- ಪಠ್ಯದಲ್ಲಿ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಗಬೇಕು ಸೇರ್ಪಡೆ
- ಮೃಗ ಮಟ್ಟು ಸುಂದರಿ – ಭಗತ್‌ಸಿಂಗ್ ಪಠ್ಯ ಕೈಬಿಡಲಾಗಿದೆ
ಬೆಂಗಳೂರು: 2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ ಪಾಠವನ್ನು ಸೇರಿಸಲಾಗಿದೆ.
10ನೇ ತರಗತಿಯ ಪಠ್ಯಪುಸ್ತಕದಲ್ಲಿ 5ನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ಹಾಗೆಯೇ, ಪತ್ರಕರ್ತ ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಮತ್ತು ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್” ಪಾಠಗಳನ್ನು ಕೈಬಿಡಲಾಗಿದೆ. ಇವುಗಳ ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಸೇರಿಸಲಾಗಿದೆ.
ಸಾರಾ ಅಬೂಬಕ್ಕರ್ ಅವರ “ಯುದ್ಧ”, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನು ಕೈಬಿಡಲಾಗಿದೆ. ವೇದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ “ಶುಕನಾಶನ ಉಪದೇಶ” ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಲಾಗಿದೆ.
ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಠ್ಯ ಕೈ ಬಿಟ್ಟರೂ ಭಗತ್ ಸಿಂಗ್ ಅವರ ಮತ್ತಷ್ಟು ಸಾಹಸ ಕಥೆಯನ್ನು ಸೇರಿಸಲಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿ ಸಂಘಟನೆಗಳ ಖಂಡನೆ
ಹತ್ತನೇ ತರಗತಿಯ ಕನ್ನಡ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್ ಕುರಿತ ಪಾಠವನ್ನು ಕೈಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಹೆಡ್ಗೆವಾರ್ ಅವರ ಭಾಷಣವನ್ನು ಸೇರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿ ಸಂಘಟನೆಗಳಾದ ಭಾರತ ವಿದ್ಯಾರ್ಥಿ ಫೆಡರೇಷನ್ (SFI), ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿ ಸಂಘಟನೆ -ಎಐಡಿಎಸ್‌ಒ ಮತ್ತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ -ಎಐಎಸ್‌ಇಸಿ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ.
ನವೋದಯ ಚಳುವಳಿಯ ಸ್ಥಾಪಕರು ಮತ್ತು ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಪ್ರಜಾಪ್ರಭುತ್ವ, ವೈಜ್ಞಾನಿಕ ಮತ್ತು ಜಾತ್ಯತೀತ ಶಿಕ್ಷಣವನ್ನು ಆಶಿಸಿದರು. ಆದರೆ ಇಲ್ಲಿಯವರೆಗೆ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಪಠ್ಯಪುಸ್ತಕಗಳಲ್ಲಿ ತಮ್ಮದೇ ಆದ ಅಜೆಂಡಾಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಿದರು.