ಅಹ್ಮದ್ ನಗರ: ಮಹಾರಾಷ್ಟ್ರದ ಅಹ್ಮದ್ ನಗರದ ಸಿವಿಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಬೆಂಕಿ ಅವಘಡದಲ್ಲಿ 10 ಮಂದಿ ರೋಗಿಗಳ ಸಾವು ಸಂಭವಿಸಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ.
ಬೆಂಕಿ ಅನಾಹುತದಲ್ಲಿ ಸಾಕಷ್ಟು ಸಂಖ್ಯೆ ರೋಗಿಗಳು ಸಿಲುಕಿಕೊಂಡಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆಸ್ಪತ್ರೆಯ ಅಕ್ಕಪಕ್ಕದ ವಾರ್ಡ್‌ಗಳಿಗೆ ಬೆಂಕಿ ವ್ಯಾಪಿಸದಂತೆ ನಿಗಾ ವಹಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಘಟನೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಆಸ್ಪತ್ರೆಯ ಆಡಳಿತಾಧಿಕಾರಿಗಳು, ಸಿಬ್ಬಂದಿ ಸ್ಥಳೀಯರು ಮತ್ತು ರಕ್ಷಣಾ ತಂಡದ ಸಹಾಯದಿಂದ ಹಲವು ರೋಗಿಗಳನ್ನು ಬೇರೆ ಬೇರೆ ವಾರ್ಡುಗಳಿಗೆ ವರ್ಗಾಯಿಸಿದ್ದಾರೆ. ಸ್ಥಳಕ್ಕೆ ಅಹ್ಮದ್‌ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ಆಗಮಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಸಂದರ್ಭದಲ್ಲಿ ಐಸಿಯುನಲ್ಲಿ ಕನಿಷ್ಠ 20 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಅವಘಡ ಸುದ್ದಿ ಹೊರಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಕರು ಭಯ, ಆತಂಕದಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಹ್ಮದ್‌ನಗರ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಶಂಕರ್ ಮಿಸಾಲ್ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಐಸಿಯು ಬೆಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹುತಿಯಾಗಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.