ರಾಹುಲ್ ಗಾಂಧಿ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನೆ ಶಾಸಕ

ಮುಂಬೈ: ಮೀಸಲಾತಿ ರದ್ದುಪಡಿಸುವ ಕುರಿತು ಹೇಳಿಕೆ ನೀಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಗಾಯಕ್ವಾಡ್ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರದಲ್ಲಿ ಬಿಜೆಪಿಯೂ ಮೈತ್ರಿಪಕ್ಷವಾಗಿದೆ.

ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾಗ ಭಾರತದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲು ಬಯಸುವುದಾಗಿ ಹೇಳಿದ್ದರು. ಇದು ಕಾಂಗ್ರೆಸ್‌ನ ನಿಜವಾದ ಮುಖವನ್ನು ಅನಾವರಣಗೊಳಿಸಿದೆ ಎಂದು ಗಾಯಕ್ವಾಡ್ ವಿವಾದಾತ್ಮಕ ಬಹುಮಾನ ಘೋಷಿಸುವ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ವಿದರ್ಭ ಪ್ರದೇಶದ ಬುಲ್ಧಾನ ವಿಧಾನಸಭಾ ಕ್ಷೇತ್ರದ ಶಾಸಕ ಗಾಯಕ್‌ವಾಡ್‌ಗೆ ವಿವಾದಗಳು ಹೊಸದೇನಲ್ಲ. ಕಳೆದ ತಿಂಗಳು ಪೊಲೀಸರು ಶಿವಸೇನೆ ಶಾಸಕರ ಕಾರನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಕಾರಿನಲ್ಲಿ ಪೊಲೀಸರು ವಾಂತಿ ಮಾಡಿಕೊಂಡ ನಂತರ ಸ್ವಯಂಪ್ರೇರಣೆಯಿಂದ ಸ್ವಚ್ಛಗೊಳಿಸಿದರು ಎಂದು ಗಾಯಕ್ವಾಡ್ ಸಮರ್ಥಿಸಿಕೊಂಡಿದ್ದರು.

1987 ರಲ್ಲಿ ಹುಲಿಯೊಂದನ್ನು ಬೇಟೆಯಾಡಿ ಅದರ ಹಲ್ಲನ್ನು ತನ್ನ ಕುತ್ತಿಗೆಗೆ ಹಾಕಿಕೊಂಡಿರುವುದಾಗಿ ಗಾಯಕ್ವಾಡ್ ಫೆಬ್ರವರಿಯಲ್ಲಿ ಹೇಳಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅದರ ಗುರುತು ಪತ್ತೆ ಹಚ್ಚಲು ಹುಲಿ ಹಲ್ಲನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿತ್ತು. ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಾಯಕ್ವಾಡ್ ವಿರುದ್ಧ ಆರೋಪ ಹೊರಿಸಿತ್ತು.

ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು?

ಈಚೆಗೆ ಅಮೆರಿಕ ಪ್ರವಾಸದ ಅವಧಿಯಲ್ಲಿ ರಾಹುಲ್‌ ಗಾಂಧಿ ಅವರು, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದಾಗಿ ವರದಿಯಾಗಿತ್ತು. ನಂತರ ಮಾಧ್ಯಮ ಸಂವಾದದಲ್ಲಿ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಹೇಳಿದ್ದರು.

 

Donate Janashakthi Media

Leave a Reply

Your email address will not be published. Required fields are marked *