರುದ್ಧ 12,951 ಮತಗಳಿಂದ ಸೋತಿದ್ದಾರೆ. ಶುಕ್ಲಾ ಕಳೆದ ಬಾರಿ ಬಲ್ಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಹಾಲಿ ಶಾಸಕ ಸುರೇಂದ್ರ ಸಿಂಗ್ ಬದಲಿಗೆ ಬರಿಯಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ಇದನ್ನೂ ಓದಿ : ಪಂಜಾಬ್​​: ಮೊಬೈಲ್‌ ರಿಪೇರಿ ಅಂಗಡಿ ಮಾಲೀಕ ಎದುರು ಸೋಲುಂಡ ಪಂಜಾಬ್ ಮುಖ್ಯಮಂತ್ರಿ

ರಾಜ್ಯದ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಬಲ್ಲಿಯಾದಲ್ಲಿ ಫೆಫ್ನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಗ್ರಾಮ್ ಸಿಂಗ್ ವಿರುದ್ಧ 19,354 ಮತಗಳಿಂದ ಸೋತಿದ್ದಾರೆ.

ಫತೇಪುರ್ ಜಿಲ್ಲೆಯ ಹುಸೇನ್ ಗಂಜ್ ಕ್ಷೇತ್ರದಲ್ಲಿ ಸಚಿವ ರಣವೇಂದ್ರ ಸಿಂಗ್ ಧುನ್ನಿ ಅವರನ್ನು ಸಮಾಜವಾದಿ ಪಕ್ಷದ ಉಷಾ ಮೌರ್ಯ 25,181 ಮತಗಳಿಂದ ಸೋಲಿಸಿದ್ದಾರೆ.

ಔರೈಯಾ ಜಿಲ್ಲೆಯ ದಿಬಿಯಾಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪ್ರದೀಪ್ ಕುಮಾರ್ ಯಾದವ್ ವಿರುದ್ಧ ಲಖನ್ ಸಿಂಗ್ ರಜಪೂತ್ 473 ಮತಗಳಿಂದ ಸೋಲು ಕಂಡಿದ್ದಾರೆ.

ರಾಜ್ಯದ ಮೂಲ ಶಿಕ್ಷಣ ಸಚಿವ ಸತೀಶ್ ಚಂದ್ರ ದ್ವಿವೇದಿ ಅವರನ್ನು ಎಸ್‌ಪಿ ಅಭ್ಯರ್ಥಿ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಸಿದ್ಧಾರ್ಥನಗರದ ಇಟ್ವಾ ಕ್ಷೇತ್ರದಲ್ಲಿ ಸೋಲಿಸಿದರು.

ಮತ್ತೋರ್ವ ಸಚಿವೆ ಸಂಗೀತಾ ಬಲ್ವಂತ್ ಅವರನ್ನು ಎಸ್‌ಪಿಯ ಜೈ ಕಿಶನ್ ಅವರು ಗಾಜಿಪುರ ಕ್ಷೇತ್ರದಲ್ಲಿ 1,692 ಮತಗಳಿಂದ ಸೋಲಿಸಿದರು.

Donate Janashakthi Media

Leave a Reply

Your email address will not be published. Required fields are marked *