ಬೆಂಗಳೂರು: ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕೊರೋನಾ ವಿರುದ್ಧ ಜಯಗಳಿಸಿದ್ದಾರೆ. ಸೋಂಕು ಕಾಣಿಸಿಕೊಂಡಿದ್ದ 104 ವರ್ಷದ ದೊರೆಸ್ವಾಮಿ ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 104 ವರ್ಷದ ಹಿರಿಯ ಜೀವ ಕೋವಿಡ್ ಗೆದ್ದು ಬಂದಿರುವುದು ಇತರೆ ರೋಗಿಗಳಿಗೆ ಧೈರ್ಯ ತುಂಬಲಿದೆ. ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು , ಮತ್ತು ಸಿಬ್ಬಂದಿ ದೊರೆಸ್ವಾಮಿ ಅವರನ್ನು ಆರೈಕೆ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಎಸ್. ದೊರೆಸ್ವಾಮಿಯವರು ”ನನಗೆ ಕೋವಿಡ್ ಸೋಂಕು ಇರಲಿಲ್ಲ. ಕಳೆದ ವಾರ ಕೊಂಚ ಉಸಿರಾಟಕ್ಕೆ ತೊಂದರೆಯಾಯಿತು. ನನಗೆ ಆಗಾಗ ಇಂತಹ ತೊಂದರೆ ಕಂಡು ಬರುತ್ತದೆ. ಆಗೆಲ್ಲಾ ಜಯದೇವ ಆಸ್ಪತ್ರೆಗೆ ಹೋಗಿ ಒಂದು ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದೆ. ಅದೇ ರೀತಿ ಈಗಲೂ ಹೋಗಿ ಇಂಜೆಕ್ಷನ್ ತೆಗೆದುಕೊಂಡೆ. ಸರಿ ಹೋಯಿತು. ಆ ವೇಳೆಗೆ ಆಸ್ಪತ್ರೆಯವರು ಕೋವಿಡ್ ಟೆಸ್ಟ್ ಮಾಡಿದರು. ಆಗ ಪಾಸಿಟಿವ್ ಬಂತು. ಒಂದು ವಾರ ಇಲ್ಲಿಯೇ ಇರಬೇಕು ಎಂದರು. ವೈದ್ಯರಾದ ಡಾ. ಮಂಜುನಾಥ್ ಸಲಹೆಯಂತೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದೆ. ಜತೆಗೆ ನನಗೆ ಆಗಾಗ ಕಫ, ಕೆಮ್ಮು ಮಾಮೂಲಿಯಾಗಿ ಬರುತ್ತದೆ. ಏನೂ ತೊಂದರೆಯಿಲ್ಲ” ಎಂದು ತಮ್ಮ ಅನುಭವ ಹಂಚಿಕೊಂಡರು.
ಶತಾಯುಷಿ ದೊರೆಸ್ವಾಮಿಯವರು ಕೋವಿಡ್ ನಿಂದ ಚೇತರಿಸಿಕೊಂಡಿದ್ದು ಇತರರಿಗೆ ಮಾದರಿ ಮತ್ತು ಸ್ಪೂರ್ತಿಯಾಗಿದೆ.