ನವದೆಹಲಿ: ಇಬ್ಬರು ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ ಹತ್ತು ಸಂಸದರು ತನ್ನ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ ಸಂಸದರು ಪಕ್ಷದ ಹೈಕಮಾಂಡ್‌ನಿಂದ ಸೂಚನೆಯಂತೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರ ಸಭೆಯಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಎಲ್ಲಾ ಸಂಸದರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕೆಲಸ ಮಾಡಬೇಕು ಎಂದು ನಿರ್ಧರಿಸಲಾಯಿತು. ಮತ್ತೆ ಇಬ್ಬರು ಸಂಸದರು ರಾಜೀನಾಮೆ ಸಲ್ಲಿಸಲಿದ್ದು, ಅವರು ಸಂಸತ್ತಿಗೆ ಬರಲು ಸಾಧ್ಯವಾಗಲಿಲ್ಲವಾದ್ದರಿಂದ ಇಂದು ರಾಜೀನಾಮೆ ನೀಡಿಲ್ಲ, ಆದರೆ ಅವರು ಕೂಡಾ ಸಧ್ಯದಲ್ಲೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ನೆರೆ ಮತ್ತು ಬರಪೀಡಿತ ರಾಜ್ಯದ ಮುಖ್ಯಮಂತ್ರಿಗಳ ಮನವಿಗೆ ಕೇಂದ್ರ ತಲೆಕೆಡಿಸಿಕೊಂಡಿಲ್ಲ: ಖರ್ಗೆ ಅಸಮಾಧಾನ
ಪಕ್ಷದ ಹೈಕಮಾಂಡ್ ನಿರ್ಧಾರದ ನಂತರ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರೊಂದಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ರಾವ್ ಉದಯ್ ಪ್ರತಾಪ್ ಸಿಂಗ್, ರಾಕೇಶ್ ಸಿಂಗ್ ಮತ್ತು ರಿತಿ ಪಾಠಕ್ ಕೂಡ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಈ ಐವರು ನಾಯಕರು ಮಧ್ಯಪ್ರದೇಶದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ತೋಮರ್ ಮತ್ತು ಪಟೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿ ಪರಿಗಣಿಸಲಾಗುತ್ತಿದೆ.
ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ದಿಯಾ ಕುಮಾರಿ ಕೂಡ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲದೆ, ರಾಜಸ್ಥಾನ ಚುನಾವಣೆಯಲ್ಲಿ ಗೆದ್ದಿರುವ ಕಿರೋರಿ ಲಾಲ್ ಮೀನಾ ಕೂಡ ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಲಿಡ್ಕರ್ ರಾಯಭಾರಿಯಾಗಿ ಡಾಲಿ ಧನಂಜಯ್| ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ
ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ರಾಜ್ಯಾಧ್ಯಕ್ಷ ಅರುಣ್ ಸಾವೊ ಮತ್ತು ಗೋಮತಿ ಸಾಯಿ ಕೂಡ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರ ಜೊತೆಗೆ ಇನ್ನಿಬ್ಬರು ಸಂಸದರಾದ ಮಹಂತ್ ಬಾಲಕನಾಥ್ ಮತ್ತು ರೇಣುಕಾ ಸಿಂಗ್ ಅವರು ರಾಜೀನಾಮೆ ನೀಡಲು ಸಂಸತ್ತಿಗೆ ಬರಲು ಸಾಧ್ಯವಾಗಲಿಲ್ಲ ಆದರೆ ಅವರಿಬ್ಬರೂ ಸಧ್ಯದಲ್ಲೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಎಲ್ಲಾ ಸಂಸದರು ರಾಜೀನಾಮೆ ನೀಡುವ ಮೊದಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ರಾಜೀನಾಮೆ ಸಲ್ಲಿಸುವ ವೇಳೆ ಜೆಪಿ ನಡ್ಡಾ ಕೂಡಾ ಉಪಸ್ಥಿತರಿದ್ದರು. ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಕೂಡ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ವಿಡಿಯೊ ನೋಡಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್