ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ದುರಂತವೊಂದು ಸಂಭವಿಸಿದ್ದು, ಮುಂಬೈಯ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ಮನೆಗಳು ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ 11 ಮಂದಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಹಲವು ಮಂದಿ ಇಲ್ಲಿದ್ದರು. ತಕ್ಷಣವೇ ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಒಳಗೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲಾಗಿದೆ ಎಂದು ‘ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಇದನ್ನು ಓದಿ: ಮುಂಬೈಯಲ್ಲಿ ಭರ್ಜರಿ ಮಳೆ: ರೆಡ್ ಅಲರ್ಟ್ ಘೋಷಣೆ
ನೆಲಮಹಡಿ ಒಳಗೊಂಡ ಮೂರು ಅಂತಸ್ತಿನ ಕಟ್ಟಡವು ಮತ್ತೊಂದು ಕಟ್ಟಡದ ಮೇಲೆ ಕುಸಿದುಬಿದ್ದಿದೆ. ಕಾರ್ಯಾಚರಣೆಯಲ್ಲಿ ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದಿಲೀಪ್ ಸಾವಂತ್ ತಿಳಿಸಿದ್ದಾರೆ.
ನೆನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ,. ಇದೇ ದಿನ ಮುಂಬೈನಲ್ಲಿ ಭಾರಿ ಮಳೆಯಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿತ್ತು. ಏಳು ಮಂದಿ ಗಂಭೀರವಾಗಿ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಟ್ಟಡ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಸಿಲುಕಿ ಹಾಕಿಕೊಂಡಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ರಕ್ಷಣೆ ಮಾಡಲಾದ ಮಹಿಳೆಯರು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ರಕ್ಷಣಾ ಕಾರ್ಯ ಸಿಬ್ಬಂದಿ ಕಾರ್ಯಚಾರಣೆಯಲ್ಲಿ ತೊಡಗಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.