ದಲಿತ ಎಂಬ ಕಾರಣಕ್ಕೆ ದೌರ್ಜನ್ಯ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್
ಬೆಂಗಳೂರು: ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸದನ ನಡೆಸುತ್ತಿರುವಾಗ ಅವರ ಮೇಲೆ ಹರಿದ ಪೇಪರ್ ಎಸೆದು ಬೀದಿ ಪುಂಡರಂತೆ ವರ್ತಿಸಿದ ಬಿಜೆಪಿಯ ಹತ್ತು ಶಾಸಕರನ್ನು ವಿಧಾನಸಭೆಯ ಉಳಿದ ಇನ್ನುಳಿದ ದಿನಗಳ ಅಧಿವೇಶನದಿಂದ ಬುಧವಾರ ಅಮಾನತುಗೊಳಿಸಲಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದ್ದು, ಈ ಪ್ರಸ್ತಾವಕ್ಕೆ ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಸದನದಲ್ಲಿ ಈ ಬಗ್ಗೆ ಪ್ರಕಟಿಸಿದ ಯು.ಟಿ. ಖಾದರ್, “ಬಿಜೆಪಿಯ ಸುನಿಲ್ ಕುಮಾರ್, ಆರ್. ಅಶೋಕ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ವೇದವ್ಯಾಸ್ ಕಾಮತ್, ಅರವಿಂದ ಬೆಲ್ಲದ್, ಡಾ. ಅಶ್ವತ್ಥ ನಾರಾಯಣ, ಉಮಾನಾಥ್ ಕೋಟ್ಯಾನ್ ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶ:ದಲಿತ ಬಾಲಕನನ್ನು ಥಳಿಸಿ, ಕೈಯಲ್ಲಿ ಮಲ ತೆಗೆಸಿದ ಧುರುಳರು
ಅಧಿವೇಶನದಲ್ಲಿ ಏನಾಯ್ತು?
ಸದನ ಪ್ರಾರಂಭವಾದಾಗಲೂ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಪ್ರತಿಪಕ್ಷ ನಾಯಕರ ಸಭೆಗೆ ಐಎಎಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ನಡುವೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಭಾಧ್ಯಕ್ಷ ಯುಟಿ ಖಾದರ್ ಅನುಪಸ್ಥಿತಿಯಲ್ಲಿ ಕಲಾಪಗಳ ಅಧ್ಯಕ್ಷತೆ ವಹಿಸಿದ್ದರು. ಈ ನಡುವೆಯೇ ಗೊಂದಲ ಉಂಟಾಗಿದ್ದು, ಸದನ ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ಕಾದಗಳನ್ನು ಹರಿದು ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದರು. ಗದ್ದಲದಿಂದ ರುದ್ರಪ್ಪ ಲಮಾಣಿ ಅವರನ್ನು ರಕ್ಷಿಸಲು ಅಸೆಂಬ್ಲಿ ಮಾರ್ಷಲ್‌ಗಳು ಪೀಠವನ್ನು ಸುತ್ತುವರೆದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು, “ದಲಿತ ಸಿಕ್ಕಿದ್ದಾರೆ ಎಂದು ದೌರ್ಜನ್ಯ ಎಸಗುತ್ತಿದ್ದು, ಇದು ಸರಿಯಲ್ಲ” ಎಂದು ಹೇಳಿದರು. ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರು, ಧರಣಿ ಕೈಬಿಟ್ಟು ಸ್ವಸ್ಥಾನಗಳಿಗೆ ತೆರಳುವಂತೆ ಮಾಡಿಕೊಂಡ ಮನವಿಗೆ ಪ್ರತಿಪಕ್ಷಗಳ ಶಾಸಕರು ಕಿವಿಗೊಡದಿದ್ದಾಗ ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದ ಹಾಗೂ ಸಭಾಧ್ಯಸಕ್ಷರ ಪೀಠಕ್ಕೆ ಅಗೌರವ ತೋರಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಅದಾಗ್ಯೂ ಎಂದು ಉಪ ಸ್ಪೀಕರ್ ಮನವಿಗೆ ಬೆಲೆ ನೀಡದೆ ಕಾಗದಗಳನ್ನು ಹರಿದು ಸಭಾಧ್ಯಕ್ಷರತ್ತ ಬಿಜೆಪಿ ಸದಸ್ಯರು ಎಸೆದು ಬೀದಿ ಪುಂಡರಂತೆ ವರ್ತಿಸಿದರು. ಇದರ ನಂತರ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸದನವನ್ನು ಮುಂದೂಡಿದ್ದಾರೆ. ನಂತರ ಪ್ರಾರಂಭವಾದ ಸದನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಸದನಕ್ಕೆ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿದರು.
ಇದನ್ನೂ ಓದಿ: ಆರ್ಥಿಕ ಹೊರೆ ನಿಭಾಯಿಸಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತ : ಸಿಎಂ ಸಿದ್ದರಾಮಯ್ಯ
ಘಟನೆ ಬಗ್ಗೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ರಾಜಕೀಯ ಅಸ್ತಿತ್ವಕ್ಕಾಗಿ ಗಲಾಟೆ ಮಾಡುವುದು ಸರಿಯಲ್ಲ. ಪೀಠದ ಗೌರವ ಉಳಿಸುವ ಕೆಲಸ ಆಗಬೇಕು. ಸದಸ್ಯರ ಮಾತುಗಳನ್ನು ಕೇಳಲು ನಾವು ಸಿದ್ದ. ಪೀಠಕ್ಕೆ ಅಗೌರವ ತೋರಿಸುವ ಮೂಲಕ ಕಪ್ಪು ಚುಕ್ಕೆ. ಮತದಾರರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ರಾಜ್ಯದ ಜನರು ನಿಮ್ಮನ್ನು ಸಹಿಸುದಿಲ್ಲ ಎಂದರು.
ಸ್ಪೀಕರ್ ಆದೇಶವನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕ ಬಸವರಾಜ್ ಬೊಮ್ಮಾಯಿ ವಿರೋಧಿಸಿದ್ದಾರೆ. “ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ಸ್ಪೀಕರ್ ಸ್ಥಾನವನ್ನು ದುರುಪಯೋಗ ಮಾಡುವ ಪ್ರಯತ್ನ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರೂ ಯಾವುದೇ ಚರ್ಚೆಯಿಲ್ಲದೆ ಐದು ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಸದನವನ್ನು ಮುಂದೂಡಿದ ನಂತರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 24 ರಾಜ್ಯಗಳಿಗೆ ನೀಡಿದ್ದ ಮನೆಗಳನ್ನು ಯುಪಿಗೆ ನೀಡಿದ ಒಕ್ಕೂಟ ಸರ್ಕಾರ!
ವಿಡಿಯೊ ನೋಡಿ: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 10 ಶಾಸಕರ ಅಮಾನತು Janashakthi Media