ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿ 1920ರಲ್ಲಿ ಆರಂಭವಾಗಿದ್ದು 2020-21 ಅದರ ಶತಮಾನೋತ್ಸವದ ವರ್ಷ. ಕಮ್ಯುನಿಸ್ಟ್ ಚಳುವಳಿಯ ಸಾಧನೆಗಳು-ವೈಫಲ್ಯಗಳು, ಏಳು-ಬೀಳುಗಳು, ಕೊಡುಗೆಗಳನ್ನು ನೆನಪಿಸಿಕೊಳ್ಳುವ ವಿಶ್ಲೇಷಿಸುವ ಸಂದರ್ಭ. ಇದನ್ನು ವಿಚಾರ ಸಂಕಿರಣಗಳು, ಸಭೆ-ಸಮಾರಂಭಗಳು, ಉಪನ್ಯಾಸಗಳು, ಪ್ರಕಟಣೆಗಳೊಂದಿಗೆ ಸಂಭ್ರಮಿಸುವ ಆಚರಿಸುವ ಸಂದರ್ಭ. ಆದರೆ ಕೊರೊನಾದಿಂದಾಗಿ ಹೆಚ್ಚಿನ ಮಟ್ಟಿಗೆ ಇದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ‘ಜನಶಕ್ತಿ ಪ್ರಕಾಶನ’ ಎರಡು ಪುಸ್ತಕಗಳ ಪ್ರಕಟಣೆಯ ಮೂಲಕ ಈ ಕೊರತೆಯನ್ನು ಸ್ವಲ್ಪವಾದರೂ ನೀಗಿಸುತ್ತಿದೆ. “ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ: 1920-64 ಅವಧಿಯ ಇತಿಹಾಸ” ಮತ್ತು “ಭಾರತದ ಕಮ್ಯುನಿಸ್ಟ್ ಆಂದೋಲನ: ಹೋರಾಟದ ನೂರು ವರ್ಷಗಳು” – ಆ ಎರಡು ಪುಸ್ತಕಗಳು.
ಮೊದಲ ಪುಸ್ತಕವನ್ನು ಅರುಣ ಕುಮಾರ್ ಬರೆದಿದ್ದು, ಟಿ ಸುರೇಂದ್ರ ರಾವ್ ಅವರು ಮೂಲ ಇಂಗ್ಲೀಷಿನಿಂದ ಅನುವಾದಿಸಿದ್ದಾರೆ. ಇದು ಅದರ ಶೀರ್ಷಿಕೆಯೇ ಹೇಳುವಂತೆ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ 1920-64 ಅವಧಿಯ 45 ಅಧ್ಯಾಯಗಳಿರುವ ಸುಮಾರು 300 ಪುಟಗಳ ವಿವರವಾದ ಇತಿಹಾಸ. ಪ್ರತಿಯೊಂದು ಅಧ್ಯಾಯದಲ್ಲಿ ಕಾಲಕ್ರಮದಲ್ಲಿ 1920ರಲ್ಲಿ ಸ್ಥಾಪನೆಯಾಗುತ್ತಲೇ ಕಮ್ಯುನಿಸ್ಟ್ ಪಕ್ಷ ಎದುರಿಸಿದ ಮೀರತ್ ಪಿತೂರಿ ಮೊಕದ್ದಮೆ ಮುಂತಾದ ದಮನಚಕ್ರಗಳು, ಅದರ ನಡುವೆ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟ ಮತ್ತು ಬಂಡವಾಳಶಾಹಿ-ಭೂಮಾಲಕರ ವಿರುದ್ಧ ರೈತ-ಕಾರ್ಮಿಕರ ಹೋರಾಟಗಳನ್ನು ಬೆಸೆಯುವ ಕುರಿತು ನಡೆಸಿದ ಚಿಂತನ-ಮಂಥನಗಳು, ರೂಪಿಸಿದ ಧೋರಣೆ-ಕಾರ್ಯತಂತ್ರಗಳು (ಕರಡು ಕಾರ್ಯಾಚರಣೆಯ ವೇದಿಕೆ-1931, ದತ್-ಬ್ರಾಡ್ಲಿ ಪ್ರಬಂಧ-1936, ಕಾರ್ಮಿಕ ಸಂಘಗಳಲ್ಲಿ ಕೆಲಸ ಕುರಿತು 1952ರ ಸಮಾವೇಶ, ರೈತರ ನಡುವೆ ಕೆಲಸದ ಕುರಿತು ದಸ್ತಾವೇಜು), ಸಂಘಟನಾ ಕ್ರಮಗಳು (ಅಖಿಲ ಭಾರತ ಕೇಂದ್ರದ ರಚನೆ, ಅಖಿಲ ಭಾರತ ಸಾಮೂಹಿಕ ಸಂಘಟನೆಗಳ ಸ್ಥಾಪನೆ, 1 ರಿಂದ 4 ನೆಯ ವರೆಗಿನ ಮಹಾಧಿವೇಶನಗಳು), ಜನಾಂದೋಲನಗಳ ಸಂಘಟನೆಯಲ್ಲಿ ಪಕ್ಷದ ಪಾತ್ರ (ರಿನ್ ಬಂಡಾಯ, ತೇಭಾಗ, ಪುನ್ನಪ್ರ-ವಯಲಾರ್, ವಾರಲೀ, ಸುರ್ಮಾ ಕಣಿವೆ, ತೆಲಂಗಾಣ ರೈತರ ಸಶಸ್ತ್ರ ಹೋರಾಟದ ಮೂರು ಹಂತಗಳು, 1959ರ ಬಂಗಾಳ ಆಹಾರ ಚಳುವಳಿ, ಪಂಜಾಬಿನ ಅಭಿವೃದ್ಧಿ ಕಂದಾಯದ ವಿರುದ್ಧ ಹೋರಾಟ) ಕೈಗೊಂಡ ಜನಸೇವೆ (ಬಂಗಾಳದ ಬರಗಾಲ) ರಾಜಕೀಯ ಮಧ್ಯಪ್ರವೇಶ (ಭಾಷಾವಾರು ರಾಜ್ಯಗಳ ರಚನೆ), ಕೇರಳದ ಮೊದಲ ಕಮ್ಯುನಿಸ್ಟ್ ಸರಕಾರದ ರಚನೆ – ಇವುಗಳ ಕುರಿತು ವಿವರವಾದ ಮಾಹಿತಿಯಿದೆ. ಇವಲ್ಲದೆ ಪಕ್ಷದ ಪ್ರಾತಸ್ಮರಣೀಯ ಸ್ಥಾಪಕ ಸದಸ್ಯರಾದ ಎಂ.ಎನ್.ರಾಯ್, ಅಮೀರ್ ಹೈದರ್ ಖಾನ್, ಮುಜಾಫರ್ ಅಹಮದ್ ಜೀವನದ ರೋಚಕ ಪರಿಚಯವಿದೆ. ತಾಷ್ಕೆಂಟಿನಲ್ಲಿ ಪಕ್ಷ ಸ್ಥಾಪಿತವಾದ 1920 ಅಥವಾ ಕಾನ್ಪುರದ ಕಮ್ಯುನಿಸ್ಟ್ ಸಮ್ಮೇಳನ ನಡೆದ 1925 – ಇವುಗಳಲ್ಲಿ ಸ್ಥಾಪನಾ ವರ್ಷ ಯಾವುದು ಎಂಬುದರ ಕುರಿತು ಸಿಪಿಐ ಮತ್ತು ಸಿಪಿಐ(ಎಂ) ಗಳ ನಡುವೆ ವಿವಾದದ ಕುರಿತು ಜಿಜ್ಞಾಸೆ ಇದೆ. ಇದು ಹೀಗೆ ಕಮ್ಯುನಿಸ್ಟ್ ಪಕ್ಷದ ಮೊದಲ ಅರ್ಧ ಶತಮಾನದ ವಿವರವಾದ ಇತಿಹಾಸ ತಿಳಿದುಕೊಳ್ಳಲು ಓದಲೇ ಬೇಕಾದ ಪುಸ್ತಕ. ಈ ಪುಸ್ತಕದ ಬೆಲೆ ರೂ. 250.
ಎರಡನೆಯ ಪುಸ್ತಕ “ಭಾರತದ ಕಮ್ಯುನಿಸ್ಟ್ ಆಂದೋಲನ: ಹೋರಾಟದ ನೂರು ವರ್ಷಗಳು” ಸುಮಾರು 80 ಪುಟಗಳದ್ದಾಗಿದ್ದು, ಕಳೆದ ನೂರು ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಯಾಮಗಳಲ್ಲಿ ಕಮ್ಯುನಿಸ್ಟ್ ಚಳುವಳಿಯ ವಿಶಿಷ್ಟ ಕೊಡುಗೆಗಳ ಕುರಿತು ಪ್ರಮುಖ ಕಮ್ಯುನಿಸ್ಟ್ ನಾಯಕರು ಬರೆದ ಲೇಖನಗಳ ಸಂಗ್ರಹ. ಪ್ರಜಾಪ್ರಭುತ್ವಕ್ಕೆ ಹೋರಾಟದಲ್ಲಿ ಕಮ್ಯುನಿಸ್ಟರ ವಿಶಿಷ್ಟ ಕೊಡುಗೆಗಳ ಕುರಿತು ಪ್ರಕಾಶ್ ಕಾರಟ್, ಜಾತ್ಯತೀತತೆಯ ರಕ್ಷಣೆಗೆ ಕೊಡುಗೆಗಳ ಕುರಿತು ಸೀತಾರಾಂ ಯೆಚುರಿ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ವಿಶಿಷ್ಟ ಪಾತ್ರದ ಕುರಿತು ನೀಲೋತ್ಪಲ ಬಸು ವಿಶ್ಲೇಷಿಸಿದ್ದಾರೆ. ಕಾರ್ಮಿಕ ವರ್ಗದ ಚಳುವಳಿಯ ಸಂಘಟನೆಯಲ್ಲಿ ಕಮ್ಯುನಿಸ್ಟರ ಮುಂದಾಳ್ತನದ ಕುರಿತು ಡಾ.ಹೇಮಲತಾ ವಿವರಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಕಮ್ಯುನಿಸ್ಟರ ಕೊಡುಗೆ ಕುರಿತು ಬಿ.ವಿ.ರಾಘವುಲು, ಮಹಿಳಾ ವಿಮೋಚನಾ ಹೋರಾಟದಲ್ಲಿ ಕಮ್ಯುನಿಸ್ಟರ ವಿಶಿಷ್ಟ ಪಾತ್ರದ ಕುರಿತು ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ. ಶತಮಾನೋತ್ಸವದ ಸಂದರ್ಭದಲ್ಲಿ ಹೊಸ ಸವಾಲು ಗಳ ಕುರಿತು ಪ್ರೊ. ಪ್ರಭಾತ್ ಪಟ್ನಾಯಕ್, ಭಾರತದ ವಿಜ್ಞಾನದಲ್ಲಿ ಎಡಪಂಥೀಯರು ಕುರಿತು ಪ್ರಬೀರ್ ಮುರಕಾಯಸ್ಥ, ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಇತಿಹಾಸದ ಕುರಿತು ಡಾ. ಕೆ.ಪ್ರಕಾಶ್ ತಮ್ಮ ನಿರೂಪಣೆ ಹಂಚಿಕೊಂಡಿದ್ದಾರೆ. ಈ ವಿಶ್ಲೇಷಣಾತ್ಮಕ ಲೇಖನಗಳ ಸಂಗ್ರಹವಾದ ಸುಮಾರು 80 ಪುಟಗಳ ಕಿರುಪುಸ್ತಕ ನೂರು ವರ್ಷದ ಕಮ್ಯುನಿಸ್ಟ್ ಚಳುವಳಿಯ ವಿಶಿಷ್ಟ ಕೊಡುಗೆಗಳ ಕುರಿತು ಸಮಗ್ರ ಚಿತ್ರಣವನ್ನು ನೀಡುತ್ತದೆ. ಈ ಪುಸ್ತಕದ ಬೆಲೆ ರೂ.70.
ಇವೆರಡು ಪುಸ್ತಕಗಳು ಪ್ರಕಟವಾಗಿದ್ದು ಇದನ್ನು ಖರೀದಿ ಮಾಡಲು ಆಸಕ್ತಿ ಇರುವವರು, ಪುಸ್ತಕಪ್ರೀತಿಯ ಬೆಂಗಳೂರಿನ ಅಂಗಡಿಯಲ್ಲಿ (4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು – 560 079) ಲಭ್ಯವಿರುತ್ತದೆ. ಅಂಚೆ ಮೂಲಕ ತರಿಸಿಕೊಳ್ಳುವ ಆಸಕ್ತಿ ಇರುವವರು – 80-23494488, 9036082005- ಈ ಫೋನ್ ನಂಬರುಗಳನ್ನು ಸಂಪರ್ಕಿಸಬಹುದು.